7 ದಿನದಲ್ಲಿ ಇಡೀ ಅಷ್ಘಾನಿಸ್ತಾನ ತಾಲಿಬಾನ್ ವಶ? ನಿನ್ನೆ ಮತ್ತೆ 3 ಪ್ರಾಂತಗಳು ತಾಲಿಬಾನ್ ಬಂಡುಕೋರರ ತೆಕ್ಕೆಗೆ ಇನ್ನು 7 ದಿನದೊಳಗೆ ಕಾಬೂಲ್ ವಶ: ತಾಲಿಬಾನ್ ಘೋಷಣೆ
ಕಾಬೂಲ್(ಆ.14): ಅಷ್ಘಾನಿಸ್ತಾನದ ಸುಮಾರು ಮುಕ್ಕಾಲು ಭಾಗವನ್ನು ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಬಂಡುಕೋರರು ಇನ್ನು 7 ದಿನದೊಳಗೆ ರಾಜಧಾನಿ ಕಾಬೂಲ್ ನಗರವೂ ಸೇರಿದಂತೆ ಇಡೀ ದೇಶವನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈಗ ಶೇ.90ರಷ್ಟುಆಷ್ಘಾನಿಸ್ತಾನ ತಮ್ಮ ವಶದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.
ಶುಕ್ರವಾರ ಹೊಸತಾಗಿ 3 ಪ್ರಾಂತಗಳ ರಾಜಧಾನಿಯನ್ನು ಬಂಡುಕೋರರು ವಶಪಡಿಸಿಕೊಂಡು ತಮ್ಮ ಆಡಳಿತ ಸ್ಥಾಪಿಸಿದ್ದಾರೆ. ಎರಡು ದಶಕಗಳ ಅವಧಿಯಲ್ಲಿ ಅಮೆರಿಕ, ಬ್ರಿಟನ್ ಮತ್ತು ನ್ಯಾಟೋ ಪಡೆಗಳು ಅತಿಹೆಚ್ಚು ದಾಳಿಗಳನ್ನು ನಡೆಸಿದ ಹೆಲ್ಮಾಂಡ್ ಪ್ರಾಂತವನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಇದು ಕಾಬೂಲ್‌ಗೆ ಸನಿಹದಲ್ಲಿದೆ. ಜೊತೆಗೆ, ಜಬುಲ್ ಹಾಗೂ ಉರುಜ್ಗಲ್ ಎಂಬ ಇನ್ನೆರಡು ಪ್ರಾಂತಗಳನ್ನೂ ವಶಪಡಿಸಿಕೊಂಡಿದ್ದಾರೆ.
ಪಾಕ್‌ನಿಂದ ಭಾರತ ತಲುಪಬಲ್ಲ ಘಜ್ನವಿ ಕ್ಷಿಪಣಿ ಯಶಸ್ವಿ ಪರೀಕ್ಷೆ!
ಬಹುತೇಕ ಈಗ ತಾಲಿಬಾನಿಗಳು ರಾಜಧಾನಿ ಕಾಬೂಲ್ ಅನ್ನು ಸುತ್ತುವರೆದಂತಾಗಿದ್ದು, ರಾಜಧಾನಿಯನ್ನು ರಕ್ಷಿಸಿಕೊಳ್ಳಲು ಅಷ್ಘಾನಿಸ್ತಾನದ ಸರ್ಕಾರ ಹೋರಾಡುತ್ತಿದೆ. ಅದರ ನಡುವೆಯೇ ಇನ್ನು 7 ದಿನದಲ್ಲಿ ಕಾಬೂಲ್ ವಶಪಡಿಸಿಕೊಳ್ಳುವುದಾಗಿ ತಾಲಿಬಾನ್ ವಕ್ತಾರರು ಪ್ರಕಟಿಸಿದ್ದಾರೆ.
ಭಾರತವು ಈಗಾಗಲೇ ಕಾಬೂಲ್‌ನಲ್ಲಿರುವ ದೂತಾವಾಸಗಳಿಂದ ದೇಶದ ರಾಜತಾಂತ್ರಿಕರನ್ನು ಏರ್‌ಲಿಫ್ಟ್ ಮಾಡುತ್ತಿದೆ. ಈಗ ಅಮೆರಿಕ, ಬ್ರಿಟನ್, ಕೆನಡಾ ಮುಂತಾದ ದೇಶಗಳೂ ಕೂಡ ಸಾವಿರಾರು ಸೈನಿಕರನ್ನು ಕಾಬೂಲ್‌ಗೆ ಕಳುಹಿಸಿ ತಮ್ಮ ದೇಶದ ರಾಜತಾಂತ್ರಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಆರಂಭಿಸಿವೆ.
ತಾಲಿಬಾನ್ ಜೊತೆ ಅಧಿಕಾರ ಹಂಚಿಕೆಗೆ ಅಷ್ಘಾನಿಸ್ತಾನ ರೆಡಿ
‘ನಾವು ಹಿಂಸಾಚಾರ ನಡೆಸಲು ಬಯಸುವುದಿಲ್ಲ. ದೇಶದಲ್ಲಿ ಶಾಂತಿಯುತ ಆಡಳಿತ ಸ್ಥಾಪಿಸಲು ನಮಗೆ ವಿದೇಶಿ ಪಡೆಗಳು ಸಹಕಾರ ನೀಡಬೇಕು. ನಾವು ಯಾವುದೇ ವಿದೇಶಿ ಪ್ರಜೆಗೂ ಹಾನಿ ಮಾಡುವುದಿಲ್ಲ’ ಎಂದು ತಾಲಿಬಾನ್ ಬಂಡುಕೋರರು ಹೇಳಿದ್ದಾರೆ.
