Asianet Suvarna News Asianet Suvarna News

ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಅಷ್ಘಾನಿಸ್ತಾನ ರೆಡಿ!

* ದೇಶದ 10ನೇ ಪ್ರಾಂತೀಯ ನಗರ ಘಜ್ನಿ ತಾಲಿಬಾನ್‌ ವಶ

* ತಾಲಿಬಾನ್‌ ಜೊತೆಗೇ ಅಧಿಕಾರ ಹಂಚಿಕೆಗೆ ಅಷ್ಘಾನಿಸ್ತಾನ ಸಿದ್ಧತೆ

* ಅಧಿಕಾರ ಹಂಚಿಕೊಳ್ಳಲು ಉಗ್ರರಿಗೆ ಸರ್ಕಾರದ ಆಹ್ವಾನ

Kabul offers Taliban power sharing to end violence source pod
Author
Bangalore, First Published Aug 13, 2021, 8:06 AM IST

ಕಾಬೂಲ್‌(ಆ.13): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಬಂಡುಕೋರರು ಘಜ್ನಿ ಎಂಬ ಇನ್ನೊಂದು ಪ್ರಮುಖ ನಗರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ತಾಲಿಬಾನ್‌ನ ವಶಕ್ಕೆ ಹೋದ ಪ್ರಾಂತೀಯ ರಾಜಧಾನಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಅಷ್ಘಾನಿಸ್ತಾನದ ಸರ್ಕಾರಕ್ಕೆ ಆತಂಕ ಹೆಚ್ಚಾಗಿದ್ದು, ಅಧಿಕಾರ ಹಂಚಿಕೆಯ ಕುರಿತಾದ ಮಾತುಕತೆಗೆ ಬರುವಂತೆ ತಾಲಿಬಾನ್‌ ನಾಯಕರನ್ನು ಆಹ್ವಾನಿಸಿದೆ.

ತಾಲಿಬಾನ್‌ ಬಂಡುಕೋರರು ಗುರುವಾರ ಅಷ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಕೇವಲ 130 ಕಿ.ಮೀ. ದೂರವಿರುವ ಘಜ್ನಿ ನಗರದಲ್ಲಿ ತಮ್ಮ ಧ್ವಜ ನೆಟ್ಟು, ಈ ನಗರವನ್ನು ತಾವು ವಶಪಡಿಸಿಕೊಂಡಿರುವುದಾಗಿ ಘೋಷಿಸಿದರು. ಅದರ ಬೆನ್ನಲ್ಲೇ, ಅಷ್ಘಾನಿಸ್ತಾನ ಸರ್ಕಾರವು ತಾಲಿಬಾನ್‌ ನಾಯಕರಿಗೆ ದಾಳಿ ನಿಲ್ಲಿಸಲು ಮನವಿ ಮಾಡಿದ್ದು, ಹೊಸ ಶಾಂತಿ ಮಾತುಕತೆಗೆ ಆಹ್ವಾನ ನೀಡಿದೆ. ಅಮೆರಿಕದ ಸೇನೆ ಕೂಡ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿಯುತ್ತಿರುವುದರಿಂದ ಆಫ್ಘನ್‌ ಸರ್ಕಾರ ತಲ್ಲಣಗೊಂಡಿದ್ದು, ತಾಲಿಬಾನ್‌ ಬಂಡುಕೋರರ ಜೊತೆಗೇ ಅಧಿಕಾರ ಹಂಚಿಕೊಳ್ಳಲು ಮುಂದಾಗಿದೆ. ಬಂಡುಕೋರರು ಮಾತುಕತೆಗೆ ಬಂದರೆ ಅವರಿಗೆ ಒಂದಷ್ಟುಪ್ರದೇಶಗಳನ್ನು ನೀಡಿ, ಇನ್ನುಳಿದ ಪ್ರದೇಶಗಳ ಆಡಳಿತವನ್ನು ತಾನು ಉಳಿಸಿಕೊಳ್ಳಬೇಕು ಎಂಬುದು ಸರ್ಕಾರದ ಯೋಜನೆಯಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

90 ದಿನದಲ್ಲಿ ರಾಜಧಾನಿ ಕಾಬೂಲ್‌ ವಶ?

ತಾಲಿಬಾನ್‌ ಬಂಡುಕೋರರು ಆಷ್ಘಾನಿಸ್ತಾನದ ನಗರಗಳನ್ನು ಆಕ್ರಮಿಸಿಕೊಳ್ಳುತ್ತಿರುವ ವೇಗ ನೋಡಿದರೆ ಇನ್ನು 90 ದಿನದಲ್ಲಿ ದೇಶದ ರಾಜಧಾನಿ ಕಾಬೂಲ್‌ ನಗರವನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ಅಮೆರಿಕದ ಗುಪ್ತಚರ ದಳ ಹೇಳಿದೆ. ಈಗಾಗಲೇ ತಾಲಿಬಾನಿಗಳು ದೇಶದ ಮೂರನೇ ಎರಡು ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ತಿಂಗಳಾಂತ್ಯಕ್ಕೆ ಅಮೆರಿಕದ ಸೇನೆ ಕೂಡ ಪೂರ್ಣ ಪ್ರಮಾಣದಲ್ಲಿ ವಾಪಸ್‌ ಹೋಗಲಿದೆ. ನಂತರ ಶರವೇಗದಲ್ಲಿ ತಾಲಿಬಾನಿಗಳು ರಾಜಧಾನಿಯನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios