ಶ್ವೇತಭವನದಲ್ಲಿ ನಡೆದ ಎಐ ಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ದೈತ್ಯ ರಾಕ್ಷಸ' ಎಂದು ಕರೆದಿದ್ದಾರೆ. ಇದಕ್ಕೆ ಪಿಚೈ ನೀಡಿದ ಹಾಸ್ಯಮಯ ಪ್ರತಿಕ್ರಿಯೆ ಮತ್ತು ಟ್ರಂಪ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಗೂಗಲ್ ಸಿಇಒ(Google CEO) ಭಾರತೀಯ ಮೂಲದ ಸುಂದರ್ ಪಿಚೈ(Sundar Pichai) ಅವರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಟೆಕ್ ಜಗತ್ತಿನಲ್ಲಿ ಇದೀಗ ಹೊಸ ಚರ್ಚೆ ಹುಟ್ಟುಹಾಕಿದೆ.
ಡೊನಾಲ್ಡ್ ಟ್ರಂಪ್ ಅವರು ಸುಂದರ್ ಪಿಚೈ ಅವರನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, 'ಈ ವ್ಯಕ್ತಿ ಒಬ್ಬ ಮಾನ್ಸ್ಟರ್ (ದೈತ್ಯ). ಆದರೆ ಯಾರಿಗೂ ಅವರ ಬಗ್ಗೆ ಗೊತ್ತಿಲ್ಲ. ಎಂಥ ಅದ್ಭುತ ಜೀವನ! ಮಾನ್ಸ್ಟರ್ ಆಗಿದ್ದು, ಇದೆಲ್ಲವನ್ನೂ ಎದುರಿಸುವ ಅಗತ್ಯವೇ ಇಲ್ಲ. ನೀವು ತಿಳಿದುಕೊಳ್ಳಬೇಕಾದ ಒಂದೇ ವಿಷಯ ಎಂದರೆ ಸುಂದರ್! ಅವರ ಹೆಸರು ಸುಂದರ್ ಎಂದು ಹೇಳುತ್ತಾರೆ.
ಸುಂದರ್ ಪಿಚೈ ಏನು ಹೇಳಿದರು?
ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಪಿಚೈ, 'ನಾನು ಮಾನ್ಸ್ಟರ್ ಎನ್ನುವುದಕ್ಕಿಂತ ಒಳ್ಳೆಯ ಟ್ಯಾಗ್‌ಲೈನ್ ಸಿಗಲಿ ಎಂದು ಆಶಿಸುತ್ತೇನೆ!' ಎಂದು ತಮಾಷೆಯಾಗಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರು ನಕ್ಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿತ್ತು?
ಟ್ರಂಪ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು, 'ಟ್ರಂಪ್ ಅವರ ಮತ್ತೊಂದು ಪರೋಕ್ಷ ಹೊಗಳಿಕೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಸುಂದರ್ ತುಂಬಾ ಮುಜುಗರಕ್ಕೊಳಗಾದಂತೆ ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ.
ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ AI ಕಂಪನಿಗಳ ಮುಖ್ಯಸ್ಥರು
ವೈಟ್‌ಹೌಸ್‌ನಲ್ಲಿ AI ಕ್ಷೇತ್ರಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಮಾನದಂಡಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ Anthropic ಸಿಇಒ ಡಾರಿಯೋ ಅಮೋಡೈ, Google ಸಿಇಒ ಸುಂದರ್ ಪಿಚೈ, OpenAIನ ಗ್ರೆಗ್ ಬ್ರಾಕ್‌ಮನ್, Nvidia ಸಿಇಒ ಜೆನ್ಸನ್ ಹುವಾಂಗ್ ಮತ್ತು Meta ಸಿಇಒ ಮಾರ್ಕ್ ಜುಕರ್‌ಬರ್ಗ್ ಭಾಗವಹಿಸಿದ್ದರು.
ಕಂಪನಿಗಳ ನಡುವಿನ ಒಪ್ಪಂದವನ್ನು ಉಲ್ಲೇಖಿಸಿದ ಟ್ರಂಪ್, 'ಇದು ಒಂದು ರೀತಿಯಲ್ಲಿ ಸಂವಿಧಾನದಂತಿದೆ' ಎಂದು ಹೇಳಿದರು. 'ವಿಶ್ವದ ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರು ಇದಕ್ಕೆ ಸಹಿ ಹಾಕಿದ್ದಾರೆ. ಅಧ್ಯಕ್ಷನಾಗಿ ನಾನೂ ಸಹಿ ಹಾಕಿದ್ದೇನೆ. ಇದು ನಿಜವಾಗಿಯೂ ಒಂದು ರೀತಿಯ ರಕ್ಷಣೆಯಾಗಿದೆ” ಎಂದು ಟ್ರಂಪ್ ಹೇಳಿದರು.
ಟೆಕ್ ಕಂಪನಿಗಳ ಮುಖ್ಯಸ್ಥರು ಏನು ಹೇಳಿದರು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಕೃತಕ ಬುದ್ಧಿಮತ್ತೆ (AI) ಕುರಿತ ದಾಖಲೆಯನ್ನು ಬಿಡುಗಡೆ ಮಾಡಿದರು. ಅವರ ಆಡಳಿತದ ಪ್ರಕಾರ, ಇದು AI ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದವಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಮತ್ತು ಟೆಕ್ ಕಂಪನಿಗಳ ಮುಖ್ಯಸ್ಥರು ಇದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಂದರ್ ಪಿಚೈ, ಹಣಕಾಸು ನಿಯಂತ್ರಣಗಳಂತಹ ಇತರ ಕ್ಷೇತ್ರಗಳಲ್ಲಿ ನಾವು ಅನುಸರಿಸುವ ಪ್ರಕ್ರಿಯೆಗಳು ಮತ್ತು ನಿಯಂತ್ರಣಗಳನ್ನು ಇಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಸೂಪರ್‌ಇಂಟೆಲಿಜೆನ್ಸ್ ಅಭಿವೃದ್ಧಿಗೂ ಇದೇ ರೀತಿಯ ಉತ್ತಮ ನಿಯಮಗಳನ್ನು ತರುತ್ತಿದ್ದೇವೆ' ಎಂದು ಹೇಳಿದರು.
ವೈಟ್‌ಹೌಸ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ Anthropic ಸಿಇಒ ಡಾರಿಯೋ ಅಮೋಡೈ, 'ಈ ತಂತ್ರಜ್ಞಾನದಿಂದ ನಿಜವಾದ ಅಪಾಯಗಳಿವೆ ಎಂದು ನಾನು ಭಾವಿಸುತ್ತೇನೆ. ಆ ಅಪಾಯಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ' ಎಂದು ಹೇಳಿದರು.
ಹೊಸ ಒಪ್ಪಂದದ ಕುರಿತು ಮಾತನಾಡಿದ Meta ಸಿಇಒ ಮಾರ್ಕ್ ಜುಕರ್‌ಬರ್ಗ್, 'ತಂತ್ರಜ್ಞಾನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಪತ್ತೆಹಚ್ಚುವುದು ಮತ್ತು ಬಲವಾದ ಆಂತರಿಕ ನಿಯಂತ್ರಣಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದ ಹಲವು ತತ್ವಗಳು ಮತ್ತು ಬದ್ಧತೆಗಳನ್ನು ಇದು ಒಳಗೊಂಡಿದೆ' ಎಂದು ಹೇಳಿದರು.


