ಇರಾನ್‌ ಮೇಲೆ ದಾಳಿ ಮಾಡುವುದಾಗಿ ಟ್ರಂಪ್‌ ನಿರಂತರ ಬೆದರಿಕೆ ಒಡ್ಡುತ್ತಿರುವ ನಡುವೆಯೇ, ಯುದ್ಧಕ್ಕೆ ಸನ್ನದ್ಧವಾಗಿ ಮಧ್ಯಪ್ರಾಚ್ಯ ಸಮೀಪದ ಸಮುದ್ರದಲ್ಲಿ ಬೀಡುಬಿಟ್ಟಿರುವ, 1.2 ಲಕ್ಷ ಕೋಟಿ ರು. ಬೆಲೆಬಾಳುವ ಅಮೆರಿಕದ ಪ್ರತಿಷ್ಠಿತ ಯುದ್ಧನೌಕೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ.

ವಾಷಿಂಗ್ಟನ್‌: ಇರಾನ್‌ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರಂತರ ಬೆದರಿಕೆ ಒಡ್ಡುತ್ತಿರುವ ನಡುವೆಯೇ, ಯುದ್ಧಕ್ಕೆ ಸನ್ನದ್ಧವಾಗಿ ಮಧ್ಯಪ್ರಾಚ್ಯ ಸಮೀಪದ ಸಮುದ್ರದಲ್ಲಿ ಬೀಡುಬಿಟ್ಟಿರುವ, 1.2 ಲಕ್ಷ ಕೋಟಿ ರು. ಬೆಲೆಬಾಳುವ ಅಮೆರಿಕದ ಪ್ರತಿಷ್ಠಿತ ಯುದ್ಧನೌಕೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಕಳೆದ 8 ತಿಂಗಳಿನಿಂದ ಸರಿಯಾದ ನಿರ್ವಹಣೆ ಮತ್ತು ಸೂಕ್ತ ಕೊಳಾಯಿ ವ್ಯವಸ್ಥೆ ಇಲ್ಲದೆ ನೌಕೆಯ 650 ಶೌಚಾಲಯಗಳು ಹದಗೆಟ್ಟಿವೆ. ಇದರಿಂದಾಗಿ ದೇಹಬಾಧೆ ತೀರಿಸಿಕೊಳ್ಳಲು ಒದ್ದಾಡುತ್ತಿರುವ ಸುಮಾರು 5,000 ಸಿಬ್ಬಂದಿ, ಕೆಲಸವನ್ನೇ ಬಿಡುವುದಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಸಮಸ್ಯೆ?:

ಅಮೆರಿಕದ ಕೆ ಯುಎಸ್‌ಎಸ್‌ ಗೆರಾಲ್ಡ್‌ ಆರ್. ಫೋರ್ಡ್‌ ಯುದ್ಧನೌಕೆ ಕಳೆದ ಜೂನ್‌ನಿಂದಲೇ ಸಮುದ್ರದಲ್ಲಿ ಬೀಡುಬಿಟ್ಟಿದೆ. ಇರಾನ್‌ ಮತ್ತು ಅಮೆರಿಕ ನಡುವೆ ಯುದ್ಧಾತಂಕ ತೀವ್ರವಾಗುತ್ತಿರುವ ಕಾರಣ ಇನ್ನಷ್ಟು ಕಾಲ ಅಲ್ಲಿಯೇ ಇರುವಂತೆ ಅಮೆರಿಕ ಸರ್ಕಾರ ಸೂಚನೆ ನೀಡಿದೆ. ಈ ನಡುವೆ, ಸಮುದ್ರದಲ್ಲಿ 8 ತಿಂಗಳಿಂದ ಇರುವ ಕಾರಣ ನೌಕೆಯ ಶೌಚಾಲಯದ ಉಪಕರಣಗಳು ಹಾಳಾಗುತ್ತಿವೆ. ಸೂಕ್ತ ಕೊಳಾಯಿ ವ್ಯವಸ್ಥೆ ಇಲ್ಲದೆ ಸುಮಾರು 650 ಶೌಚಾಲಯಗಳು ಹದಗೆಟ್ಟಿವೆ. ಇದನ್ನು ಸರಿಪಡಿಸಲು ಸಿಬ್ಬಂದಿ 24 ಗಂಟೆ ಕೆಲಸ ಮಾಡುತ್ತಿದ್ದರೂ ಫಲ ನೀಡುತ್ತಿಲ್ಲ.

45 ನಿಮಿಷ ಪಾಳಿ ನಿಂತರೆ ಮಾತ್ರ ಶೌಚ!:

ಯುವತಿಯರೂ ಸೇರಿದಂತೆ 20ರ ಆಸುಪಾಸು ವಯಸ್ಸಿನ ಸುಮಾರು 5,000 ಸಿಬ್ಬಂದಿ ಈ ಯುದ್ಧನೌಕೆಯಲ್ಲಿದ್ದಾರೆ. ಶೌಚಾಲಯಗಳು ಹದಗೆಟ್ಟಿರುವ ಕಾರಣ ನಿತ್ಯ 45 ನಿಮಿಷ ಪಾಳಿ ನಿಂತು ದೇಹಬಾಧೆ ತೀರಿಸಿಕೊಳ್ಳಬೇಕಾಗಿದೆ. ಹೀಗಾಗಿ ನಿಯೋಜನೆ ಮುಗಿದ ಬಳಿಕ ಅಮೆರಿಕ ನೌಕಾದಳದ ಕೆಲಸವನ್ನೇ ಬಿಡುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ನಿತ್ಯ ಟಾಯ್ಲೆಟ್ ರಿಪೇರಿ ಮಾಡುವವರು ಹಾಗೂ ಯೋಧರ ನಡುವೆ ಜಗಳ ಮಾಮೂಲಿಯಾಗಿದೆ.