ಶ್ರೀಲಂಕಾದ ಅಧ್ಯಕ್ಷರು ಭಾರತದ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ತಮ್ಮ ನೆಲವನ್ನು ಬಳಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿಯವರು ಲಂಕಾದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ.

ಕೊಲಂಬೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ‘ಭಾರತದ ಭದ್ರತೆಗೆ ಹಾನಿ ಮಾಡುವಂತಹ ಯಾವುದೇ ಚಟುವಟಿಕೆಗಳಿಗೆ ಶ್ರೀಲಂಕಾದ ಭೂಮಿಯನ್ನು ಬಳಸಲು ಬಿಡುವುದಿಲ್ಲ’ ಎಂದು ಶ್ರೀಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ. ಲಂಕೆಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯಲು ಯತ್ನಿಸುತ್ತಿದ್ದ ಚೀನಾಗೆ ಇದರಿಂದ ಭಾರಿ ಹಿನ್ನಡೆಯಾಗಿದೆ.

3 ದಿನಗಳ ಲಂಕಾ ಪ್ರವಾಸದಲ್ಲಿರುವ ಮೋದಿ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಸ್ಸಾನಾಯಕೆ, ‘ಅಗತ್ಯ ಸಮಯದಲ್ಲಿ ಭಾರತ ನೀಡಿದ ನೆರವು ಹಾಗೂ ನಿರಂತರ ಒಗ್ಗಟ್ಟನ್ನು ಲಂಕಾ ಸದಾ ಸ್ಮರಿಸುತ್ತದೆ. ಭಾರತದ ಭದ್ರತೆಗೆ ಹಾನಿ ಮಾಡುವಂತಹ ಹಾಗೂ ಪ್ರಾದೇಶಿಕ ಭದ್ರತೆಗೆ ಧಕ್ಕೆ ಆಗುವಂಥ ಯಾವುದೇ ಚಟುವಟಿಕೆಗಳಿಗೆ ಶ್ರೀಲಂಕಾದ ಭೂಮಿಯನ್ನು ಬಳಸಲು ನಾವು ಬಿಡುವುದಿಲ್ಲ’ ಎಂದು ಹೇಳಿದರು.

ಮೋದಿ ಕೃತಜ್ಞತೆ:
ಬಳಿಕ ಮಾತನಾಡಿದ ಮೋದಿ, ‘ಎರಡೂ ದೇಶಗಳ ಭದ್ರತಾ ಆಸಕ್ತಿಗಳು ಸಾಮ್ಯವಾಗಿವೆ. ಭಾರತದ ಆಸಕ್ತಿಯ ಬಗ್ಗೆ ದಿಸಾನಾಯಕೆ ಅವರ ಸೂಕ್ಷ್ಮತೆಗೆ ಕೃತಜ್ಞನಾಗಿದ್ದೇನೆ’ ಎಂದರು. ಅಲ್ಲದೆ, ಶ್ರೀಲಂಕಾದಲ್ಲಿನ ಭಾರತೀಯರ ರಕ್ಷಣೆಗೆ ಸಲಕ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ಅಂತೆಯೇ, ಸಾಂಪುರ ಸೌರ ವಿದ್ಯುತ್ ಸ್ಥಾವರಕ್ಕೆ ಉಭಯ ನಾಯಕರು ವರ್ಚುವಲ್‌ ಚಾಲನೆ ನೀಡಿದರು. ‘ಇದರಿಂದ ಲಂಕಾಗೆ ವಿದ್ಯುತ್‌ ಭದ್ರತೆ ದೊರಯುತ್ತದೆ. ವಿವಿಧ ವಸ್ತುಗಳ ಸಾಗಣೆಗೆ ನಿರ್ಮಿಸಲಾಗುವ ಪೈಪ್‌ಲೈನ್‌ನಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ’ ಎಂದು ಮೋದಿ ಬಣ್ಣಿಸಿದರು.

ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ

ಮೋದಿಗೆ ಶ್ರೀಲಂಕಾದ ಅತ್ಯುಚ್ಚ ನಾಗರಿಕ ಗೌರವ
 ಶ್ರೀಲಂಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕೆಯ ಅತ್ಯುಚ್ಚ ನಾಗರಿಕ ಗೌರವವಾದ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಶನಿವಾರ ಪ್ರದಾನ ಮಾಡಿದ್ದಾರೆ. ಇದರೊಂದಿಗೆ ಮೋದಿ ಅವರು 22 ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದಂತಾಗಿದೆ.2008ರಲ್ಲಿ ಮಹಿಂದ ರಾಜಪಕ್ಸೆ ಅವಧಿಯಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಪ್ರತಿ ಮೋದಿಯವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ.

ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರಿಗೆ ಪ್ರಶಸ್ತಿ ಫಲಕದೊಂದಿಗೆ, ಲಂಕಾದ 9 ವಿಧದ ರತ್ನ, ತಾವರೆ, ಭೂಗೋಳ, ಸೂರ್ಯ, ಚಂದ್ರ, ಭತ್ತದ ತೆನೆಯ ಚಿಹ್ನೆಯುಳ್ಳ ಬೆಳ್ಳಿಯ ಪದಕ ತೊಡಿಸಲಾಯಿತು. ಬಳಿಕ ಮಾತನಾಡಿದ ಮೋದಿ, ‘ಇದನ್ನು ಪಡೆಯುವುದು ನನ್ನ ಪಾಲಿಗೆ ಹಾಗೂ 1.4 ಶತಕೋಟಿ ಭಾರತೀಯರ ಪಾಲಿಗೆ ಗೌರವವಾಗಿದೆ’ ಎಂದು ಹರ್ಷಿಸಿದರು.ಮಿತ್ರ ವಿಭೂಷಣ ಪ್ರಶಸ್ತಿಯನ್ನು ಈ ಮೊದಲು ಮಾಲ್ಡೀವ್ಸ್‌ನ ಪ್ರಧಾನಿ ಮೌಮೂನ್ ಅಬ್ದುಲ್ ಗಯೂಮ್ ಹಾಗೂ ಪ್ಯಾಲೆಸ್ತೀನ್‌ನ ನಾಯಕರಾಗಿದ್ದ ಯಾಸಿರ್‌ ಅರಾಫತ್‌ ಅವರಿಗೆ ಕೊಡಲಾಗಿತ್ತು.

ಇದನ್ನೂ ಓದಿ: ಅಮೆರಿಕ ಸಂಸತ್ತಿನ ಮೇಲ್ಮನೆಯಲ್ಲಿ ಸತತ 25 ತಾಸು ಭಾಷಣ ಮಾಡಿದ ಸಂಸದ ಕೋರಿ ಬೂಕರ್‌ !

Scroll to load tweet…
Scroll to load tweet…
Scroll to load tweet…