ಭಾರತದಲ್ಲಿ ದಿಢೀರ್ ಆತಂಕ ಹೆಚ್ಚಿಸಿದ ಕೋವಿಡ್ ಒಮಿಕ್ರಾನ್, ಮಹಾರಾಷ್ಟ್ರದಲ್ಲಿ 91 ಕೇಸ್ ಪತ್ತೆ!
ಎಲ್ಲಾ ಮುಗೀತು ಅನ್ನೋವಷ್ಟರಲ್ಲೇ ಮತ್ತೆ ಕೋವಿಡ್ 19 ಆತಂಕ ಶುರುವಾಗಿದೆ. ಅಮೆರಿಕದಲ್ಲಿ ತೀವ್ರವಾಗಿ ಕೋವಿಡ್ 19 ಒಮಿಕ್ರಾನ್ ವೇರಿಯೆಂಟ್ ಹರಡುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 91 ಪ್ರಕರಣ ಪತ್ತೆಯಾಗಿದೆ.
ಮುಂಬೈ(ಮೇ.12) ಕೋವಿಡ್ ವೈರಸ್ ವಿರುದ್ಧ ಸುದೀರ್ಘ ಹೋರಾಟದ ಬಳಿಕ ಭಾರತ ಸೇರಿದಂತೆ ವಿಶ್ವ ಯಶಸ್ಸುಕಂಡಿದೆ. ಕೋವಿಡ್ ನಿಯಂತ್ರಿಸಿ ಮತ್ತೆ ಆರ್ಥಿಕತೆಯನ್ನು ಸರಿದಾರಿಗೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಕೋವಿಡ್ ಹೊಸ ವೇರಿಯೆಂಟ್‌ಗಳು ಭಾರತದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗಿದೆ. ಆದರೆ ಈ ಬಾರಿ ಆತಂಕ ಕರಿನೆರಳು ಹೆಚ್ಚಾಗುತ್ತಿದೆ. ಕಾರಣ ಅಮೆರಿಕದಲ್ಲಿ ಕೋವಿಡ್ 19 ಒಮಿಕ್ರಾನ್ ಕೆಪಿ.2 ಹೊಸ ವೇರಿಯೆಂಟ್ ವೇಗವಾಗಿ ಹರಡುತ್ತಿದೆ. ಇದೇ ಹೊಸ ವೈರಸ್ ಭಾರತದಲ್ಲೂ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ದಿಢೀರ್ 91 ಪ್ರಕರಣಗಳು ಪತ್ತೆಯಾಗಿದೆ.
ಕೋವಿಡ್ 19 ಒಮಿಕ್ರಾನ್ ಕೆಪಿ.2 ಸಬ್ ವೇರಿಯೆಂಟ್ ಪ್ರಕರಣ ಜೆಎನ್.1 ವೇರಿಯೆಂಟ್ ವೈರಸ್‌ನಿಂದ ಮ್ಯೂಟೇಷನ್ ಪಡೆದುಕೊಂಡಿದೆ.2024ರ ಜನವರಿಯಲ್ಲಿ ಈ ಹೊಸ ವೇರಿಯೆಂಟ್ ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಇದೀಗ ಹೊಸ ವೈರಸ್ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ. ಪುಣೆಯಲ್ಲಿ 51 ಪ್ರಕರಣ, ಥಾಣೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿದೆ.
ನಿಮ್ಮ ಕಿವಿಯನ್ನೂ ಬಿಡ್ತಾ ಇಲ್ಲ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೊನಾ ವೈರಸ್, ಏನು ಸಮಸ್ಯೆ?
ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದೆ.ಮುಂಬೈ ಮಹಾನಗರದಲ್ಲಿ ಇದುವರೆಗೆ ಒಂದೂ ಪ್ರಕರಣ ಪತ್ತೆಯಾಗಿಲ್ಲ. 2023ರ ಅಂತ್ಯದ ವೇಳೆ ಜೆಎನ್.1 ವೇರಿಯೆಂಟ್ ಕೆಲ ದಿನಗಳ ಕಾಲ ಆತಂಕ ಸೃಷ್ಟಿಸಿತ್ತು. ಜೆಎನ್.1 ವೇರಿಯೆಂಟ್‌ನಿಂದ ಇದೀಗ ಕೆಪಿ.2 ವೇರಿಯೆಂಟ್ ಹುಟ್ಟಿಕೊಂಡಿದೆ.
ಪ್ರಕರಣ ಪತ್ತೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿನೋಮ್ ಸೀಕ್ವೆನ್ಸ್ ಪರೀಕ್ಷಾ ಸಂಪರ್ಕ ಅಧಿಕಾರಿ ಡಾ.ರಾಜೇಶ್, ಎಪ್ರಿಲ್, ಮೇ ತಿಂಗಳಲ್ಲಿ ಕೋವಿಡ್ ಮ್ಯೂಟೇಶನ್ ಪಡೆದುಕೊಂಡು ಹೊಸ ವೇರಿಯೆಂಟ್ ಆಗಿ ಹರಡುತ್ತದೆ. ಸದ್ಯ ಕೆಪಿ.2 ವೈರಸ್ ಪ್ರಕರಣ ತ್ವರಿತವಾಗಿ ಹರಡುತ್ತಿದೆ. ಆದರೆ ಆಸ್ಪತ್ರೆ ದಾಖಲು ಪ್ರಮಾಣ ಕಡಿಮೆ ಇದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 250 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಆದರೆ ಆಸ್ಪತ್ರೆ ದಾಖಲು ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಉರಿ ಬಿಸಿಲು ಹಾಗೂ ಮಳೆ ಮತಾವವರಣವಿರುವ ಕಾರಣ ಶೀತ ಕೆಮ್ಮು, ಜ್ವರ, ಗಂಟಲುನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಸೂಚಿಸಿದೆ.
ಕೋವಿಡ್ ಶೀಲ್ಡ್ ಲಸಿಕೆ ಅಡ್ಡಪರಿಣಾಮ; ಜನರು ಭಯ ಭೀತರಾಗಬಾರದು - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್