* ಸಂಸತ್‌ ಕಲಾಪದ ದಾಖಲೆ ಸಲ್ಲಿಸಲು ಆದೇಶ* ಸ್ಪೀಕರ್‌ ರೂಲಿಂಗ್‌ ಮರುಪರಿಶೀಲನೆಗೆ ಪಾಕ್‌ ಸುಪ್ರೀಂ ನಿರ್ಧಾರ* ‘ಅವಿಶ್ವಾಸ ನಿರ್ಣಯ ತಿರಸ್ಕಾರ ಸಂವಿಧಾನಬದ್ಧವೇ?’* ಇಂದು ವಿಚಾರಣೆ ನಡೆಸಲಿರುವ ಪಾಕ್‌ ಸುಪ್ರೀಂ ಕೋರ್‌್ಟ

ಇಸ್ಲಾಮಾಬಾದ್‌(ಏ.06): ಪಾಕಿಸ್ತಾನದಲ್ಲಿ ಇತ್ತೀಚೆಗೆ ಅವಿಶ್ವಾಸ ನಿರ್ಣಯ ತಿರಸ್ಕರಿಸಿ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಬಚಾವು ಮಾಡಲು ಯತ್ನಿಸಿದ ಸಂಸತ್ತಿನ ಉಪ ಸ್ಪೀಕರ್‌ ಖಾಸಿಂ ಖಾನ್‌ ಸೂರಿ ಅವರ ನಿರ್ಣಯವವನ್ನು ಮರುಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಹೀಗಾಗಿ ಶನಿವಾರ ನಡೆದ ಸಂಸತ್ತಿನ ಕಲಾಪದ ದಾಖಲಾತಿಗಳನ್ನು ನೀಡುವಂತೆ ಅದು ಸರ್ಕಾರಕ್ಕೆ ಸೂಚಿಸಿದೆ ಹಾಗೂ ಬುಧವಾರ ಈ ಕುರಿತ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಮಂಗಳವಾರದ ಕಲಾಪದಲ್ಲಿ ಮುಖ್ಯ ನ್ಯಾಯಾಧೀಶ ನ್ಯಾ| ಉಮರ್‌ ಅಟಾ ಬಂಡಿಯಾಲ್‌ ಅವರ ನೇತೃತ್ವದ ಪಂಚಸದಸ್ಯ ಪೀಠವು, ಇಮ್ರಾನ್‌ ಖಾನ್‌ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕಾರ ಹಾಗೂ ಸಂಸತ್‌ ವಿಸರ್ಜನೆ ಮಾಡಿದ ಅಧ್ಯಕ್ಷರ ನಿರ್ಧಾರದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಮುಂದುವರಿಸಿತು. ಈ ವೇಳೆ, ‘ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಶುಕ್ರವಾರ ನಡೆದ ಕಲಾಪಗಳ ಎಲ್ಲ ದಾಖಲೆಗಳನ್ನು ನೀಡಿ. ಆಂದು ಉಪಸಭಾಧ್ಯಕ್ಷರು, ನಿರ್ಣಯ ತಿರಸ್ಕರಿಸಿ ನೀಡಿದ ರೂಲಿಂಗ್‌ನ ಸಾಂವಿಧಾನಿಕ ಪರಿಶೀಲನೆ ನಡೆಸಬೇಕಿದೆ. ಅಂದು ಅವರು ಕೈಗೊಂಡ ನಿರ್ಧಾರ ಸಂವಿಧಾನಾತ್ಮಕವಾಗಿದೆಯೇ ಎಂಬುದರ ಪರಾಮರ್ಶೆ ನಡೆಸಬೇಕು. ಈ ಅಂಶದ ಮೇಲೆಯೇ ಪ್ರಕರಣದ ಹಣೆಬರಹ ನಿರ್ಧಾರವಾಗಲಿದೆ’ ಎಂದು ನ್ಯಾ

ಉಮರ್‌ ಹೇಳಿದರು.

ಈ ನಡುವೆ ವಾದ ಮಂಡಿಸಿದ ವಿಪಕ್ಷ ಪಿಪಿಪಿ ಪರ ವಕೀಲ ರಾಜಾ ರಬ್ಬಾನಿ ಹಾಗೂ ಪಿಎಂಎಲ್‌-ಎನ್‌ ವಕೀಲರು, ‘ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕದೇ ತಿರಸ್ಕರಿಸಿರುವ ಸ್ಪೀಕರ್‌ ನಿರ್ಧಾರವು ಪರಿಚ್ಛೇದ 95ರ ಪ್ರಕಾರ ನಿಯಮಬಾಹಿರ. ಅವಿಶ್ವಾಸ ನಿರ್ಣಯ ಮಂಡನೆ ಆಗಬೇಕು ಎಂದು 161 ಸದಸ್ಯರು ಬೆಂಬಲಿಸಿದ್ದರು. ಆದರೆ ಈ ಬಗ್ಗೆ ಚರ್ಚೆ ಮಾಡದೇ ನಿರ್ಣಯ ತಿರಸ್ಕರಿಸಲಾಗಿದೆ’ ಎಂದು ದೂರಿದರು. ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.