ಮಹಿಳೆ ವಿರುದ್ಧ ಸರ್ ತನ್ ಸೇ ಜುದಾ ಘೋಷಣೆ : ಮತಾಂಧರ ವಿರುದ್ಧ ಕುವೈತ್ ವಸ್ತ್ರ ವಿನ್ಯಾಸ ಸಂಸ್ಥೆ ತೀವ್ರ ಆಕ್ರೋಶ
ಅರೇಬಿಕ್ ಲಿಪಿಯ ಪ್ರಿಂಟ್ ಇದ್ದ ಬಟ್ಟೆ ಧರಿಸಿ ಬಂದ ಮಹಿಳೆಯ ವಿರುದ್ಧ ಧರ್ಮ ನಿಂದನೆಯ ಆರೋಪ ಹೊರಿಸಿ ಜೀವ ಬೆದರಿಕೆ ಹಾಕಿ ಹಲ್ಲೆಗೆ ಮುಂದಾದ ಪಾಕಿಸ್ತಾನದ ಧರ್ಮಾಂದರ ವಿರುದ್ಧ ಮತ್ತೊಂದು ಮುಸ್ಲಿಂ ರಾಷ್ಟ್ರವಾಗಿರುವ ಕುವೈತ್‌ನ ವಸ್ತ್ರ ವಿನ್ಯಾಸ ಸಂಸ್ಥೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕರಾಚಿ: ದಿನಗಳ ಹಿಂದೆ ಪಾಕಿಸ್ತಾನದ ರೆಸ್ಟೋರೆಂಟ್ ಒಂದರಲ್ಲಿ ಅರೇಬಿಕ್ ಲಿಪಿಯ ಪ್ರಿಂಟ್ ಇದ್ದ ಬಟ್ಟೆ ಧರಿಸಿ ಬಂದ ಮಹಿಳೆಯ ವಿರುದ್ಧ ಧರ್ಮ ನಿಂದನೆಯ ಆರೋಪ ಹೊರಿಸಿ ಜೀವ ಬೆದರಿಕೆ ಹಾಕಿ ಹಲ್ಲೆಗೆ ಮುಂದಾದ ಪಾಕಿಸ್ತಾನದ ಧರ್ಮಾಂದರ ವಿರುದ್ಧ ಮತ್ತೊಂದು ಮುಸ್ಲಿಂ ರಾಷ್ಟ್ರವಾಗಿರುವ ಕುವೈತ್‌ನ ವಸ್ತ್ರ ವಿನ್ಯಾಸ ಸಂಸ್ಥೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತಿಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಅರೇಬಿಕ್ ಲಿಪಿಯ ಡಿಸೈನ್ ಪ್ರಿಂಟ್ ಇರುವ ಕುರ್ತಾ ಧರಿಸಿ ಆಗಮಿಸಿದ್ದರು. ಆದರೆ ಅಲ್ಲಿನ ಜನ ಈ ಅರೇಬಿಕ್ ಲಿಪಿಯ ಪ್ರಿಂಟ್ ಅನ್ನು ಕುರಾನ್ ಪ್ರತಿಯ ಬರಹ ಎಂದು ತಪ್ಪಾಗಿ ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಹಿಳೆ ಮೇಲೆ ಹಲ್ಲೆಗೆ ಮುಂದಾಗಿದ್ದರು. ಮಹಿಳೆ ಧರ್ಮ ನಿಂದನೆ ಮಾಡಿದ್ದಾಳೆ ಎಂದು ಅಲ್ಲಿ ಗುಂಪು ಸೇರಿದ ಜನ ಅಲ್ಲಿಯೇ ಕುರ್ತಾವನ್ನು ಬಿಚ್ಚುವಂತೆ ಪಟ್ಟು ಹಿಡಿದಿದ್ದಲ್ಲೇ ಮಹಿಳೆಯ ಸರ್ ತನ್ ಸೇ ಜುದಾ ಅಂದರೆ ಮಹಿಳೆಯ ತಲೆ ಕಡಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ್ದರು.
ಕುರ್ತಾದ ಮೇಲಿದ್ದ ಅರೇಬಿಕ್ ಬರಹ ಕುರಾನ್ ಎಂದು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಮುಂದಾದ ಗುಂಪು
ಸ್ಥಳಕ್ಕೆ ಬಂದ ಪೊಲೀಸರು ಅದು ಕುರಾನ್ ಅಲ್ಲ, ಕೇವಲ ಅರೇಬಿಕ್ ಲಿಪಿ ಎಂದು ಅಲ್ಲಿ ಸೇರಿದ್ದ ಉದ್ರಿಕ್ತ ಜನರ ಮನವೊಲಿಸುವುದಕ್ಕೆ ಸಾಕೋಸಾಕಾಗಿತ್ತು. ಕಡೆಗೂ ಅಲ್ಲಿನ ಜನರ ಮನವೊಲಿಸುವಲ್ಲಿ ಯಶಸ್ವಿಯಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ಬುರ್ಕಾ ತೊಡಿಸಿ ಆಕೆಯ ಮುಖವನ್ನು ಸಂಪೂರ್ಣ ಕವರ್ ಮಾಡಿ ಆ ಹೊಟೇಲ್‌ನಿಂದ ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ಯುವ ಮೂಲಕ ಆಕೆಯನ್ನು ರಕ್ಷಣೆ ಮಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಪ್ರತಿಕ್ರಿಯೆ ನೀಡಿರುವ ಈ ಮಹಿಳೆ ಧರಿಸಿದ್ದ ಕುರ್ತಾ ವಿನ್ಯಾಸ ಮಾಡಿದ್ದ ಕುವೈತ್ ಮೂಲದ ವಸ್ತ್ರ ವಿನ್ಯಾಸ ಸಂಸ್ಥೆ 'ಸಿಂಪ್ಲಿಸಿಟKW' ಈ ಬಗ್ಗೆ ಸ್ಪಷ್ಟನೆ ನೀಡಿ ಪಾಕಿಸ್ತಾನಿ ಜನರ ಅನಕ್ಷರತೆ ಹಾಗೂ ಮತಾಂಧತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಿಯ ಪಾಕಿಸ್ತಾನ ಜನರೇ , ಇತ್ತೀಚೆಗೆ ಅಮಾಯಕ ಮಹಿಳೆಯೊಬ್ಬರಿಗೆ ಪಾಕಿಸ್ತಾನದಲ್ಲಿ ನಡೆದ ಅವಮಾನಕಾರಿ ಘಟನೆಯ ಬಗ್ಗೆ ನಮ್ಮಿಂದ ಏನು ಮಾಡಲಾಗಲಿಲ್ಲ, ನಮ್ಮದು ಕುವೈತ್ ಮೂಲದ ವಸ್ತ್ರ ವಿನ್ಯಾಸ ಸಂಸ್ಥೆಯಾಗಿದ್ದು, ಪ್ರಪಂಚದೆಲ್ಲೆಡೆ ನಾವು ಸೇವೆ ಒದಗಿಸುತ್ತಿಲ್ಲ, ನಮ್ಮನ್ನು ಫಾಲೋ ಮಾಡಬೇಡಿ ಈ ಘಟನೆ ತುಂಬಾ ಬೇಸರ ತರಿಸಿದೆ. ಅರೇಬಿಕ್ ನಮ್ಮ ಭಾಷೆಯಾಗಿರುವುದರಿಂದ ಬಹಳ ಹಿಂದಿನಿಂದಲೂ ನಾವು ಆ ಭಾಷೆಯನ್ನು ನಮ್ಮ ಬಟ್ಟೆಗಳ ವಿನ್ಯಾಸದಲ್ಲಿ ಬಳಸುತ್ತೇವೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಕುರಾನ್ ಹಾಗೂ ಅರೇಬಿಕ್ ಲಿಪಿಯ ನಡುವಣ ವ್ಯತ್ಯಾಸ ತಿಳಿಯದ ಪಾಕಿಸ್ತಾನದ ಕಲೆ ಮತಾಂಧ ಜನರ ವಿರುದ್ಧ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಜನರ ಈ ವಿಪರೀತದ ಧರ್ಮಾಭಿಮಾನದಿಂದ ವಸ್ತ್ರ ವಿನ್ಯಾಸ ಸಂಸ್ಥೆಯೂ ಬೇಸರಗೊಂಡಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ಮೂಲಭೂತವಾದಿಗಳಿಂದ ಸ್ವತಃ ಮುಸ್ಲಿಮರಿಗೂ ನೆಮ್ಮದಿ ಇಲ್ಲ ಎಂದು ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.