ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ನಲ್ಲಿ ಭಾರತೀಯ ಪ್ರವಾಸಿಗರೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದೆ..

ಥೈಲ್ಯಾಂಡ್‌ನ ಫುಕೆಟ್ ವಿದೇಶಿ ಪ್ರವಾಸಿಗರಿಗೆ ಫೇಮಸ್ ಸ್ಪಾಟ್‌, ಥೈಲ್ಯಾಂಡ್‌ನ ದ್ವೀಪವಾದ ಇಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಹಲವು ಆಕರ್ಷಣೆಗಳಿವೆ. ತನ್ನ ಸುಂದರವಾದ ಕಡಲತೀರಗಳು, ಸದಾ ಬೆಳಗಿನಂತೆ ಇರುವ ಆಕರ್ಷಕ ನೈಟ್ ಲೈಫ್‌, ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಆಕರ್ಷಣೆಗಳಿಗೆ ಈ ಫುಕೆಟ್ ಹೆಸರುವಾಸಿಯಾಗಿದೆ. ಇದು ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಅದರ ರೋಮಾಂಚಕ ವಾತಾವರಣ, ಪ್ರಾಚೀನ ದೇವಾಲಯಗಳು ಮತ್ತು ವಿಶಿಷ್ಟ ಸಾಂಸ್ಕೃತಿಕ ಅನುಭವಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮತ್ತೊಂದು ಆಕರ್ಷಣೆಗಳಲ್ಲಿ ಕಾಡುಪ್ರಾಣಿಗಳನ್ನು ಸಾಕುಪ್ರಾಣಿಗಳಂತೆ ಸಾಕಿ ಪ್ರವಾಸಿಗರಿಗೆ ಅವುಗಳ ಪ್ರದರ್ಶನ ಹಾಗೂ ಅವುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡುವುದು ಕೂಡ ಒಂದಾಗಿದೆ.

ಭಾರತ ಮಾತ್ರವಲ್ಲದೇ ಹಲವು ದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದೇ ರೀತಿ ಇಲ್ಲಿರುವ ಟೈಗರ್ ಕಿಂಗ್‌ಡಮ್‌ಗೆ ಭಾರತೀಯ ಪ್ರವಾಸಿಗರೊಬ್ಬರು ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಹುಲಿಯೊಂದು ಆ ಪ್ರವಾಸಿಗನ ಮೇಲೆ ದಾಳಿ ನಡೆಸಿದ ಅನಿರೀಕ್ಷಿತ ಘಟನೆ ನಡೆದಿದ್ದು, ನೋಡುಗರನ್ನು ಭಯಭೀತಗೊಳಿಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ಗೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದ್ದು, ಪ್ರವಾಸದ ಮೋಜಿನ ಕ್ಷಣ ಭಯಾನಕ ದುರಂತವಾಗಿ ಬದಲಾಗಿತ್ತು.

ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಸಿದ್ಧಾರ್ಥ್ ಶುಕ್ಲಾ ಎಂಬುವವರು ಪೋಸ್ಟ್ ಮಾಡಿದ್ದು, ಥೈಲ್ಯಾಂಡ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ ಎಂದು ತೋರುತ್ತದೆ. ಹುಲಿಗಳನ್ನು ಸಾಕುಪ್ರಾಣಿಗಳಂತೆ ಸಾಕುವುದು ಮತ್ತು ಜನರು ಸೆಲ್ಫಿ ತೆಗೆದುಕೊಳ್ಳುವುದು, ಅವುಗಳಿಗೆ ಆಹಾರ ನೀಡುವುದು ಇತ್ಯಾದಿಗಳನ್ನು ಮಾಡುವ ಸ್ಥಳಗಳಲ್ಲಿ ಇದು ಒಂದು ಎಂದು ಅವರು ಬರೆದುಕೊಂಡಿದ್ದಾರೆ.

ವೈರಲ್ ಆದ ವೀಡಿಯೊದಲ್ಲಿ ದಾಳಿಗೊಳಗಾದ ಆ ವ್ಯಕ್ತಿ ಉದ್ಯಾನವನದಲ್ಲಿ ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗುವುದನ್ನು ಮತ್ತು ಫೋಟೋಗಾಗಿ ಪೋಸ್ ನೀಡಲು ಕುಳಿತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಹುಲಿಯ, ತರಬೇತುದಾರನೊಬ್ಬ ಕೋಲನ್ನು ಬಳಸಿ ಹುಲಿಯನ್ನು ಕೂರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಉಗ್ರ ಸ್ವರೂಪಿಯಾದ ಹುಲಿ ಆಕ್ರಮಣಕಾರಿಯಾಗಿ ಪ್ರವಾಸಿಗನ ಮೇಲೆ ದಾಳಿ ಮಾಡಿದೆ.

ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಆತ ಬದುಕುಳಿದನೆ ಎಂದು ಕಾಮೆಂಟ್‌ನಲ್ಲಿ ಕುತೂಹಲದಿಂದ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ಧಾರ್ಥ್ ಶುಕ್ಲಾ, ಆತ ಸ್ಪಷ್ಟವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಇಲ್ಲಿ ಇರುವ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಯಾವಾಗಲೂ ಇಂತಹ ಸಾಹಸಗಳನ್ನು ಮಾಡುವುದನ್ನು ತಪ್ಪಿಸಿ. ಪ್ರಾಣಿಗಳು ಯಾವಾಗಲೂ ಪ್ರಾಣಿಗಳು. ಅವುಗಳಿಗೆ ದಯೆ ತೋರಿ ಮತ್ತು ನೀವು ದಯೆಯಿಂದಿರಿ. ಆದರೆ ಅವು ಪ್ರಾಣಿಗಳು ಆದ್ದರಿಂದ ಅವುಗಳಿಂದ ಪ್ರತಿಯಾಗಿ ಉಪಕಾರವನ್ನು ನಿರೀಕ್ಷಿಸಬೇಡಿ ಎಂದು ಒಬ್ಬರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಅಜಾಗರೂಕ ಸಾಹಸಗಳು ಬೇಗನೆ ಮಾರಕವಾಗಬಹುದು, ರೋಮಾಂಚಕಾರಿ ಕ್ಷಣವನ್ನು ದುರಂತ ಅಂತ್ಯವಾಗಿ ಪರಿವರ್ತಿಸಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದು ದಾಳಿಗೊಳಗಾದ ಮನುಷ್ಯನಿಗೆ ಮಾತ್ರವಲ್ಲ, ಹುಲಿಗೂ ಹೃದಯ ವಿದ್ರಾವಕ ಸ್ಥಿತಿಯಾಗಿದೆ. ಹುಲಿಗಳು ಸೆಲ್ಫಿಗೆ ಪೂರಕವಾದ ವಸ್ತುಗಳಲ್ಲ, ಪರಭಕ್ಷಕ ಪ್ರಾಣಿಗಳನ್ನು ಪಂಜರಗಳಲ್ಲಿ ಇಡುವುದು, ಅವುಗಳನ್ನು ಪಳಗಿಸುವುದು ಮತ್ತು ಅವುಗಳನ್ನು ಪ್ರವಾಸಿಗರ ಮನರಂಜನೆಗಾಗಿ ಪರಿವರ್ತಿಸುವುದು ಅಮಾನವೀಯ, ಅಸುರಕ್ಷಿತ ಮತ್ತು ಅನೈತಿಕವಾಗಿದೆ. ಥೈಲ್ಯಾಂಡ್‌ನಲ್ಲಿ ಅನೇಕ ಇಂತಹ ಹುಲಿ ಸೆಲ್ಫಿ ಪಾರ್ಕ್‌ಗಳು ಇವೆ, ಅಲ್ಲಿ ಪ್ರಾಣಿಗಳಿಗೆ ಹೆಚ್ಚಾಗಿ ಮಾದಕ ದ್ರವ್ಯ ನೀಡಲಾಗಿರುತ್ತದೆ, ಸರಪಳಿ ಹಾಕಲಾಗಿರುತ್ತದೆ. ಬಹಳ ಕ್ರೌರ್ಯದಲ್ಲಿ ಅವುಗಳಿಗೆ ಪಳಗುವ ವೇಳೆ ತರಬೇತಿ ನೀಡಲಾಗಿರುತ್ತದೆ ಮತ್ತು ಪ್ರಕೃತಿಗೆ ಮನರಂಜಿಸುವಂತೆ ಒತ್ತಾಯಿಸಿದಾಗ ಇಂತಹ ಘಟನೆಗಳು ಸಂಭವಿಸುತ್ತದೆ. ಕಾಡುಪ್ರಾಣಿಗಳ ಬಂಧಿಸಿ ಪ್ರವಾಸಿಗರಿಗೆ ಮನೋರಂಜನೆ ನೀಡುತ್ತಿರುವ ಈ ಪ್ರಕ್ರಿಯೆಯನ್ನು ಜಾಗತಿಕವಾಗಿ ನಿಷೇಧಿಸುವ ಸಮಯ ಬಂದಿದೆ ಎಂದು ಒಬ್ಬರು ಈ ವೀಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

Scroll to load tweet…