ನವದೆಹಲಿ[ಆ.11]: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸಮುದ್ರದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಕಟ್ಟೆಚ್ಚರ ಸಾರಲಾಗಿದೆ.

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ತಮ್ಮ ಸದಸ್ಯರಿಗೆ ನೀರಿನ ಆಳದಲ್ಲಿ ದಾಳಿ ನಡೆಸುವುದು ಹಾಗೂ ಸಮುಂದರಿ ಜಿಹಾದ್‌ (ಸಮುದ್ರದ ಮೂಲಕ ದಾಳಿ) ನಡೆಸಲು ತರಬೇತಿ ನೀಡಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ 7514 ಕಿ.ಮೀ. ಉದ್ದದ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಟ್ಟೆಚ್ಚರದಿಂದ ಇರಲು ನೌಕಾಪಡೆಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಉಗ್ರರ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಸಜ್ಜಾಗಿದ್ದೇವೆ. ಯಾರಾದರೂ ದುಸ್ಸಾಹಸಕ್ಕೆ ಮುಂದಾದರೆ ಸಂಪೂರ್ಣ ಸಾಮರ್ಥ್ಯದಿಂದ ಹೋರಾಡಲಿದ್ದೇವೆ ಎಂದು ನೌಕಾ ಸಿಬ್ಬಂದಿ ಉಪ ಮುಖ್ಯಸ್ಥ ಮುರಳೀಧರ್‌ ಪವಾರ್‌ ಹೇಳಿದ್ದಾರೆ. ಅಲ್ಲದೇ ಯುದ್ಧ ನೌಕೆಗಳಾದ ಐಎನ್‌ಎಸ್‌ ವಿಕ್ರಮಾದಿತ್ಯ, ಅಣ್ವಸ್ತ್ರ ಸಬ್‌ಮರೀನ್‌ ಚಕ್ರ, 60 ಹಡಗುಗಳು, 80 ವಿಮಾನಗಳನ್ನು ಉತ್ತರ ಅರಬ್ಬೀ ಸಮುದ್ರದಲ್ಲಿ ಕಾವಲಿಗೆ ನಿಯೋಜಿಸಲಾಗಿದೆ. ಇದೇ ವೇಳೆ ಭಾರತೀಯ ವಾಯು ಪಡೆಯನ್ನು ಕೂಡ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಭಾರತ ಹಾಗೂ ಪಾಕ್‌ ಗಡಿ ನಿಯಂತ್ರಣಾ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಉಗ್ರರು ಭಾರತದ ಮೇಲೆ ದಾಳಿಗೆ ಬೇರೆ ಮಾರ್ಗವನ್ನು ಹುಡುಕುತ್ತಿದ್ದಾರೆ. ಪಂಜಾಬ್‌ ಹಾಗೂ ರಾಜಸ್ಥಾನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎನ್ನಲಾಗುತ್ತಿದೆ.