ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕಾದ 26% ಸುಂಕದ ನೇರ ಹೊಡೆತ ಭಾರತದ ಇಲೆಕ್ಟ್ರಾನಿಕ್ಸ್, ಹವಳಗಳು, ಮತ್ತು ಒಡವೆಗಳ ಉದ್ಯಮಗಳ ಮೇಲೆ ಬೀರಲಿದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತೀಯ ಕಾಲಮಾನದಲ್ಲಿ ಗುರುವಾರ ಬೆಳಗಿನ ವೇಳೆ ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ನೂತನ ಸುಂಕ ನೀತಿಯನ್ನು ಘೋಷಿಸಿ, ಭಾರತ ಅಮೆರಿಕಾಗೆ ರಫ್ತು ಮಾಡುವ ಎಲ್ಲಾ ಉತ್ಪನ್ನಗಳ ಮೇಲೆ 26% ಸುಂಕ ಘೋಷಿಸಿದರು. ಟ್ರಂಪ್ ಅವರ ಈ ನಡೆ ಭಾರತದ ಪ್ರಮುಖ ಉದ್ಯಮಗಳನ್ನು ನಲುಗಿಸಬಲ್ಲದು. ಆದರೆ, ಈ ಸುಂಕ ನೀತಿಯಿಂದಾಗಿ ವ್ಯಾಪಾರ ವಿಧಾನಗಳು ಬದಲಾಗುವ ಸಾಧ್ಯತೆಗಳಿದ್ದು, ಒಂದಷ್ಟು ಆಶ್ಚರ್ಯಕರ ಪ್ರಯೋಜನಗಳೂ ಲಭಿಸಬಹುದು.
ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರದ ಉತ್ಪನ್ನಗಳು: ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕಾದ 26% ಸುಂಕದ ನೇರ ಹೊಡೆತ ಭಾರತದ ಇಲೆಕ್ಟ್ರಾನಿಕ್ಸ್, ಹವಳಗಳು, ಮತ್ತು ಒಡವೆಗಳ ಉದ್ಯಮಗಳ ಮೇಲೆ ಬೀರಲಿದೆ. ಅಮೆರಿಕಾ ಭಾರತದಿಂದ ಅಂದಾಜು 14 ಬಿಲಿಯನ್ ಡಾಲರ್ ಮೌಲ್ಯದ ಇಲೆಕ್ಟ್ರಾನಿಕ್ಸ್ ಮತ್ತು 9 ಬಿಲಿಯನ್ ಡಾಲರ್ ಮೌಲ್ಯದ ಹವಳಗಳು ಮತ್ತು ಒಡವೆಗಳನ್ನು ಖರೀದಿಸುತ್ತದೆ. ಆದ್ದರಿಂದ ಈ ವಲಯಗಳು ವಿಶೇಷವಾಗಿ ಸುಂಕದ ಹೊಡೆತ ಎದುರಿಸಲಿವೆ. ಸುಂಕದಲ್ಲಿನ ಹೆಚ್ಚಳಕ್ಕೂ ಮುನ್ನ, ಅಮೆರಿಕಾ ಭಾರತದ ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಕೇವಲ 0.41% ಸರಾಸರಿ ಸುಂಕ ವಿಧಿಸಿದ್ದರೆ, ಆಭರಣ ಉದ್ಯಮದ ಮೇಲೆ 2.12% ಸರಾಸರಿ ಸುಂಕ ವಿಧಿಸಲಾಗಿತ್ತು. ಭಾರತದಿಂದ ರಫ್ತಾಗುವ ವಾಹನ ಬಿಡಿಭಾಗಗಳ ಮೇಲೆ ಈ ನೂತನ 26% ಸುಂಕ ವಿಧಿಸುತ್ತಿಲ್ಲ. ಆದರೂ ಈ ಉದ್ಯಮದ ಮೇಲೆ ಹಿಂದಿನ 25% ಸುಂಕ ವಿಧಿಸಲಾಗುತ್ತದೆ.
ಸಿಯಾಚಿನ್‌ನ ರಕ್ಷಣೆಗೆ ತುಮಕೂರಿನ ಪ್ರಚಂಡರು: ಸೇನೆಗೆ ಸೇರ್ಪಡೆಯಾಗಲಿವೆ 156 ಎಚ್ಎಎಲ್ ಪ್ರಚಂಡ್ ಹೆಲಿಕಾಪ್ಟರ್‌ಗಳು
ಟ್ರಂಪ್ ಸುಂಕದಿಂದ ವಿನಾಯಿತಿ ಹೊಂದಿರುವ ಉದ್ಯಮಗಳು: ವ್ಯಾಪಾರದಲ್ಲಿ ಬಹುತೇಕ 9 ಬಿಲಿಯನ್ ಡಾಲರ್ ಔಷಧಿ ಮತ್ತು ಇಂಧನ ರಫ್ತು ವಲಯ ಟ್ರಂಪ್ ನೂತನ ರಫ್ತು ನೀತಿಗೆ ತುತ್ತಾಗುವುದಿಲ್ಲ. ಇದಕ್ಕೆ ವಿನಾಯಿತಿ ನೀಡುವಂತೆ ಟ್ರಂಪ್ ವಿಶೇಷ ಆಡಳಿತ ಆದೇಶವನ್ನು ನೀಡಿದ್ದಾರೆ. ಔಷಧ ಉದ್ಯಮಗಳ ಮೇಲೂ ಸುಂಕ ವಿಧಿಸುವುದಾಗಿ ಟ್ರಂಪ್ ಹಿಂದೆ ಎಚ್ಚರಿಕೆ ನೀಡಿದ್ದರೂ, ಸದ್ಯದ ಮಟ್ಟಿಗೆ ಔಷಧ ವಲಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ ಮುಂದೆ ಏನಾಗಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
ಅಮೆರಿಕಾದ ಆಮದು ಸುಂಕದಿಂದ ವಿನಾಯಿತಿ ಹೊಂದಿರುವ ಉತ್ಪನ್ನಗಳು
* ತಾಮ್ರ, ಔಷಧಗಳು, ಸೆಮಿಕಂಡಕ್ಟರ್‌ಗಳು, ಮತ್ತು ಮರ
* ಬುಲಿಯನ್: ಚಿನ್ನ ಮತ್ತು ವಜ್ರಗಳಂತಹ ಬೆಲೆಬಾಳುವ ಲೋಹಗಳು
* ಇಂಧನ ಮತ್ತು ಖನಿಜಗಳು: ಅಮೆರಿಕಾದ ಬಳಿ ಲಭ್ಯವಿರದ ಕೆಲವು ಇಂಧನ ಉತ್ಪನ್ನಗಳು ಮತ್ತು ಖನಿಜಗಳ ಮೇಲೆ ಸುಂಕ ವಿನಾಯಿತಿ ನೀಡಲಾಗಿದೆ.
ಭಾರತದ ವಸ್ತ್ರ ಉದ್ಯಮಕ್ಕೆ ಪ್ರಯೋಜನಕರ: ಇತರ ದೇಶಗಳಿಗೆ ಹೋಲಿಸಿದರೆ, ಭಾರತಕ್ಕೆ ಒಂದಷ್ಟು ಮೇಲುಗೈ ಲಭಿಸಬಹುದು. ವಿಯೆಟ್ನಾಂ ವಸ್ತ್ರೋದ್ಯಮದ ಮೇಲೆ ಅಮೆರಿಕಾ 46% ಭಾರೀ ಸುಂಕ ವಿಧಿಸಿದ್ದರೆ, ಬಾಂಗ್ಲಾದೇಶದ ಉದ್ಯಮದ ಮೇಲೆ 37% ಹಾಗೂ ಚೀನೀ ವಸ್ತ್ರೋದ್ಯಮದ ಮೇಲೆ 34% ಸುಂಕ ವಿಧಿಸಲಾಗಿದೆ.
ಭಾರತ vs ಇತರ ದೇಶಗಳು: ಗುರುವಾರ ಭಾರತದ ವಾಣಿಜ್ಯ ಸಚಿವಾಲಯ ಸುಂಕಗಳು ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದರ ಕುರಿತು ಅನ್ವೇಷಣೆ ನಡೆಸುವುದಾಗಿ ಹೇಳಿದೆ. ಹಾಗೆಂದು ಇದು ಭಾರತದ ಪಾಲಿಗೆ ಬರೀ ಕೆಟ್ಟ ಸುದ್ದಿಯೇನಲ್ಲ. ಇದರಿಂದಾಗಿ ಭಾರತಕ್ಕೆ ಪ್ರಯೋಜನಗಳೂ ಲಭಿಸಲಿವೆ. ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ (ಎಫ್ಐಇಒ) ಸುಂಕದಿಂದಾಗುವ ಪ್ರಯೋಜನವನ್ನೂ ಒಪ್ಪಿಕೊಂಡಿದ್ದು, ಅಮೆರಿಕಾದೊಡನೆ ವ್ಯವರಿಸುವ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದಿದೆ. ಎಫ್ಐಇಒ ಮಹಾನಿರ್ದೇಶಕರು ಮತ್ತು ಸಿಇಒ ಆಗಿರುವ ಅಜಯ್ ಸಹಾಯ್ ಅವರು "ಅಮೆರಿಕಾ ವಿಧಿಸುವ ಸುಂಕಗಳಿಂದ ಉಂಟಾಗುವ ಪರಿಣಾಮಗಳೇನು ಎಂದು ನಾವು ಸೂಕ್ಷ್ಮವಾಗಿ ಅಧ್ಯಯನ ನಡೆಸಬೇಕಿದೆ.
ಆದರೆ, ಇತರ ದೇಶಗಳ ಮೇಲೆ ಅಮೆರಿಕಾ ವಿಧಿಸಿರುವ ಸುಂಕಗಳಿಗೆ ಹೋಲಿಸಿದರೆ, ಭಾರತದ ಮೇಲಿನ ಸುಂಕದ ದರ ಕಡಿಮೆಯಾಗಿದ್ದು, ಭಾರತ ಒಂದಷ್ಟು ಮೇಲುಗೈ ಹೊಂದಿದೆ" ಎಂದಿದ್ದಾರೆ. ಇತರ ಏಷ್ಯನ್ ದೇಶಗಳ ಮೇಲೆ ಅಮೆರಿಕಾ ಇನ್ನಷ್ಟು ಕಠಿಣವಾದ ಸುಂಕಗಳನ್ನು ವಿಧಿಸಿದೆ. ಚೀನಾದ ರಫ್ತಿನ ಮೇಲೆ 34% ಸುಂಕ, ಜಪಾನ್ ಮೇಲೆ 24% ಸುಂಕ, ಥೈಲ್ಯಾಂಡ್ ಮೇಲೆ 36% ಸುಂಕ, ಮಲೇಷ್ಯಾ ಮೇಲೆ 24% ಸುಂಕ, ತೈವಾನ್ ಮೇಲೆ 32%, ದಕ್ಷಿಣ ಕೊರಿಯಾ ಮೇಲೆ 25%, ಹಾಗೂ ವಿಯೆಟ್ನಾಂ ಮೇಲೆ 46% ಸುಂಕ ವಿಧಿಸಲಾಗಿದೆ. ಈ ಹೆಚ್ಚಿನ ಸುಂಕದ ದರಗಳು ಭಾರತೀಯ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಹೆಚ್ಚಿಸಲು ಉತ್ತಮ ಅವಕಾಶಗಳನ್ನು ತೆರೆದಿವೆ.
2024ರಲ್ಲಿ ಭಾರತದ ವ್ಯಾಪಾರದ ಮೇಲುಗೈ: 2024ರಲ್ಲಿ ಭಾರತ ಅಮೆರಿಕಾದಿಂದ 41.8 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದ್ದು, 87.4 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಭಾರತ ಅಮೆರಿಕಾಗೆ ನಡೆಸಿದ ವಸ್ತ್ರ ಮತ್ತು ಔಷಧಗಳ ಭಾರೀ ವ್ಯಾಪಾರದಿಂದಾಗಿ ಈ ಲಾಭ ಗಳಿಸಲಾಗಿದೆ. ಇದು ಅಮೆರಿಕಾದ ಸುಂಕ ಎದುರಿಸುತ್ತಿರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿಯನ್ನು ಬಹಳಷ್ಟು ಉತ್ತಮವಾಗಿಸಿದೆ. ಈಗಿನ ಸನ್ನಿವೇಶದಲ್ಲಿ ಭಾರತ ಮತ್ತು ಅಮೆರಿಕಾಗಳು ಹೊಸ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸುತ್ತಿದ್ದು, ಇದು ಅಮೆರಿಕಾದ ಸುಂಕವನ್ನು ಇನ್ನಷ್ಟು ಕಡಿಮೆಗೊಳಿಸುವ ಸಾಧ್ಯತೆಗಳಿವೆ.
ಸುನಿತಾ ವಿಲಿಯಮ್ಸ್ ದೀರ್ಘ ಬಾಹ್ಯಾಕಾಶ ಯೋಜನೆಯ ಪಾಠ: ಭವಿಷ್ಯದ ಅನ್ವೇಷಣೆಗಳಿಗೆ ಹೊಸರೂಪ
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
