*  ಭೀಕರ ಚಳಿ, ಹಿಮ ಕರಗಿಸಿ ಕುಡಿವ ದುಸ್ಥಿತಿ*  ನಮಗೇನಾದರೂ ಆದರೆ ಭಾರತವೇ ಹೊಣೆ: ವಿಡಿಯೋ ಬಿಡುಗಡೆ*  ಆತುರ ಬೇಡ, ಅಲ್ಲೇ ಇರಿ: ಭಾರತ ಸರ್ಕಾರದ ಸೂಚನೆ 

ಕೀವ್‌/ನವದೆಹಲಿ(ಮಾ.06): ಉಕ್ರೇನಿನ(Ukraine) ಸುಮಿ ನಗರದಲ್ಲಿ ರಷ್ಯಾ(Russia) ಸೇನಾಪಡೆಗಳು ಕ್ಷಿಪಣಿ ಹಾಗೂ ಬಾಂಬ್‌ಗಳ ಮೂಲಕ ಭಾರಿ ದಾಳಿ ನಡೆಸುತ್ತಿದ್ದು, ಅಲ್ಲಿ ಸಿಲುಕಿರುವ 700ಕ್ಕೂ ಹೆಚ್ಚು ಭಾರತೀಯರ(Indians) ಪರಿಸ್ಥಿತಿ ಅಯೋಮಯವಾಗಿದೆ. ಸರಿಯಾಗಿ ನೀರು, ಊಟ ಇಲ್ಲದೆ ಕೊರೆವ ಚಳಿ ಹಾಗೂ ಯುದ್ಧದ ತೀವ್ರತೆಗೆ ಬೆಚ್ಚಿಬಿದ್ದಿರುವ ಈ ಭಾರತೀಯರು, ಭಾರತ ಸರ್ಕಾರಕ್ಕೆ ಗಂಭೀರ ಸಂದೇಶ ರವಾನಿಸಿದ್ದಾರೆ. ‘ನಮಗೆ ಭಾರೀ ಅಪಾಯ ಕಾದಿದೆ. ಇನ್ನು ನಾವು ಇಲ್ಲಿ ಇರುವುದಿಲ್ಲ. ರಷ್ಯಾ ಗಡಿಯತ್ತ ಸಾಗುತ್ತೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಕರೆದೊಯ್ಯಿರಿ. ಇಲ್ಲದೇ ಹೋದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಹೊಣೆ’ ಎಂದು ಎಚ್ಚರಿಸಿದ್ದಾರೆ.

ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ‘ಸುಮಿಯಲ್ಲಿನ ಸ್ಥಿತಿ ಕಳವಳಕಾರಿಯಾಗಿದೆ. ಹೀಗಾಗಿ ಎಲ್ಲ ಭಾರತೀಯ ವಿದ್ಯಾರ್ಥಿಗಳು(Indian Students) ಸುರಕ್ಷಿತ ಕ್ರಮ ಕೈಗೊಂಡು, ನಿಗದಿತ ಶೆಲ್ಟರ್‌ಗಳಲ್ಲೇ ಇರಬೇಕು. ಧೈರ್ಯದಿಂದ ಇರಿ. ಅನಗತ್ಯ ಅಪಾಯ ತಂದುಕೊಳ್ಳಬೇಡಿ. ಎಲ್ಲರ ಸುರಕ್ಷಿತ ತೆರವಿಗೆ ಭಾರತ ಸರ್ಕಾರ(Government of India) ಯತ್ನಿಸುತ್ತಿದೆ’ ಎಂದಿದೆ. ಅಲ್ಲದೆ, ‘ಈ ಕೂಡಲೇ ಸುಮಿ ನಗರದಲ್ಲಿ ಕದನ ವಿರಾಮ ಘೋಷಿಸಿ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ರಷ್ಯಾ ಮತ್ತು ಉಕ್ರೇನ್‌ಗೆ ಮನವಿ ಮಾಡಿದೆ. ಉಕ್ರೇನ್‌ ಸರ್ಕಾರ ಕೂಡ ‘ಇವರ ಸುರಕ್ಷಿತ ತೆರವಿಗೆ ಯತ್ನ ನಡೆದಿದೆ’ ಎಂದು ಹೇಳಿದೆ.

Russia Ukraine Crisis: ಮತ್ತೊಂದು ಅಣುಸ್ಥಾವರ ವಶದತ್ತ ರಷ್ಯಾ!

ವಿದ್ಯಾರ್ಥಿಗಳ ಅಳಲು:

ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದು, ತಮ್ಮ ದಯನೀಯ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಯಾವುದೇ ಸಹಾಯ ಸಿಗದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೇ ಶೆಲ್‌ ದಾಳಿಯ ನಡುವೆಯೇ ರಷ್ಯಾ ಗಡಿಯತ್ತ ಸಾಗುವ ಸಾಹಸಕ್ಕೆ ಕೈ ಹಾಕಿದ್ದಾರೆ.

‘ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಆಹಾರ, ತೀವ್ರ ಕೊರತೆ ಕಾಡುತ್ತಿದೆ. ದಿನವಿಡೀ ವೈಮಾನಿಕ ದಾಳಿ ಹಾಗೂ ಸೇನೆಯ ಸೈರನ್‌ಗಳು ಕೇಳಿ ಬರುತ್ತಿವೆ. ಪಾಸ್‌ಪೋರ್ಟ್‌ನೊಂದಿಗೆ ನಾವೆಲ್ಲ ಬಂಕರ್‌ಗಳಲ್ಲೇ ಅಡಗಿದ್ದೇವೆ. ಇಲ್ಲಿ ವಿದ್ಯುತ್‌ ಇಲ್ಲ. ಮೊಬೈಲ್‌ನ ಬ್ಯಾಟರಿ ಯಾವುದೇ ಸಮಯದಲ್ಲೂ ಖಾಲಿಯಾಗಿ ನಮಗಿರುವ ಸಂಪರ್ಕದ ಏಕೈಕ ಮಾರ್ಗವೂ ನಿಂತುಹೋಗಬಹುದು’ ಎಂದಿದ್ದಾರೆ.

‘ಆಹಾರ, ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ವಿಪರೀತ ಚಳಿ ಇದೆ. ಬಾಯಾರಿಕೆ ನೀಗಿಸಿಕೊಳ್ಳಲು ಹಿಮವನ್ನು ಬಕೆಟ್‌ಗಳಲ್ಲಿ ತುಂಬಿಸಿಕೊಂಡು ನೀರು ಮಾಡಿಕೊಂಡು ಕುಡಿಯುತ್ತಿದ್ದೇವೆ’ ಎಂದು ಸುಮಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿ ಮಾಲವಿಕಾ ಮನೋಜ್‌ ಹೇಳಿದ್ದಾರೆ.

‘ಬಂಕರ್‌ಗಳಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದ ಕಾರಣ ನಾವು ಆಹಾರ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ನೀರಿನ ಕೊರತೆಯಿಂದಾಗಿ ಅಡುಗೆ ಮಾಡುವುದನ್ನು ನಿಲ್ಲಿಸಿ ಕೇವಲ ಬಿಸ್ಕಿಟ್‌ ತಿಂದು ದಿನ ಕಳೆಯುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ನಾವು ಹೆಚ್ಚಿನ ದಿನ ಬದುಕಲು ಸಾಧ್ಯವಿಲ್ಲ’ಎಂದು ಇನ್ನೋರ್ವ ವಿದ್ಯಾರ್ಥಿನಿ ನೀಲಿಮಾ ದಾಸ್‌ ಹೇಳಿದ್ದಾರೆ.

‘ಸುಮಿಯಲ್ಲಿರುವ ಭಾರತೀಯರು ರಷ್ಯಾದ ಗಡಿಯಿಂದ ಕೇವಲ 65 ಕಿಮೀ ದೂರದಲ್ಲಿದ್ದಾರೆ. ಆದರೆ ಈ 65 ಕಿಮೀ ಅಂತರವನ್ನು ತೀವ್ರ ಯುದ್ಧದ ನಡುವೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಉಕ್ರೇನಿನ ಸರ್ಕಾರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪ್ರಯಾಣಿಸಲು ಅನುಮತಿ ನೀಡುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Russia Ukraine Crisis: ಭಾರತೀಯರ ತೆರವಿಗೆ ವ್ಯವಸ್ಥೆ, ವಿಶ್ವಸಂಸ್ಥೆಯಲ್ಲೂ ರಷ್ಯಾ ಭರವಸೆ

‘ಮೂಲಭೂತ ಸೌಕರ್ಯಗಳಿರದೇ ಇನ್ನೊಂದು ದಿನವೂ ನಾವಿಲ್ಲಿ ಕಳೆಯಲು ಸಾಧ್ಯವಿಲ್ಲ. ಕೂಡಲೇ ನಮ್ಮನ್ನು ರಕ್ಷಿಸಿ ಎಂದು ಭಾರತ ಸರ್ಕಾರಕ್ಕೆ ಕೊನೆಯ ಬಾರಿ ವಿನಂತಿಸುತ್ತಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳೆಲ್ಲ ಸೇರಿ ಬಾಂಬ್‌, ಶೆಲ್‌ ದಾಳಿಯ ನಡುವೆಯೂ ರಷ್ಯಾ ಗಡಿಯತ್ತ ಹೊರಟಿದ್ದೇವೆ. ನಮಗೆ ಮಾರ್ಗಮಧ್ಯೆ ಏನಾದರೂ ಆಪರೇಶನ್‌ ಗಂಗಾ ವಿಫಲವಾಗಲಿದೆ ಹಾಗೂ ಸರ್ಕಾರವೇ ಇದಕ್ಕೆ ಹೊಣೆಯಾಗಲಿದೆ’ ಎಂದು ವಿದ್ಯಾರ್ಥಿಗಳು ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ.

ಎಲ್ಲಿದೆ ಸುಮಿ?:

ಸುಮಿಯು ರಷ್ಯಾದ ಗಡಿಯ ಸಮೀಪದಲ್ಲಿದ್ದು, ಉಕ್ರೇನಿನ ನೆರೆಯ ರಾಷ್ಟ್ರಗಳಾದ ಪೊಲೆಂಡ್‌, ಹಂಗೇರಿ ಸ್ಲೋವಾಕಿಯಾದಿಂದ 1200 ಕಿಮೀ ದೂರವಿದೆ. ವಿದ್ಯಾರ್ಥಿಗಳು ಅಲ್ಲಿಗೆ ತಲುಪುವುದು ಅಸಾಧ್ಯವಾಗಿದೆ, ಹೀಗಾಗಿ ಗುರುವಾರ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಉಕ್ರೇನಿನಿಂದ ರಷ್ಯಾಗೆ ಸ್ಥಳಾಂತರಿಸಲು ರಷ್ಯಾದ ಗಡಿಯಲ್ಲಿ 130 ಬಸ್‌ಗಳನ್ನು ಸಿದ್ಧವಾಗಿಡಲಾಗಿದೆ ಎಂದು ರಷ್ಯಾದ ಕರ್ನಲ್‌ ಜನರಲ್‌ ಮಿಖಾಯಿಲ್‌ ಮಿಂಝಿಟ್‌ಸೆವ್‌ ಘೋಷಿಸಿದ್ದರು. ಆದರೆ ಬಸ್‌ ಸಂಚಾರ ಇನ್ನೂ ಶುರು ಆಗಿಲ್ಲ. ಈ ಹಿನ್ನೆಲೆ ಕದನ ವಿರಾಮ ಘೋಷಣೆಯಾಗದಿದ್ದರೂ ವಿದ್ಯಾರ್ಥಿಗಳು ರಷ್ಯಾ ಗಡಿಯತ್ತ ಸಾಗಲು ನಿರ್ಧರಿಸಿದ್ದಾರೆ.