ಸುಡಾನ್‌ನಲ್ಲಿ ಉಕ್ರೇನ್ ನಿರ್ಮಿತ ಮಿಲಿಟರಿ ವಿಮಾನ ಪತನಗೊಂಡು 46 ಜನರು ಸಾವನ್ನಪ್ಪಿದ್ದಾರೆ. ಮಿಲಿಟರಿ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿರುವಾಗಲೇ ಈ ದುರಂತ ಸಂಭವಿಸಿದೆ.

ಉಕ್ರೇನ್ ನಿರ್ಮಿತ ಸುಡಾನ್ ಮಿಲಿಟರಿ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ ಒಟ್ಟು 46 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಮಾನದಲ್ಲಿ ಸೇನಾ ಸಿಬ್ಬಂದಿ ಹಾಗೂ ನಾಗರಿಕರು ಇದ್ದರು. ಸುಡಾನ್‌ನ ಒಮ್ಡುರ್‌ಮ್ಯಾನ್‌ನಲ್ಲಿ ಈ ಘಟನೆ ನಡೆದಿದೆ. ವಾಡಿ ಸಯೀದ್ನಾ ವಾಯುನೆಲೆಯಿಂದ ಹಾರಿದ ಈ ಸೇನಾ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿದೆ. ಸುಡಾನ್‌ನಲ್ಲಿ ಮಿಲಿಟರಿ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಗಮನಾರ್ಹ ಸಾವುನೋವುಗಳು ಮತ್ತು ತೀವ್ರ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿರುವಾಗಲೇ ಈ ವಿಮಾನ ಪತನ ಸಂಭವಿಸಿದೆ. 

ಉಕ್ರೇನಿಯನ್ ಕಂಪನಿಯೊಂದು ತಯಾರಿಸಿದ ಪತನಕ್ಕೀಡಾದ ಈ ಆಂಟೊನೊವ್ ವಿಮಾನವು ವಾಡಿ ಸಯೀದ್ನಾ ವಾಯುನೆಲೆಯಿಂದ ಟೇಕಾಫ್ ಆದ ಕೆಲ ನಿಮಿಷಗಳ ನಂತರ ಓಮ್ಡುರ್ಮನ್‌ನ ಉತ್ತರಕ್ಕೆ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ. ದುರಂತದಿಂದಾದ ಸಾವು ನೋವುಗಳನ್ನು ಸೇನೆ ಖಚಿತಪಡಿಸಿದರೂ ಅಪಘಾತದ ಕಾರಣದ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಈ ದುರಂತದಲ್ಲಿ ಮೃತರಾದವರ ಶವಗಳನ್ನು ಓಮ್‌ಡರ್ಮನ್‌ನ, ನೌ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ಮಾಡಿದೆ. ಇದೇ ದುರಂತದಲ್ಲಿ ಗಾಯಗೊಂಡು ಬದುಕುಳಿದ ಇಬ್ಬರು ಯುವ ಸಹೋದರರು ಸೇರಿದಂತೆ ಐದು ಗಾಯಗೊಂಡ ನಾಗರಿಕರಿಗೆ ಅಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಡಾನ್‌ನಲ್ಲಿ 2023 ರ ಏಪ್ರಿಲ್‌ನಿಂದಲೂ ಅಂತರಿಕ ಯುದ್ಧ ನಡೆಯುತ್ತಿದೆ. ಅಲ್ಲಿನ ಮಿಲಿಟರಿ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF)ನಡುವಿನ ಉದ್ವಿಗ್ನ ಸ್ಥಿತಿ ಇದೆ. ಈ ಯುದ್ಧವು ವಿಶೇಷವಾಗಿ ಸುಡಾನ್‌ನ ನಗರ ಪ್ರದೇಶಗಳಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ ಮತ್ತು ವಿಶೇಷವಾಗಿ ಡಾರ್ಫರ್ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಜನಾಂಗೀಯ ಪ್ರೇರಿತ ಹತ್ಯೆಗಳು ಸೇರಿದಂತೆ ಅನೇಕ ದೌರ್ಜನ್ಯಕ್ಕೆ ಕಾರಣವಾಗಿದೆ. ರಾಜಧಾನಿ ಖಾರ್ಟೌಮ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಲ್ಲಿನ ಸೇನೆಯೂ ಆರ್‌ಎಸ್‌ಎಫ್ ವಿರುದ್ಧ ಹೋರಾಟ ನಡೆಸುತ್ತಿದೆ. 

ಈಗ ಓಮ್‌ಡರ್ಮನ್‌ನಲ್ಲಿ ನಡೆದ ಈ ವಿಮಾನ ದುರಂತದಿಂದ ಇಲ್ಲಿನ ಸೇನೆ ಹಾಗೂ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಎರಡೂ ಬಣಗಳು ತಮ್ಮ ವಿರೋಧಿಗಳ ಆಸ್ತಿಯನ್ನು ಗುರಿಯಾಗಿಸಿ ದಾಳಿ ಮಾಡುತ್ತಿವೆ. ಈ ವಿಮಾನ ದುರಂತಕ್ಕೆ ಕೇವಲ ಒಂದು ದಿನ ಮೊದಲು, ದಕ್ಷಿಣ ಡಾರ್ಫರ್‌ನ ನೈಲಾದಲ್ಲಿ ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದ ಜವಾಬ್ದಾರಿಯನ್ನು ಆರ್‌ಎಸ್‌ಎಫ್ ಹೊತ್ತುಕೊಂಡಿದೆ. ಏತನ್ಮಧ್ಯೆ, ಡಾರ್ಫರ್ ಮತ್ತು ಸುಡಾನ್‌ನ ಇತರ ಪ್ರದೇಶಗಳಲ್ಲಿ ಗಮನಾರ್ಹ ಪ್ರದೇಶವನ್ನು ಹೊಂದಿರುವ ಆರ್‌ಎಸ್‌ಎಫ್ ವಿರುದ್ಧ ಸೇನೆಯು ತನ್ನ ದಾಳಿಯನ್ನು ಮುಂದುವರೆಸಿದೆ.

ಈಗ ನಡೆಯುತ್ತಿರುವ ಸಂಘರ್ಷವು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಈ ಅಂತರಿಕ ಕಲಹದಲ್ಲಿ ಇದುವರೆಗೆ 24,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ನಂತಹ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಉತ್ತರ ಡಾರ್ಫರ್‌ನಲ್ಲಿರುವ ಬರಗಾಲ ಪೀಡಿತ ಝಮ್‌ಜಮ್ ಶಿಬಿರದಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿವೆ. ಜೊತೆಗೆ ಅಲ್ಲಿನ ರಸ್ತೆಗಳು ಅಸುರಕ್ಷಿತ ಮತ್ತು ನೆರವು ವಿತರಣೆ ಹೆಚ್ಚು ಕಷ್ಟಕರವಾಗಿರುವುದರಿಂದ ವೈದ್ಯಕೀಯ ಆರೈಕೆಯ ಅಗತ್ಯವಿರುವವರು ಸೇರಿದಂತೆ ಅನೇಕ ನಾಗರಿಕರು ಯುದ್ಧದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.

Scroll to load tweet…