ಕೋಲ್ಕತ್ತದಲ್ಲಿ ದೇಶದ ಮೊದಲ ನೀರಿನಾಳದ ಮೆಟ್ರೋ ಪ್ರಾಯೋಗಿಕ ಸಂಚಾರ!
ಕೋಲ್ಕತ್ತಾದ ಹೂಗ್ಲಿ ನದಿಯ ಆಳದಲ್ಲಿ ನಿರ್ಮಾಣವಾಗಿರುವ ದೇಶದ ಮೊಟ್ಟಮೊದಲ ಅಂಡರ್‌ವಾಟರ್ ಮೆಟ್ರೋ ಪ್ರಾಯೋಗಿಕ ಸಂಚಾರ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಈ ಪ್ರಯಾಣ ಮುಕ್ತವಾಗಲಿದೆ.
ಕೋಲ್ಕತ್ತಾ (ಏ.12): ನೀರಿನಾಳದಲ್ಲಿ ಓಡುವ ಭಾರತದ ಮೊಟ್ಟಮೊದಲ ಮೆಟ್ರೋ ರೈಲು ಕೊನೆಗೂ ಸಾಕಾರಗೊಂಡಿದೆ. ಕೋಲ್ಕತ್ತಾದ ಹೂಗ್ಲಿ ನದಿಯ ಕೆಳಗೆ ನಿರ್ಮಾಣವಾಗಿರುವ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಪ್ರಾಯೋಗಿಕ ಓಡಾಟ ಆರಂಭಿಸಿದೆ. ಪೂರ್ವ-ಪಶ್ಚಿಮ ಮೆಟ್ರೋ ಲೈನ್‌ಗಾಗಿ ಹೂಗ್ಲಿ ನದಿಯ ಕೆಳಗೆ ಎರಡು ಸುರಂಗಗಳನ್ನು ನಿರ್ಮಿಸಲಾಗಿದೆ, ಇದು ಹೌರಾ ಮೈದಾನ ಮತ್ತು ಸಾಲ್ಟ್ ಲೇಕ್‌ನಲ್ಲಿರುವ ಸೆಕ್ಟರ್ ವಿ ಅನ್ನು ಸಂಪರ್ಕ ಮಾಡುತ್ತದೆ. ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ (ಕೆಎಂಆರ್‌ಸಿ) ಭಾನುವಾರದಂದು ಈ ಮಾರ್ಗದ ಒಂದು ಭಾಗದಲ್ಲಿ ಪ್ರಾಯೋಗಿಕ ಚಾಲನೆಯನ್ನು ಯೋಜಿಸಿತ್ತು, ಆದರೆ ಅದನ್ನು ಅನಿರೀಕ್ಷಿತವಾಗಿ ರದ್ದು ಮಾಡಲಾಗಿತ್ತು. ಆದರೆ, ಬುಧವಾರ ಇದರ ಟ್ರಯಲ್ ರನ್ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಯೋಗದ ಭಾಗವಾಗಿ, ಎರಡರಿಂದ ಆರು ಕೋಚ್‌ಗಳನ್ನು ಹೊಂದಿರುವ ಮೆಟ್ರೋ ರೈಲು ಎಸ್‌ಪ್ಲಾನೇಡ್ ಮತ್ತು ಹೌರಾ ಮೈದಾನದ ನಡುವಿನ 4.8 ಕಿಲೋಮೀಟರ್ ದೂರವನ್ನು ಕ್ರಮಿಸಿದೆ. ವಿಶೇಷವೆಂದರೆ, ದೇಶದ ಮೊದಲ ಮೆಟ್ರೋವನ್ನು ಆರಂಭಿಸಿದ ನಗರ ಕೂಡ ಕೋಲ್ಕತ್ತಾ. 1984ರಲ್ಲಿ ಕೋಲ್ಕತ್ತಾದಲ್ಲಿ ಮೆಟ್ರೋ ರೈಲು ಸೇವೆ ಆರಂಭವಾಗಿದ್ದರೆ. ದೆಹಲಿಯಲ್ಲಿ 2002ರಿಂದ ಇದರ ಸೇವೆ ಆರಂಭವಾಗಿದೆ.
ಹೂಗ್ಲಿ ನದಿಯ ಆಳದಲ್ಲಿ ಮೆಟ್ರೋ ಸುರಂಗ ನಿರ್ಮಾಣವಾಗಿದ್ದು, ಈ ಸುರಂಗಗಳಲ್ಲಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ರೈಲು ಸಂಚಾರ ಮಾಡಲಿದೆ. ನದಿಯ ಕೆಳಗೆ ರೈಲಿನ ಪ್ರಯಾಣ ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ 16-ಕಿಲೋಮೀಟರ್-ಉದ್ದದ ರೈಲು ಮಾರ್ಗವು 10.8 ಕಿಲೋಮೀಟರ್ ಅಂಡರ್‌ಗ್ರೌಂಡ್ ಭಾಗಗಳನ್ನು ಒಳಗೊಂಡಿದೆ, ಇದರಲ್ಲಿ ನದಿಯ ಆಳದಲ್ಲಿ ನಿರ್ಮಾಣವಾಗಿರುವ ಸುರಂಗ ಕೂಡ ಸೇರಿದೆ. ಮೆಟ್ರೋ ಮಾರ್ಗವು ಹೂಗ್ಲಿ ನದಿಯ ಕೆಳಗೆ 13 ಮೀಟರ್‌ಗಳಷ್ಟು ಆಳದಲ್ಲಿದ್ದರೆ, ಹೌರಾ ಮೆಟ್ರೋ ನಿಲ್ದಾಣವು ನೆಲದಿಂದ 33 ಮೀಟರ್‌ಗಳವರೆಗೆ ಇರುತ್ತದೆ.
ಮಿಯಾಂವ್ ಮಿಯಾಂವ್... ಮಾರ್ಜಾಲಕ್ಕೆ ಮೆಟ್ರೋ ಸ್ಟೇಷನ್ ಮಾಸ್ಟರ್ ಪಟ್ಟ
ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ (KMRC) ಪ್ರಕಾರ, ಅಂಡರ್‌ಗ್ರೌಂಡ್ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಯು ಡಿಸೆಂಬರ್‌ನೊಳಗೆ ಪೂರ್ಣಗೊಳ್ಳಲಿದೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮಾರ್ಗವು 15 ಕಿಲೋಮೀಟರ್ ಉದ್ದವಿದ್ದು, ಹೌರಾದಿಂದ ಸಾಲ್ಟ್ ಲೇಕ್ ಸಿಟಿ ಕ್ರೀಡಾಂಗಣದವರೆಗೆ ವಿಸ್ತರಿಸಿದೆ.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ಸಾಲ್ಟ್ ಲೇಕ್ ಸೆಕ್ಟರ್ 5 ರಿಂದ ಸಾಲ್ಟ್ ಲೇಕ್ ಸ್ಟೇಡಿಯಂವರೆಗಿನ ಮಾರ್ಗದಲ್ಲಿ, ಕರುಣಾಮಯಿ, ಸೆಂಟ್ರಲ್ ಪಾರ್ಕ್, ಸಿಟಿ ಸೆಂಟರ್ ಮತ್ತು ಬೆಂಗಾಲ್ ಕೆಮಿಕಲ್ ಮೆಟ್ರೋ ನಿಲ್ದಾಣಗಳು ಇರಲಿವೆ. ಈ ಯೋಜನೆಯು ಕೋಲ್ಕತ್ತಾ ಮೆಟ್ರೋದ ಉತ್ತರ-ದಕ್ಷಿಣ ಮಾರ್ಗದ ಎಸ್ಪ್ಲೇನೇಡ್ ನಿಲ್ದಾಣವನ್ನು ಹೌರಾ ಮತ್ತು ಸೀಲ್ದಾದಲ್ಲಿನ ರೈಲು ನಿಲ್ದಾಣಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.