ಬ್ರಿಟನ್ ಮುಸ್ಲಿಂ ಮೂಲಭೂತವಾದಿಗಳ ಕೈವಶವಾಗುವ ಆತಂಕವನ್ನು ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ವ್ಯಕ್ತಪಡಿಸಿದ್ದಾರೆ. ಶರಿಯಾ ಕಾನೂನು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ ಸರ್ಕಾರ ಬಿಡುಗಡೆ ಮಾಡಿರುವ ಅಪಾಯಕಾರಿ ಸಂಗತಿಗಳ ಪಟ್ಟಿಯಲ್ಲಿ ಹಿಂದೂ ರಾಷ್ಟ್ರೀಯವಾದವನ್ನೂ ಸೇರಿಸಲಾಗಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷಣೆಯಂತೆಯೇ ಬ್ರಿಟನ್ ಸಹ ‘ಮೇಕ್ ಬ್ರಿಟನ್ ಗ್ರೇಟ್ ಅಗೇನ್’ ಆಗುವ ಆವಶ್ಯಕತೆ ಇದೆ. ಇಲ್ಲದಿದ್ದರೆ, ಇನ್ನೆರಡು ದಶಕದಲ್ಲಿ ಬ್ರಿಟನ್ ಮುಸ್ಲಿಂ ಮೂಲಭೂತವಾದಿಗಳ ಕೈವಶವಾಗಿ, ಇರಾನ್ ರೀತಿಯಲ್ಲಿ ಪಶ್ಚಿಮದ ವೈರಿಯಾಗುವ ದಿನಗಳನ್ನು ನೋಡಬೇಕಾಗುತ್ತದೆ ಎಂದು ಬ್ರಿಟನ್ ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಯೆಲ್ಲಾ, ‘ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇತ್ತೀಚೆಗಷ್ಟೇ ಬ್ರಿಟನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮೊದಲ ಇಸ್ಲಾಮಿಸ್ಟ್ ರಾಷ್ಟ್ರವಾಗಲಿದೆ ಎಂದು ಹೇಳಿದ್ದರು. ಅವರ ಮಾತು ತಮಾಷೆಯೆಂದು ನಾನು ಭಾವಿಸುವುದಿಲ್ಲ. ಬ್ರಿಟನ್ ಮುಸ್ಲಿಂ ಮೂಲಭೂತವಾದಿಗಳ ಕೈವಶವಾದರೆ ನಮ್ಮ ಕಾನೂನು ವ್ಯವಸ್ಥೆ ಶರಿಯಾ ಕಾನೂನಿಗೆ ಪರ್ಯಾಯವಾಗುತ್ತದೆ. ನಮ್ಮ ಪರಮಾಣು ಸಾಮರ್ಥ್ಯಗಳು ಇರಾನ್‌ನಂತೆ ಆಡಳಿತದಲ್ಲಿ ತೊಡಗುತ್ತವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆನಡಾ, ಅಮೆರಿಕೆ ಆಯ್ತು, ಈಗ ಬ್ರಿಟನ್‌ನಿಂದ ಖಲಿಸ್ತಾನಿ ಬೆಂಬಲಿಗರಿಗೆ ರಕ್ಷಣೆ? ಯುಕೆ ಮಿನಿಸ್ಟರ್ ಹೇಳಿದ್ದೇನು?
9 ಅಪಾಯಕಾರಿ ಸಂಗತಿಗಳ ಪಟ್ಟಿ ಬಿಡುಗಡೆ
ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ 9 ಅಪಾಯಕಾರಿ ಸಂಗತಿಗಳ ಪಟ್ಟಿಯೊಂದನ್ನು ಬ್ರಿಟನ್ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದವನ್ನೂ ಸೇರಿಸಿದೆ. ಹಿಂದುತ್ವವನ್ನು ಹೀಗೆ ಸೈದ್ಧಾಂತಿಕವಾಗಿ ಕಳವಳಕಾರಿ ಪಟ್ಟಿಯಲ್ಲಿ ಬ್ರಿಟನ್ ಸೇರಿಸಿದ್ದು ಇದೇ ಮೊದಲು. ದೇಶದ ಭದ್ರತೆಗೆ ಅಪಾಯತರಬಹುದಾದ ಸಿದ್ಧಾಂತಗಳು, ಸಂಘಟನೆ ಕುರಿತು ವರದಿ ನೀಡಲು ಬ್ರಿಟನ್ ಸರ್ಕಾರ 2024ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ವರದಿ ಇದೀಗ ಸೋರಿಕೆಯಾಗಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದಿಗಳು, ಖಲಿಸ್ತಾನಿ ಸಂಘಟನೆಯನ್ನು ಕಳವಳಕಾರಿ ಸಿದ್ಧಾಂತ, ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ.
ಮೂರು ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ಬಳಿಕ ಲೀಸೆಸ್ಟರ್‌ನಲ್ಲಿ ಗಲಾಟೆ ನಡೆದಿತ್ತು. ಅದರ ಬೆನ್ನಲ್ಲೇ ಹಿಂದುತ್ವವನ್ನು ಅಪಾಯಕಾರಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹಿಂದೂರಾಷ್ಟ್ರೀಯವಾದ ಮಾತ್ರವಲ್ಲದೆ ಇಸ್ಲಾಂ ಮೂಲಭೂತವಾದ, ತೀವ್ರ ಬಲಪಂಥೀಯ ವಾದ, ತೀವ್ರ ಮಹಿಳಾ ವಿರೋಧಿ ವಾದ, ಖಾಲಿಸ್ತಾನಿ ಪರ ತೀವ್ರವಾದ, ಪರಿಸರಪರ ತೀವ್ರವಾದ, ಎಡಪಂಥೀಯ ಗುಂಪು, ಅರಾಜಕತೆ ಮತ್ತು ಏಕವಿಚಾರದ ತೀವ್ರವಾದ, ಹಿಂಸಾಚಾರದ ಸೆಳೆತ ಹಾಗೂ ಪಿತೂರಿ ಸಿದ್ಧಾಂತಗಳು ಬ್ರಿಟನ್‌ನ ಗೃಹ ಇಲಾಖೆ ಪಟ್ಟಿಮಾಡಿದ ಭವಿಷ್ಯದ ಇತರೆ ಕಳವಳಕಾರಿ ಸಿದ್ಧಾಂತಗಳಾಗಿವೆ.
ಇದನ್ನೂ ಓದಿ: ಭಾರತದಲ್ಲಿ ನಿಷೇಧಿತ Garmin inReach ಜಿಪಿಎಸ್ ಬಳಸಿದ ಸ್ಕಾಟ್ಲೆಂಡ್ ಹೈಕರ್ ಬಂಧನ
