ಶೇಕ್ ಹಸೀನಾಗೆ ಕುಟುಕಿದ್ದು ಅವರೇ ಸಾಕಿದ ಗಿಣಿನಾ? ಗಡಿಪಾರಾಗಿರುವ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದೇನು?
ಬಾಂಗ್ಲಾದಿಂದ ಗಡಿಪಾರುಗೊಂಡಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದ ಇವತ್ತಿನ ಸ್ಥಿತಿ ಹಾಗೂ ಶೇಕ್ ಹಸೀನಾ ಪಲಾಯನದ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ಮಾಡಿದ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಢಾಕಾ: ಬಾಂಗ್ಲಾದಿಂದ ಗಡಿಪಾರುಗೊಂಡಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದ ಇವತ್ತಿನ ಸ್ಥಿತಿ ಹಾಗೂ ಶೇಕ್ ಹಸೀನಾ ಪಲಾಯನದ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ಮಾಡಿದ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನಿನ್ನೆ ಶೇಕ್ ಹಸೀನಾ ದೇಶದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಹೆದರಿ ದೇಶ ತೊರೆದಿದ್ದು, ಪ್ರಸ್ತುತ ಭಾರತದಲ್ಲಿದ್ದು, ಮುಂದೆ ಬ್ರಿಟನ್‌ನಲ್ಲಿ ಆಶ್ರಯ ಪಡೆಯಲಿದ್ದಾರೆ.
ಆದರೆ ಶೇಕ್ ಹಸೀನಾ ದೇಶ ತೊರೆದ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ ಲೇಖಕಿ ತಸ್ಲೀಮಾ ನಸ್ರೀನ್, ಇಸ್ಲಾಮಿಸ್ಟ್‌ಗಳ ಮನೆಮೆಚ್ಚಿಸುವ ಸಲುವಾಗಿ ಶೇಕ್ ಹಸೀನಾ ನನ್ನನ್ನು ನನ್ನ ತಾಯ್ನಾಡಿನಿಂದ 1999ರಲ್ಲಿ ಹೊರದಬ್ಬಿದರು. ಮರಣಶಯ್ಯೆಯಲ್ಲಿದ್ದ ನನ್ನ ತಾಯಿಯನ್ನು ನೋಡುವುದಕ್ಕೆ ನಾನು ಬಾಂಗ್ಲಾದೇಶವನ್ನು ಪ್ರವೇಶಿಸಿದ ವೇಳೆ ಆಕೆ ನನ್ನನ್ನು ದೇಶದಿಂದ ಹೊರದಬ್ಬಿ ಮತ್ತೆಂದು ಬಾಂಗ್ಲಾದೇಶಕ್ಕೆ ಬರಲು ಆಕೆ ನನಗೆ ಅವಕಾಶ ನೀಡಿರಲಿಲ್ಲ, ಆದರೆ ಇಂದು ಹಸೀನಾರನ್ನು ದೇಶ ತೊರೆಯುವಂತೆ ಮಾಡಿದ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಗಳಲ್ಲಿ ಅದೇ ಇಸ್ಲಾಮಿಸ್ಟ್‌ಗಳಿದ್ದಾರೆ ಎಂದು ತಸ್ಲೀಮಾ ನಸ್ರೀನ್ ಟ್ವಿಟ್ ಮಾಡಿದ್ದಾರೆ.
ಬಾಂಗ್ಲಾದಲ್ಲಿ ಉದ್ರಿಕ್ತರಿಂದ ದಾಂಧಲೆ: 4 ಹಿಂದೂ ದೇಗುಲಗಳ ಮೇಲೆ ದಾಳಿ
ಇದಕ್ಕೂ ಮೊದಲು ಮತ್ತೊಂದು ಟ್ವಿಟ್ ಮಾಡಿದ್ದ ತಸ್ಲೀಮಾ ನಸ್ರೀನ್, ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶವನ್ನು ತೊರೆಯಬೇಕು. ಆಕೆಯ ಇಂದಿನ ಸ್ಥಿತಿಗೆ ಆಕೆಯೇ ಕಾರಣ. ಇಸ್ಲಾಮಿಸ್ಟ್‌ಗಳನ್ನು ಅವರು ದೇಶದಲ್ಲಿ ಸಾಕಿದ್ದರ ಫಲ ಇದು. ಆಕೆ ತನ್ನ ಜನರನ್ನು ಭ್ರಷ್ಟಾಷಾರ ಮಾಡಲು ಅನುವು ಮಾಡಿಕೊಟ್ಟಿದ್ದಳು. ಈಗ ಬಾಂಗ್ಲಾದೇಶ ಪಾಕಿಸ್ತಾನ ಆಗಬಾರದು, ಸೇನೆಗೆ ಅಧಿಕಾರ ಸಿಗಬಾರದು. ರಾಜಕೀಯ ಪಕ್ಷಗಳು ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯನ್ನು ಜಾರಿಗೆ ತರಬೇಕು ಎಂದು ತಸ್ಲೀಮ್ ನಸ್ರೀನ್ ಟ್ವಿಟ್ ಮಾಡಿದ್ದರು. ಈ ಮೂಲಕ ದೇಶದಲ್ಲಿ ತೀವ್ರವಾದಿಗಳ ಬೆಳವಣಿಗೆಗೆ ಶೇಕ್ ಹಸೀನಾ ಅವರೇ ಮಣೆ ಹಾಕಿದ್ದು, ಈಗ ಅವರಿಂದಲೇ ಶೇಕ್ ಹಸೀನಾಗೆ ಇಂತಹ ಸ್ಥಿತಿ ಬಂದೊದಗಿದೆ ಎಂದು ತಸ್ಲೀಮಾ ನಸ್ರೀನ್ ದೂರಿದ್ದಾರೆ.
ಬಾಂಗ್ಲಾದೇಶ ಮೂಲದ ಲೇಖಕಿಯಾಗಿರುವ ತಸ್ಲೀಮಾ ನಸ್ರೀನ್ ಈಗ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅವರು ಬರೆದ ಲಜ್ಜಾ ಎಂಬ ಕೃತಿಗೆ ಮುಸ್ಲಿಂ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿ ಆಕೆಗೆ ಮರಣ ಬೆದರಿಕೆವೊಡ್ಡಿದ್ದರು. ಇದರಿಂದಾಗಿ 1994ರಲ್ಲಿ ತಸ್ಲೀಮಾ ಬಾಂಗ್ಲಾದೇಶ ತೊರೆಯುವಂತಾಗಿತ್ತು. 1993ರಲ್ಲಿ ಇವರ ಲಜ್ಜಾ ಪುಸ್ತಕವನ್ನು ಬಾಂಗ್ಲಾದೇಶ ಬ್ಯಾನ್ ಮಾಡಿತ್ತು. ಆದರೆ ಅದು ಅತ್ಯಂತ ಜನಪ್ರಿಯ ಅತಿ ಹೆಚ್ಚು ಮಾರಾಟವಾಗಿರುವ ಪುಸ್ತಕ ಎನಿಸಿದೆ. ಆ ಸಂದರ್ಭದಲ್ಲಿ ಹಸೀನಾ ವಿರೋಧಿ ಬಣದ ನಾಯಕಿ ರಾಷ್ಟ್ರೀಯವಾದಿ ಖಲೀದಾ ಝಿಯಾ ಆ ಸಮಯದಲ್ಲಿ ಪ್ರಧಾನಮಂತ್ರಿಯಾಗಿದ್ದರು. ಆಗಿನಿಂದಲೂ ತಸ್ಲೀಮಾ ನಸ್ರೀನ್ ಅವರು ದೇಶ ಭ್ರಷ್ಟೆ ಎನಿಸಿಕೊಂಡಿದ್ದು, ದೇಶದಿಂದ ಗಡಿಪಾರುಗೊಂಡು ಬದುಕುತ್ತಿದ್ದಾರೆ.
ಭಾರತದ ಸುತ್ತಲಿರುವ ಎಲ್ಲಾ ದೇಶಗಳಲ್ಲಿ ಅಸ್ಥಿರತೆ: ಬಾಂಗ್ಲಾದಲ್ಲಿ ಶ್ರೀಲಂಕಾ, ಆಫ್ಘನ್ ದೃಶ್ಯಗಳ ಪುನರಾವರ್ತನೆ