ಬಾಲದಿಂದಲೇ ಬೇಟೆಯಾಡುತ್ತೆ ಈ ಇರಾನಿಯನ್ ಸ್ಪೈಡರ್ ಸ್ನೇಕ್: ಅಪರೂಪದ ವೀಡಿಯೋ ವೈರಲ್
ಪ್ರಾಣಿ ಜಗತ್ತೇ ಒಂದು ವಿಚಿತ್ರ ವಿಭಿನ್ನವಾದ ಕುತೂಹಲಕಾರಿ ಲೋಕ. ಅಲ್ಲಿನ ಒಂದೊಂದು ಪ್ರಾಣಿಯೂ ವಿಭಿನ್ನವಾದ ಆಹಾರ ಶೈಲಿ, ಜೀವನ ಶೈಲಿ ಆಹಾರ ಪದ್ಧತಿಯನ್ನು ಹೊಂದಿರುತ್ತದೆ. ಅದೇ ರೀತಿ ಪ್ರಾಣಿ ಲೋಕದ ಅಪರೂಪದ ವೀಡಿಯೋವೊಂದು ಇಲ್ಲಿದೆ.
ಪ್ರಾಣಿ ಜಗತ್ತೇ ಒಂದು ವಿಚಿತ್ರ ವಿಭಿನ್ನವಾದ ಕುತೂಹಲಕಾರಿ ಲೋಕ. ಅಲ್ಲಿನ ಒಂದೊಂದು ಪ್ರಾಣಿಯೂ ವಿಭಿನ್ನವಾದ ಆಹಾರ ಶೈಲಿ, ಜೀವನ ಶೈಲಿ ಆಹಾರ ಪದ್ಧತಿಯನ್ನು ಹೊಂದಿರುತ್ತದೆ. ಅದೇ ರೀತಿ ಪ್ರಾಣಿ ಲೋಕದ ಅಪರೂಪದ ವೀಡಿಯೋವೊಂದು ಇಲ್ಲಿದೆ. ಸಾಮಾನ್ಯವಾಗಿ ಹಾವುಗಳು ಇಲಿ, ಹೆಗ್ಗಣ, ಸಣ್ಣಪುಟ್ಟ ಪ್ರಾಣಿಗಳು, ಮುಂತಾದವುಗಳನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಹಾವಿದೆ ನೋಡಿ ಅದು ಕುಳಿತಲ್ಲಿಗೆ ತನ್ನ ಬೇಟೆ ಬರುವಂತೆ ಮಾಡುತ್ತದೆ. ವಿಚಿತ್ರವಾದರೂ ಇದು ಸತ್ಯ.
ಈ ಹಾವಿನ ಹೆಸರು ಇರಾನಿಯನ್ ಸ್ಪೈಡರ್ ಸ್ನೇಕ್. ಇದರ ದೇಹ ಪ್ರಕೃತಿಯೇ ಇತರ ಹಕ್ಕಿಗಳು ಅಥವಾ ಜೇಡಗಳನ್ನು ಬೇಟೆಯಾಡುವಂತಹ ಇತರ ಸಸ್ತನಿಗಳಿಗೆ ಮೋಸ ಮಾಡುವಂತಿದೆ. ಈ ಹಾವಿನ ಬಾಲದ ಕೊನೆಯಲ್ಲಿ ಸಣ್ಣ ಜೇಡದಂತಹ ರಚನೆ ಇದೆ. ಈ ಹಾವು ಹಸಿವಾದಾಗ ಎಲ್ಲೋ ಒಂದು ಕಡೆ ಸುಮ್ಮನೆ ನಿದ್ದೆ ಮಾಡುವಂತೆ ಮುದುಡಿ ಮಲಗಿರುತ್ತದೆ. ಆದರೆ ತನ್ನ ಬಾಲದಲ್ಲಿರುವ ಜೇಡದಂತಹ ಆಕೃತಿಯನ್ನು ಮಾತ್ರ ಜೇಡವೊಂದು ಅತ್ತಿತ್ತ ಹರಿದಾಡಿದಂತೆ ಕಾಣುವಂತೆ ಮಾಡುತ್ತಲೇ ಇರುತ್ತದೆ. ಈ ವೇಳೆ ಈ ಜೇಡ ಮುಂತಾದ ಸಣ್ಣಪುಟ್ಟ ಕೀಟಗಳು ಹುಳ ಹುಪ್ಪಟೆಗಳನ್ನು ತಮ್ಮ ಆಹಾರವಾಗಿ ಸೇವಿಸುವ ಹಕ್ಕಿಗಳು ಈ ಹಾವಿನ ಬಾಲದತ್ತ ಆಕರ್ಷಿತರಾಗಿ, ಅದು ಜೇಡವಾಗಿರಬಹುದು ಎಂಬ ಭಾವನೆಯಿಂದ ಅದನ್ನು ಕುಕ್ಕಲು ಬಂದು ತಮ್ಮಷ್ಟಕ್ಕೇ ತಾವೇ ಹಾವಿನ ದವಡೆಗೆ ಸಿಲುಕುತ್ತವೆ. ಹೀಗೆ ಆಹಾರ ಅರಸಿ ಬಂದ ಹಕ್ಕಿಗಳು ತಮಗೆ ತಿಳಿಯದಂತೆ ಈ ಹಾವಿಗೆ ಆಹಾರವಾಗುತ್ತವೆ. ಇತ್ತ ಈ ಹಾವು ಮಾತ್ರ ಆರಾಮವಾಗಿ ಮಲಗಿದಲ್ಲೇ ತನಗೆ ಬೇಕಾದ ಆಹಾರವನ್ನು ತಿಂದು ತೇಗುತ್ತದೆ. ಎಷ್ಟೊಂದು ವಿಚಿತ್ರ ಅಲ್ವಾ ಈ ಪ್ರಾಣಿ ಜಗತ್ತು.
ಅಮೇಜಿಂಗ್ ನೇಚರ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಸಾಕಷ್ಟು ಜನ ಈ ವೀಡಿಯೋವನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬಾಲದಲ್ಲಿ ಜೇಡದಂತಹ ಆಕಾರವನ್ನು ಹೊಂದಿರುವ ಈ ಸ್ಪೈಡರ್ ಟೈಲ್ಡ್ ಸ್ನೇಕ್ ಅತ್ಯಂತ ವಿಷಕಾರಿ ಹಾವಾಗಿದ್ದು, ಮಧ್ಯಪ್ರಾಚ್ಯ ದೇಶವಾದ ಪಶ್ಚಿಮ ಇರಾನ್ ಹಾಗೂ ಇರಾಕ್ ಗಡಿ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತನ್ನ ಬಾಲದಲ್ಲಿರುವ ಈ ಸ್ಪೈಡರ್ ಆಕೃತಿಯನ್ನು ಅತ್ತಿತ್ತ ಅಲಾಡಿಸುತ್ತಾ ಜೇಡಗಳನ್ನು ತಿನ್ನುವ ಪ್ರಾಣಿಗಳನ್ನು ಆಕರ್ಷಿಸುತ್ತವೆ. ಅವುಗಳು ಸಮೀಪ ಬರುತ್ತಿದ್ದಂತೆ ಗಬಕ್ಕನೇ ಅವುಗಳನ್ನು ತನ್ನ ಬಾಯಿಗೆ ಹಾಕಿಕೊಳ್ಳುತ್ತದೆ.