1976ರಲ್ಲಿ ಪ್ಯಾಲೆಸ್ತೀನ್‌ ಮತ್ತು ಜರ್ಮನ್‌ ಉಗ್ರರು ಏರ್‌ ಫ್ರಾನ್ಸ್‌ ವಿಮಾನವನ್ನು ಅಪಹರಿಸಿ, ಇಸ್ರೇಲಿ ಪ್ರಯಾಣಿಕರನ್ನು ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳಾಗಿರಿಸಿಸಿದರು ಇಸ್ರೇಲ್‌ ಸೇನೆ 'ಆಪರೇಷನ್‌ ಎಂಟೆಬ್ಬೆ' ಎಂಬ ರಣರೋಚಕ ಕಾರ್ಯಾಚರಣೆ ನಡೆಸಿ, ಎಲ್ಲಾ ಸವಾಲುಗಳನ್ನು ರಕ್ಷಿಸಿದ ರಣರೋಚಕ ಕತೆಯಿದು.

ನಚಿಕೇತನ್‌ ಎನ್‌

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೆಲ್‌ ಅವೀವ್‌ನಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಿ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ 7 ಪ್ಯಾಲೆಸ್ತೀನ್‌, ಜರ್ಮನ್‌ ಉಗ್ರರನ್ನು ಸದೆಬಡಿದ ಇಸ್ರೇಲ್‌ನ ಅತ್ಯಂತ ರಣರೋಚಕ ಕಾರ್ಯಾಚರಣೆಯೇ ‘ಆಷರೇಷನ್‌ ಎಂಟೆಬ್ಬೆ.’ ಇಸ್ರೇಲ್‌ನ ಧೈರ್ಯ, ನಿಖರ ಯೋಜನೆ, ಗುಪ್ತಚರ ಸಾಮರ್ಥ್ಯ ಮತ್ತು ಮಾನವ ಜೀವ ರಕ್ಷಣೆಗೆ ನೀಡಿದ ಆದ್ಯತೆಯ ಪ್ರತೀಕ ಈ ಆಪರೇಷನ್‌. 1976ರ ಜುಲೈ 3- 4ರಂದು ನಡೆದ ‘ಆಪರೇಷನ್‌ ಎಂಟೆಬ್ಬೆ’ಗೆ 50 ವರ್ಷ ತುಂಬಿದೆ. ವಿಶ್ವವನ್ನೇ ನಿಬ್ಬೆರಗಾಗಿಸಿದ ಈ ಸಾಹಸ ಕಾರ್ಯಾಚರಣೆ ಹೇಗೆ ನಡೆಯಿತು? ಇಸ್ರೇಲ್‌ ಹೇಗೆ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿತು? ಎಂಬ ಮಾಹಿತಿ ಇಲ್ಲಿದೆ.

ವಿಮಾನದ ಒಳಗೇ ಇದ್ದರು ಅಪಹರಣಕಾರರು

1976ರ ಜೂ. 27ರಂದು 248 ಪ್ರಯಾಣಿಕರು, 12 ಸಿಬ್ಬಂದಿ ಸೇರಿ 260 ಜನರನ್ನು ಹೊತ್ತು ಇಸ್ರೇಲ್‌ನ ಟೆಲ್‌ ಅವೀವ್‌ನಿಂದ ಫ್ರಾನ್ಸ್‌ನತ್ತ \Bಏರ್‌ ಫ್ರಾನ್ಸ್‌ ವಿಮಾನ ಟೇಕಾಫ್‌ ಆಗಿತ್ತು. \Bಗ್ರೀಸ್‌ನ ಅಥೆನ್ಸ್‌ ಹೊರಟ ಬಳಿಕ ವಿಮಾನದ ಒಳಗೇ ಇದ್ದ ನಾಲ್ವರು ಉಗ್ರರು ಅದನ್ನು ಅಪಹರಿಸಿದರು. ಅದರಲ್ಲಿ ಇಬ್ಬರು ಪ್ಯಾಲೆಸ್ತೀನ್‌ ಉಗ್ರ ಸಂಘಟನೆಯ ಸದಸ್ಯರಾಗಿದ್ದು, ಉಳಿದಿಬ್ಬರು ಜರ್ಮನ್ ಉಗ್ರ ಸಂಘಟನೆಯ ಸದಸ್ಯರಾಗಿದ್ದರು. ಉಗ್ರರು ಮೊದಲು ವಿಮಾನವನ್ನು ಲಿಬಿಯಾದ ಬೆಂಗಾಜಿ ಏರ್‌ಪೋರ್ಟ್‌ಗೆ ಒಯ್ದರು. ಅಲ್ಲಿ ವಿಮಾನಕ್ಕೆ ಇಂಧನ ತುಂಬಿಸಿ ಜೂ.28ರಂದು ಉಗಾಂಡದ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು. ಅಲ್ಲಿ ಮತ್ತೆ 3 ಉಗ್ರರು ಅವರನ್ನು ಸೇರಿಕೊಂಡರು. ಉಗಾಂಡದ ಅಂದಿನ ಸರ್ವಾಧಿಕಾರಿ ಇದಿ ಅಮೀನ್‌ ಹಾಗೂ ಉಗಾಂಡ ಸೇನೆಯ ಬೆಂಬಲ ಉಗ್ರರಿಗೆ ಬಲ ತುಂಬಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಉಗ್ರರು ವಿಮಾನ ನಿಲ್ದಾಣದ ಲಾಂಜ್‌ಗೆ ಸ್ಥಳಾಂತರಿಸಿ ಒತ್ತೆಯಾಳಾಗಿಸಿಕೊಂಡರು.

ದಿನಕ್ಕೊಬ್ಬರನ್ನು ಕೊಲ್ಲುವ ಬೆದರಿಕೆ

ಇಸ್ರೇಲ್‌ ಸೇರಿ ವಿಶ್ವದ ವಿವಿಧ ಜೈಲಿನಲ್ಲಿರುವ 53 ಮಂದಿ ಪ್ಯಾಲೆಸ್ತೀನ್‌ ಉಗ್ರರನ್ನು ವಾರದೊಳಗೆ ಬಿಡುಗಡೆ ಮಾಡಬೇಕು. ಜೊತೆಗೆ 5 ಮಿಲಿಯನ್‌ ಡಾಲರ್‌ಗಳನ್ನು ನೀಡಬೇಕು. ಒಪ್ಪದಿದ್ದರೆ, ದಿನಕ್ಕೆ ಒಬ್ಬೊಬ್ಬ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಇಸ್ರೇಲ್‌ಗೆ ಅಪಹರಣಕಾರರು ಎಚ್ಚರಿಕೆ ನೀಡಿದರು. ವಿಮಾನ ಹೈಜಾಕ್‌ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಇಸ್ರೇಲ್‌ ಪ್ರಧಾನಿ ಯಿಟ್‌ಸಾಕ್ ರಾಬಿನ್ ಸಭೆ ಮೇಲೆ ಸಭೆ ನಡೆಸಿದರು. ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್‌ ಜೊತೆ ಇಸ್ರೇಲ್‌ನ ತಂಡ ಚರ್ಚೆ ನಡೆಸಿತು. ಉಗ್ರರು ಬೇರೆ ಬೇರೆ ದೇಶದ ಜನರನ್ನೂ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ, ಅವರಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇದಿ ಅಮೀನ್‌ಗೆ ಮನವರಿಕೆ ಮಾಡಿಕೊಟ್ಟಿತು. ಇದಿ ಅಮೀನ್‌ ಸೂಚನೆ ಮೇರೆಗೆ ಬೇರೆ ದೇಶಗಳಿಗೆ ಸೇರಿದ ಯಹೂದಿಯೇತರ 147 ಒತ್ತೆಯಾಳುಗಳನ್ನು ಉಗ್ರರನ್ನು ಬಿಡುಗಡೆ ಮಾಡಿದರು. ಆದರೆ ಇಸ್ರೇಲ್‌ನ 106 ಜನರನ್ನು ಮಾತ್ರ ವಶದಲ್ಲಿಟ್ಟುಕೊಂಡರು.

ಕಾರ್ಯಾಚರಣೆಗೆ ಮೊಸಳೆ ಅಡ್ಡಿ!

ಈಜಿಪ್ಟ್‌, ಪ್ಯಾಲೆಸ್ತೀನ್‌ ನಾಯಕರಿಂದ ಮನವೊಲಿಕೆ ಪ್ರಯತ್ನವನ್ನು ಇಸ್ರೇಲ್‌ ನಡೆಸಿತಾದರೂ ಪ್ರಯೋಜನವಾಗಲಿಲ್ಲ. ಇಸ್ರೇಲ್‌ ಮುಂದೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿತು. ಆದರೆ ಅದು ಸುಲಭ ಆಗಿರಲಿಲ್ಲ. ಇಸ್ರೇಲ್‌ನಿಂದ ಉಗಾಂಡಕ್ಕೆ ಬರೋಬ್ಬರಿ 3500 ಕಿ.ಮೀ. ದೂರ. ವಿಮಾನಕ್ಕೆ ಒಂದೇ ಸಲ ಇಂಧನ ಭರ್ತಿ ಮಾಡಿಸಿಕೊಂಡು ಅಷ್ಟು ದೂರ ಹೋಗಿ ಬರುವುದು ಆಗದ ಮಾತಾಗಿತ್ತು. ಹೀಗಾಗಿ ಎಂಟೆಬ್ಬೆ ಬಳಿಯ ವಿಕ್ಟೋರಿಯಾ ಸರೋವರದಲ್ಲಿ ಇಸ್ರೇಲಿ ಕಮಾಂಡೋ ಪಡೆಗಳನ್ನು ಇಳಿಸಿ ಅಲ್ಲಿಂದ ಬೋಟ್‌ ಮುಖಾಂತರ ಎಂಟೆಬ್ಬೆಗೆ ಹೋಗುವ ಯೋಜನೆಯನ್ನು ರೂಪಿಸಲಾಯಿತು. ಆದರೆ ಆ ಸರೋವರದಲ್ಲಿ ಮೊಸಳೆ ಇದ್ದವು. ಕಮಾಂಡೋಗಳಿಗೆ ತೊಂದರೆ ಆಗುತ್ತೆಂದು ಆ ಯೋಜನೆಯನ್ನೇ ಇಸ್ರೇಲ್‌ ಕೈ ಬಿಟ್ಟಿತು.

ಉಗಾಂಡ ರೀತಿಯ ಕಾರು ತಂದರು 

ಇಸ್ರೇಲ್‌ ಸೇನೆ ಬೇರೆ ಯೋಜನೆ ಸಿದ್ಧಪಡಿಸುಷ್ಟರಲ್ಲಿ ಉಗ್ರರು ನೀಡಿದ್ದ ಒಂದು ವಾರದ ಗಡುವು ಮುಗಿಯಲು ಕೇವಲ ಒಂದೇ ದಿನ ಬಾಕಿ ಇತ್ತು. ಉಗಾಂಡ ತಲುಪುವ ಮೊದಲು ಲಿಬಿಯಾದ ಬೆಂಗಾಜಿ ವಿಮಾನ ನಿಲ್ದಾಣದಲ್ಲಿ ಉಗ್ರರು ಗರ್ಭಿಣಿಯೊಬ್ಬರನ್ನು ಇಳಿಸಿ ಹೋಗಿದ್ದರು. ಆಕೆ ಹಾಗೂ ಉಗ್ರರಿಂದ ಬಿಡುಗಡೆಯಾದ ಯಹೂದಿಯೇತರ ಪ್ರಯಾಣಿಕರನ್ನು ಸಂಪರ್ಕಿಸಿದ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌, ಉಗ್ರರ ಸಂಖ್ಯೆ ಹಾಗೂ ಅವರ ಬಳಿ ಇರುವ ಶಸ್ತ್ರಾಸ್ತ್ರಗಳ ವಿವರ ಸಂಗ್ರಹಿಸಿತು. ಉಗಾಂಡ ಏರ್‌ಪೋರ್ಟ್‌ ನಿರ್ಮಾಣ ಕಂಪನಿಯ ಜತೆಗೂ ಚರ್ಚಿಸಿ, ಅಲ್ಲಿನ ವಿನ್ಯಾಸದ ಮಾಹಿತಿ ಪಡೆಯಿತು. ಉಗಾಂಡ ಸೇನೆ ಹಾಗೂ ಉಗ್ರರ ಕಣ್ತಪ್ಪಿಸಿ ಕಾರ್ಯಾಚರಣೆ ನಡೆಸುವ ಪ್ಲಾನ್‌ ಸಿದ್ಧವಾಯಿತು. ಇದಿ ಅಮೀನ್‌ ಕಪ್ಪು ಬಣ್ಣದ ಮರ್ಸಿಡಿಸ್‌ ಬೆಂಜ್‌ ಕಾರು ಬಳಸುತ್ತಿದ್ದ. ಆತನ ಬೆಂಗಾವಲು ಪಡೆ ಲ್ಯಾಂಡ್‌ ರೋವರ್‌ನಲ್ಲಿ ಓಡಾಡುತ್ತಿತ್ತು. ಅದೇ ಮಾದರಿಯ ಕಾರುಗಳನ್ನು ಖರೀದಿಸಿದ ಇಸ್ರೇಲ್‌, ತನ್ನ ದೇಶದ ಏರ್‌ಪೋರ್ಟ್‌ನಲ್ಲಿ ತಾಲೀಮು ಆರಂಭಿಸಿತು. ಅಷ್ಟರಲ್ಲಿ ಇಸ್ರೇಲ್‌ ವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳಲು ತನ್ನ ವಿಮಾನ ನಿಲ್ದಾಣದಲ್ಲಿ ಅವಕಾಶ ಕೊಡುವುದಾಗಿ ಆಫ್ರಿಕಾದ ಕೀನ್ಯಾ ಮುಂದೆ ಬಂತು. ಇಸ್ರೇಲ್‌ ಕೊಂಚ ನಿರಾಳವಾಯಿತು.

ಈಗಿನ ಇಸ್ರೇಲ್‌ ಪಿಎಂ ಅಣ್ಣನೇ ಲೀಡರ್‌

ಕಾರ್ಯಾಚರಣೆ ನಡೆಸಲು ಇಸ್ರೇಲ್‌ನ 100 ವಿಶೇಷ ಕಮಾಂಡೋಗಳ ಪಡೆ ಸಜ್ಜಾಯಿತು. \Bಈ ಪೈಕಿ 29 ಮಂದಿಯನ್ನು ಒಳಗೊಂಡ ‘ಅಸಾಲ್ಟ್‌ ತಂಡ’ ಕಪ್ಪು ಬಣ್ಣದ ಬೆಂಜ್‌ ಹಾಗೂ ಲ್ಯಾಂಡ್‌ ರೋವರ್‌ ಕಾರನ್ನು ಬಳಸಿ ಉಗಾಂಡದ ಸೈನಿಕರನ್ನು ತಡೆದು ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ನುಗ್ಗಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ತಂಡದ ನೇತೃತ್ವವನ್ನು ಇಂದಿನ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಅಣ್ಣ ಲೆಫ್ಟಿನೆಂಟ್‌ ಕರ್ನಲ್‌ ಯೋನತನ್ ನೆತನ್ಯಾಹು ಅವರು ವಹಿಸಿದ್ದರು. ಮತ್ತೊಂದು ತಂಡ ಇಸ್ರೇಲ್‌ ವಿಮಾನಗಳ ರಕ್ಷಣೆ ಹಾಗೂ ಒತ್ತೆಯಾಳುಗಳನ್ನು ವಿಮಾನಕ್ಕೆ ಹತ್ತಿಸಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು.

ತೀರಾ ಕೆಳಮಟ್ಟದಲ್ಲಿ ವಿಮಾನ ಹಾರಾಟ

ಈಜಿಪ್ಟ್‌ನ ಶರ್ಮ್‌ ಎಲ್‌ ಶೇಕ್‌ ಪ್ರದೇಶದಿಂದ ಇಸ್ರೇಲಿ ಕಮಾಂಡೋಗಳು ಆಪರೇಷನ್‌ ಆರಂಭಿಸಿದರು. ಬೇರೆ ದೇಶದ ರಾಡಾರ್‌ಗಳಿಗೆ ಕಾಣಬಾರದು ಎಂದು ಕೆಂಪು ಸಮುದ್ರದ ಮೇಲೆ ಕೇವಲ 100 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿ, ಅಲ್ಲಿಂದ ಕೀನ್ಯಾದ ನೈರೋಬಿ ವಿಮಾನ ನಿಲ್ದಾಣಕ್ಕೆ ತಲುಪಿದರು. ಅಲ್ಲಿ ಸಿ-130 ಹರ್ಕ್ಯುಲಸ್ ಮಾದರಿಯ 4 (ಕಾರು, ಯೋಧರನ್ನು ತುಂಬಿದ್ದ) ವಿಮಾನಗಳಿಗೆ ಇಂಧನವನ್ನು ತುಂಬಿಸಿಕೊಳ್ಳಲಾಯಿತು. ಜು.4ರ ರಾತ್ರಿ ಇಸ್ರೇಲ್‌ನ ಮೊದಲ ವಿಮಾನ ಉಗಾಂಡ ಗಡಿ ದಾಟಿ ರಾತ್ರಿ 11 ಗಂಟೆಗೆ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಯೋನತನ್ ನೆತನ್ಯಾಹು ನೇತೃತ್ವದ ತಂಡ ಉಗಾಂಡ ಸೇನೆಯ ರೀತಿ ವೇಷ ತೊಟ್ಟು ಇದಿ ಅಮೀನ್‌ ಬಳಸುತ್ತಿದ್ದ ಕಪ್ಪು ಬಣ್ಣದ ಬೆಂಜ್‌ ಕಾರಲ್ಲಿ ಕೆಳಗೆ ಇಳಿಯಿತು. ಆದರೆ ಅವರಿಗೆ ಅಲ್ಲಿ ಒಂದು ಶಾಕ್‌ ಕಾದಿತ್ತು.

ಗುಂಡಿನ ದಾಳಿ- ಪ್ರತಿದಾಳಿ

ಇದಿ ಅಮೀನ್‌ ಕೆಲ ದಿನಗಳ ಹಿಂದೆ ತಮ್ಮ ಕಪ್ಪು ಬಣ್ಣದ ಕಾರನ್ನು ಬದಲಿಸಿ ಅದೇ ಮಾದರಿಯ ಬಿಳಿ ಬಣ್ಣದ ಕಾರನ್ನು ಖರೀದಿಸಿದ್ದರು. ಈ ವಿಚಾರ ಇಸ್ರೇಲ್‌ ಕಮಾಂಡೋಗಳಿಗೆ ತಿಳಿದಿರಲಿಲ್ಲ. ಏಮಾರಿದ್ದರು! ಪರಿಣಾಮವಾಗಿ ಉಗಾಂಡದ ಸೈನಿಕರು ಇಸ್ರೇಲ್‌ ಸೈನಿಕರ ಕಾರನ್ನು ತಡೆದರು. ಆಗ ಇಸ್ರೇಲಿ ಸೈನಿಕರು ಹಾಗೂ ಉಗಾಂಡದ ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಅಷ್ಟರಲ್ಲಿ ಇಸ್ರೇಲ್‌ನ 3 ವಿಮಾನಗಳು ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ಇಳಿದವು. ಇಸ್ರೇಲಿ ಕಮಾಂಡೋಗಳು ಮತ್ತು ಉಗಾಂಡ ಸೈನಿಕರ ಮಧ್ಯೆ ಮತ್ತಷ್ಟು ಸಂಘರ್ಷ ಏರ್ಪಟ್ಟಿತು. ಆ ವೇಳೆ ಲೆಫ್ಟಿನೆಂಟ್‌ ಕರ್ನಲ್‌ ನೆತನ್ಯಾಹು ಅವರು ಇದಿ ಅಮೀನ್‌ನ ಮಗ ಜಾಫರ್ ಅಮೀನ್‌ನ ಗುಂಡೇಟಿಗೆ ತಮ್ಮ ಪ್ರಾಣವನ್ನು ಅರ್ಪಿಸಬೇಕಾಯಿತು.

ಇನ್ನುಳಿದ ಕಮಾಂಡೋಗಳು ಎಂಟೆಬ್ಬೆ ವಿಮಾನ ನಿಲ್ದಾಣದ ಲಾಂಜ್‌ಗೆ ನುಗ್ಗಿ ಅಪಹರಣಕಾರರ ಮೇಲೆ ದಾಳಿ ಶುರು ಮಾಡಿದರು. ಈ ಘರ್ಷಣೆಯಲ್ಲಿ ಇಸ್ರೇಲಿ ಕಮಾಂಡೋಗಳ ಗುಂಡಿಗೆ ಇಬ್ಬರು ಒತ್ತೆಯಾಳುಗಳು ಹಾಗೂ ಉಗ್ರರ ಗುಂಡೇಟಿಗೆ ಓರ್ವ ಒತ್ತೆಯಾಳು ಬಲಿಯಾದರು. ಇಸ್ರೇಲಿ ಕಮಾಂಡೋಗಳು 7 ಉಗ್ರರನ್ನು ಸದೆ ಬಡಿದು ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿ ವಿಮಾನದಲ್ಲಿ ಕೂರಿಸಿ ಇಸ್ರೇಲ್‌ಗೆ ಸುರಕ್ಷಿತವಾಗಿ ತಲುಪಿದರು. 106 ಒತ್ತೆಯಾಳುಗಳ ಪೈಕಿ 4 ಜನ ಹತ್ಯೆಯಾಗಿದ್ದರು. ಆಪರೇಷನ್‌ ಎಂಟೆಬ್ಬೆ ಯಶಸ್ವಿಯಾಯಿತು. ಇಸ್ರೇಲ್‌ನ ಈ ಸಾಹಸ ಕಾರ್ಯಾಚರಣೆಗೆ ಇಡೀ ವಿಶ್ವವೇ ಆ ದೇಶವನ್ನು ಕೊಂಡಾಡಿತು.