Asianet Suvarna News Asianet Suvarna News

ಸಮುದ್ರದಾಳದಿಂದ ಕೇಳಿಬಂದ ಸದ್ದು: ಟೈಟಾನಿಕ್ ಅವಶೇಷ ನೋಡಲು ಹೊರಟವರು ಜೀವಂತ ?

ಟೈಟಾನಿಕ್‌ ಅವಶೇಷಗಳನ್ನು ನೋಡುವ ಪ್ರವಾಸಕ್ಕೆ ತೆರಳಿ 3 ದಿನಗಳ ಹಿಂದೆ ದಿಢೀರ್‌ ನಾಪತ್ತೆಯಾದ ಸಬ್‌ಮರೀನ್‌ ಪತ್ತೆಗಾಗಿ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ನ ತಜ್ಞರ ತಂಡ ಸತತ 4ನೇ ದಿನವಾದ ಬುಧವಾರವೂ ಕೂಡಾ ಹುಡುಕಾಟ ಮುಂದುವರೆಸಿದೆ.

tourist who went to see the remains of the Titanic alive sound heard from the deep sea Missing survivors clue Search intensified akb
Author
First Published Jun 22, 2023, 8:04 AM IST

ವಾಷಿಂಗ್ಟನ್‌: ಟೈಟಾನಿಕ್‌ ಅವಶೇಷಗಳನ್ನು ನೋಡುವ ಪ್ರವಾಸಕ್ಕೆ ತೆರಳಿ 3 ದಿನಗಳ ಹಿಂದೆ ದಿಢೀರ್‌ ನಾಪತ್ತೆಯಾದ ಸಬ್‌ಮರೀನ್‌ ಪತ್ತೆಗಾಗಿ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ನ ತಜ್ಞರ ತಂಡ ಸತತ 4ನೇ ದಿನವಾದ ಬುಧವಾರವೂ ಕೂಡಾ ಹುಡುಕಾಟ ಮುಂದುವರೆಸಿದೆ. ಈ ನಡುವೆ ಹುಡುಕಾಟದಲ್ಲಿ ತೊಡಗಿರುವ ತಂಡವೊಂದು ಸಮುದ್ರದಾಳದಿಂದ ಪ್ರತಿ 30 ನಿಮಿಷಕ್ಕೆ ‘ಬಡಿತದ ಶಬ್ದ’ವ​ನ್ನು ಪತ್ತೆ ಮಾಡಿದೆ. ಹೀಗಾಗಿ ಸಬ್‌ಮರೀನ್‌ನಲ್ಲಿದ್ದ ಐವರು ಬದುಕುಳಿದಿರುವ ಸಣ್ಣದೊಂದು ಆಶಾಭಾವನೆ ವ್ಯಕ್ತವಾಗಿದೆ.

ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಆದರೆ ಈಗ 40 ತಾಸಿ​ನಷ್ಟುಅಮ್ಲ​ಜನಕ ಮಾತ್ರ ಬಾಕಿ ಇರ​ಬ​ಹು​ದು. ಶೀಘ್ರವೇ ಪ್ರವಾಸಿ ಸಬ್‌ಮರೀನ್‌ ಪತ್ತೆಯಾಗದೇ ಹೋದಲ್ಲಿ ಅದರಲ್ಲಿದ್ದವರು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಅಮೆರಿಕ, ಸ್ಪೇನ್‌, ಕೆನಡಾದ ಸಬ್‌ಮರೀನ್‌, ವಿಮಾನಗಳನ್ನು ಬಳಸಿಕೊಂಡು ಭಾರೀ ಪ್ರಮಾಣದಲ್ಲಿ ಹುಡುಕಾಟ ಮುಂದುವರೆಸಲಾಗಿದೆ. ಈ ನಡುವೆ ಹುಡುಕಾಟದಲ್ಲಿ ತೊಡಗಿದ್ದ ಕೆನಡಾದ ಪಿ3 ವಿಮಾನಕ್ಕೆ ಸಮುದ್ರದೊಳಗಿಂತ ಪದೇ ಪದೇ ಸದ್ದೊಂದು ಕೇಳಿಬರುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಇದೀಗ ತಪಾಸಣೆಯನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ.

ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?

ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸಿಗರ ಹೊತ್ತಯ್ದು ಬಳಿಕ ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದು, ಅದರಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ.  1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿದ್ದು,  ಈ ನೌಕೆಯ ಪತ್ತೆಗಾಗಿ ಭಾರೀ ಹುಡುಕಾಟ ನಡೆಯುತ್ತಿದೆ. 

ಟೈಟಾನಿಕ್‌ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. . ಜೂ.18ರಂದು ಸಬ್‌ಮರೀನ್‌ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ಈ ಹಡಗಿನಲ್ಲಿದ್ದ ಎಲ್ಲಾ ಐದು ಜನರನ್ನು ರಕ್ಷಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಈ ಪ್ರವಾಸ ಆಯೋಜಿಸಿರುವ ಪ್ರವಾಸಿ ಸಂಸ್ಥೆ ಓಷನ್‌ಗೇಟ್ ಹೇಳಿದೆ. ಈ ಸಮುದ್ರದಾಳದ ಪ್ರವಾಸ ಯೋಜನೆಗಾಗಿ ಸಂಸ್ಥೆ ಒಬ್ಬರಿಂದ 250,000 ಡಾಲರ್ ಹಣ ಪಡೆದಿದೆ.  ನಾಪತ್ತೆಯಾದ ಜಲಂತರ್ಗಾಮಿ ನೌಕೆಗಾಗಿ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು, ಯುಎಸ್ (US) ಮತ್ತು ಕೆನಡಾದ ನೌಕಾಪಡೆಗಳು (Canadian navies) ಮತ್ತು ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ವಾಣಿಜ್ಯ ಸಂಸ್ಥೆಗಳು  ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರ ಕರೆದೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆ

1912 ರಲ್ಲಿ ಮುಳುಗಿದ ಟೈಟಾನಿಕ್  ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ  (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ.

ಇತ್ತ ಈ ಜಲಂತರ್ಗಾಮಿ ನೌಕೆಯಲ್ಲಿ ಪಾಕಿಸ್ತಾನ ಮೂಲದ ಬ್ರಿಟನ್‌ನಲ್ಲಿ ನೆಲೆಯಾಗಿರುವ ಪ್ರಸಿದ್ಧ ಉದ್ಯಮಿ  ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್  ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ಹೊರಟಿದ್ದರು. ಈ ವಿಚಾರವನ್ನು ಅವರ ಕುಟುಂಬ ದೃಢಪಡಿಸಿದೆ. ಇವರಿಬ್ಬರ ಜೊತೆಗೆ, ಬ್ರಿಟಿಷ್ ಸಾಹಸಿ ಹಮೀಶ್ ಹಾರ್ಡಿಂಗ್ (Hamish Harding) ಕೂಡ ಈ ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದಾರೆ. ನ್ಯೂಫೌಂಡ್‌ಲ್ಯಾಂಡ್‌ನಲ್ಲಿ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದೆನಿಸಿದ ಚಳಿಗಾಲದ ಕಾರಣ, ಈ ಪ್ರವಾಸವೂ 2023 ರಲ್ಲಿ ಟೈಟಾನಿಕ್‌ಗೆ ತೆರಳುತ್ತಿರುವ ಮೊದಲ ಮತ್ತು ಏಕೈಕ ಮಾನವಸಹಿತ ನೌಕೆ ಆಗಿರಬಹುದು ಎಂದು ಅವರು ಪ್ರವಾಸದ ಆರಂಭದಲ್ಲಿ ಹಾಕಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾರ್ಡಿಂಗ್  ಹೇಳಿದ್ದರು. 

Follow Us:
Download App:
  • android
  • ios