ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್ ಸಮುದ್ರದಲ್ಲಿ ನೌಕೆ ಲ್ಯಾಂಡ್ ಆಗಿದೆ. ಸ್ಪೇಸ್‌ಎಕ್ಸ್ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯಲಾಗಿದೆ.
ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿರುವ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಗಗನನೌಕೆ ಮೂಲಕ ಭೂಮಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಜೂ.25ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಶುಕ್ಲಾ ಸೇರಿ 4 ಗಗನಯಾತ್ರಿಗಳು ತೆರಳಿದ್ದರು. ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್ ಸಮುದ್ರದಲ್ಲಿ ನೌಕೆ ಲ್ಯಾಂಡ್ ಆಗಿದೆ. ಸ್ಪೇಸ್‌ಎಕ್ಸ್ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯಲಾಗಿದೆ. ನಾಲ್ವರು ಗಗನಯಾನಿಗಳನ್ನು ಸ್ಟ್ರೆಚರ್ ಮೂಲಕ ಅವರನ್ನು ಬೋಟ್‌ಗೆ ಸಾಗಿಸಿ ಪ್ರಾಥಮಿಕ ಆರೋಗ್ಯ ತಪಾಸಣೆ ಬಳಿಕ ಸುರಕ್ಷಿತ ಬೇಸ್‌ಗೆ ಕರೆತರಲಾಗುತ್ತದೆ. ಅಲ್ಲಿ ಅವರಿಗೆ ಪೂರ್ಣ ಪ್ರಮಾಣದ ಚೇತರಿಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಲ್ಲಿ ಧಾರವಾಡ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯ ಸಂಶೋಧನೆ ಮಾಡಿದ್ದಾರೆ.ವಿಶೇಷ ಗಾಜಿನ ತಟ್ಟೆಯಲ್ಲಿ ಚಿಗುರೊಡೆದ ಮೆಂತೆ ಮತ್ತು ಹೆಸರು ಬೀಜಗಳು ಹಾಗೂ ಅವುಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿನ ಶೀತಲಗ್ರಹದಲ್ಲಿ ಸಂಗ್ರಹಿಸಿಡುವ ಚಿತ್ರ ತೆಗೆದು ಸಂಭ್ರಮಿಸಿದ್ದಾರೆ.
ವಾಪಸ್ ಪ್ರಕ್ರಿಯೆ ಹೇಗಿತ್ತು?
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿ ತಲುಪಲು ಗಗನಯಾತ್ರಿಗಳು 17 ತಾಸು ಪ್ರಯಾಣ ಇತ್ತು. ಮೊದಲಿಗೆ ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ದಿದ್ದ ಉಪಕರಣಗಳು, ನಡೆಸಿದ ಸಂಶೋಧನಾ ಸ್ಯಾಂಪಲ್‌ಗಳನ್ನು ಪ್ಯಾಕ್ ಮಾಡುತ್ತಾರೆ. ಬಳಿಕ ಪ್ರಯಾಣಿಸಬೇಕಿರುವ ಗಗನ ನೌಕೆ(ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್)ನ ಎಲ್ಲಾ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಸಮಸ್ಯೆ ಇಲ್ಲ ಎಂಬುದು ಖಚಿತವಾದ ಬಳಿಕ ಬಾಹ್ಯಾಕಾಶ ಕೇಂದ್ರ ಮತ್ತು ಕ್ಯಾಪ್ಸೂಲ್ ನಡುವಿನ ದ್ವಾರ ಭದ್ರಪಡಿಸಲಾಗುತ್ತದೆ.
ಬಾಹ್ಯಾಕಾಶ ಕೇಂದ್ರ ಭೂಮಿಯಿಂದ 400 ಕಿ.ಮೀ. ಎತ್ತರದಲ್ಲಿ ಸುತ್ತುತ್ತಿರುವಾಗ ಈ ಕಾರ್ಯ ನಡೆಯುತ್ತದೆ. ನಂತರ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಅನ್‌ಡಾಕ್ ಆಗುತ್ತದೆ. ಸಣ್ಣಟ್ರಸ್ಟರ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಈ ವೇಳೆ ಹೊರಗೆ -273 ಡಿಗ್ರಿ ಸೆಲ್ಸಿಯಸ್‌ನಷ್ಟು ಥಂಡಿ ಇದ್ದರೆ, ಗಗನನೌಕೆ ಒಳಗಿನ ಉಷ್ಣಾಂಶ 20ರಿಂದ 25 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ.
ಗಗನನೌಕೆ ಕಕ್ಷೆಯಿಂದ ದೂರ ಹಲವು ಗಂಟೆಗಳ ಕಾಲ ನಿಧಾನವಾಗಿ ಸಾಗುತ್ತದೆ. ಈ ಅವಧಿಯಲ್ಲಿ ನೌಕೆ ಪ್ರಯಾಣದ ಹಾದಿಯನ್ನು ಸಣ್ಣ ಥ್ರಸ್ಟರ್ ಬಳಸಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ನೌಕೆ ಲ್ಯಾಂಡ್ ಆಗುವ ಜಾಗಕ್ಕೆ ಅನುಗುಣವಾಗಿ ಈ ಹೊಂದಾಣಿಕೆ ನಡೆಯುತ್ತದೆ.
ತರುವಾಯ ನೌಕೆಯ ಸರ್ವೀಸ್ ಮಾಡ್ಯೂಲ್ ಅಥವಾ ಟ್ರಂಕ್ ಪ್ರತ್ಯೇಕವಾಗುತ್ತದೆ. ಇದು ನೌಕೆಯ ಸೋಲಾರ್ ಪ್ಯಾನಲ್‌ಗಳು, ಹೆಚ್ಚುವರಿ ಹಾರ್ಡ್‌ವೇರ್‌ಗಳಿರುವ ಭಾಗ. ನೌಕೆ ವಾಪಸ್ ಆಗುವ ವೇಳೆ ಇವು ಸಮಸ್ಯೆ ಸೃಷ್ಟಿಸುವ ಅಪಾಯ ಹಿನ್ನೆಲೆಯಲ್ಲಿ ವಿಸರ್ಜಿಸಲಾಗುತ್ತದೆ.
ನಂತರದ್ದು ನೌಕೆ ಭೂಕಕ್ಷೆ ಪ್ರವೇಶಿಸುವ ಹಂತ. ಭೂಮಿಯಿಂದ 350 ಕಿ.ಮೀ. ಎತ್ತರದಲ್ಲಿ ನೌಕೆ ಎಂಜಿನ್ ಪೂರ್ಣರೂಪದಲ್ಲಿ ಚಾಲೂ ಆಗುತ್ತದೆ. ಈ ಮೂಲಕ ಕಕ್ಷೆಯಿಂದ ಭೂಮಿಗೆ ಬೀಳುವ ವೇಗ ತಗ್ಗಿಸಲಾಗುತ್ತದೆ.
120 ಕಿ.ಮೀ. ಎತ್ತರದಲ್ಲಿ ನೌಕೆ ಭೂ ವಾತಾವರಣ ಪ್ರವೇಶಿಸುತ್ತದೆ. ಆಗ ನೌಕೆ ಹೊರಗೆ 1900 ರಿಂದ 2200 ಸೆಲ್ಸಿಯಸ್‌ನಷ್ಟು ಶಾಖ ಸೃಷ್ಟಿಯಾಗಿರುತ್ತದೆ. 18 ಸಾವಿರ ಅಥವಾ 5.5 ಕಿ.ಮೀ. ಎತ್ತರದಲ್ಲಿ ನೌಕೆ ವೇಗ ಕಡಿಮೆಯಾಗಲಿದ್ದು, ನೌಕೆಯಿಂದ 2 ಸಣ್ಣ ಪ್ಯಾರಚೂಟ್‌ಗಳು ಬಿಚ್ಚಿಕೊಳ್ಳುತ್ತವೆ. 6 ಸಾವಿರ ಕಿ.ಮೀ. ಅಂದರೆ 1.5 ಎತ್ತರದಲ್ಲಿ 4 ದೊಡ್ಡ ಪ್ಯಾರಚೂಟ್‌ಗಳು ತೆರೆದುಕೊಳ್ಳಲಿದ್ದು, ನೌಕೆ ವೇಗ ಸಾಕಷ್ಟು ಕಡಿಮೆಯಾಗುತ್ತದೆ. ಅಂತಿಮವಾಗಿ ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್ ಸಮುದ್ರದಲ್ಲಿ ನೌಕೆ ಲ್ಯಾಂಡ್ ಆಗುತ್ತದೆ. ಸ್ಪೇಸ್‌ಎಕ್ಸ್ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯುತ್ತದೆ. - ಬಾಹ್ಯಾಕಾಶದಲ್ಲಿದ್ದ ಕಾರಣ ಗಗನಯಾತ್ರಿಗಳ ಸ್ನಾಯು ಭೂವಾತಾವರಣಕ್ಕೆ ಹೊಂದಿಕೊಂಡಿರುವುದಿಲ್ಲ. ಹೀಗಾಗಿ ಸ್ಟ್ರೆಚರ್ ಮೂಲಕ ಅವರನ್ನು ಬೋಟ್‌ಗೆ ಸಾಗಿಸಿ ಪ್ರಾಥಮಿಕ ಆರೋಗ್ಯ ತಪಾಸಣೆ ಬಳಿಕ ಸುರಕ್ಷಿತ ಬೇಸ್‌ಗೆ ಕರೆತರಲಾಗುತ್ತದೆ. ಅಲ್ಲಿ ಅವರಿಗೆ ಪೂರ್ಣ ಪ್ರಮಾಣದ ಚೇತರಿಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
