ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾದಲ್ಲಿ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಹೆಲಿಕಾಪ್ಟರ್ ಪತನ ಹಲವು ಅನುಮಾನಕ್ಕೆ ಕಾರಣವಾಗಿದೆ.
ಸೌದಿ ಅರೇಬಿಯಾ (ಜೂ.28) ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿಯಾಗಿರುವ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾದಲ್ಲಿ ಪತನಗೊಂಡಿದೆ. 14 ಮಂದಿ ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ ಕೆಲ ಹೊತ್ತಲ್ಲೇ ಪತನಗೊಂಡಿರುವುದಾಗಿ ವರದಿಯಾಗಿದೆ. ಅರಾಮ್ಕೋ ಹೆಲಿಕಾಪ್ಟರ್ ಪತನಕ್ಕೆ ಕಾರಣ ಸ್ಪಷ್ಟವಾಗಿಲ್ಲ, ಇತ್ತೀಚೆಗಷ್ಟೇ ರಾಸ್ ತನುರಾದಲ್ಲಿರುವ ಅರಾಮ್ಕೋ ತೈಲ ಘಟಕದ ಮೇಲೆ ಡ್ರೋನ್ ದಾಳಿ ಪ್ರಯತ್ನಗಳು ನಡೆದಿತ್ತು. ಈ ಹಿನ್ನಲೆಯಲ್ಲಿ ಇದೀಗ ನಡೆದ ಹೆಲಿಕಾಪ್ಟರ್ ಪತನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೌದಿ ಅರೆಬಿಯಾ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಅತೀ ದೊಡ್ಡ ಆಯಿಲ್ ಕಂಪನಿ
ಸೌದಿ ಅರೇಬಿಯಾ ಸರ್ಕಾರ ಒಡೆತನ ಅತೀ ದೊಡ್ಡ ಆಯಿಲ್ ಕಂಪನಿ ಅರಾಮ್ಕೋ. ಆದಾಯ ವಿಚಾರದಲ್ಲಿ ವಿಶ್ವದಲ್ಲೇ ನಾಲ್ಕನೇ ಅತೀ ದೊಡ್ಡ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ಕಂಪನಿಯ ಪ್ರಮುಖರು ತೆರಳುವ ಹೆಲಿಕಾಪ್ಟರ್ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್‌ನಲ್ಲಿರುವವರ ಮಾಹಿತಿ ಬಹಿರಂಗವಾಗಿಲ್ಲ.
ಮಾರ್ಚ್ ತಿಂಗಳಲ್ಲಿ ನಡೆದಿತ್ತು ಡ್ರೋನ್ ದಾಳಿ
ರಾಸ್ ತನುರಾದಲ್ಲಿರುವ ಅರಾಮ್ಕೋ ತೈಲ ಘಟಕದ ಮೇಲೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಡ್ರೋನ್ ದಾಳಿ ನಡೆದಿತ್ತು. ಇನ್ನು 2019ರಲ್ಲಿ ಇದೇ ಅರಾಮ್ಕೋ ಮೇಲೆ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆದಿತ್ತು. ಈ ವೇಳೆ ಘಟಕಕ್ಕೆ ಹಾನಿಯಾಗಿತ್ತು. ಪರಿಣಾಮ ಉತ್ಪಾದನೆಯನ್ನು ಕೆಲ ತಿಂಗಳುಗಳ ಕಾಲ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. 2021ರಲ್ಲಿ ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌಥಿ ಉಗ್ರರು ದಾಳಿ ನಡೆಸಿದ್ದರು.ಪದೇ ಪದೇ ದಾಳಿಗೆ ತುತ್ತಾಗುತ್ತಿದ್ದ ಅರಾಮ್ಕೋ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಇದೀಗ ಅರಾಮ್ಕೋ ಹೆಲಿಕಾಪ್ಟರ್ ಮೇಲೆ ಗುರಿಯಾಗಿಸಿ ದಾಳಿ ನಡೆಸಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ.
ಸೌದಿ ಅರೇಬಿಯಾ ಪೆಟ್ರೋಲಿಯಂ ಸಚಿವಾಲಯ ಘಟನೆಯನ್ನು ಖಂಡಿಸಿದೆ. ಇದೇ ವೇಳೆ ಅರಾಮ್ಕೋ ಹೆಲಿಕಾಪ್ಟರ್ ಪತನದಲ್ಲಿ ಮಡಿದವರ ಕುಟುಂಬಕ್ಕೆ ಸಾಂತ್ವನ ಹೇಳಿದೆ. ತನಿಖೆಗೆ ಆದೇಶ ನೀಡಲಾಗಿದ್ದು, ಸೂಕ್ತ ತನಿಖೆಯಿಂದ ಸ್ಪಷ್ಟ ಕಾರಣ ಬಹಿರಂಗವಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ. ಈ ಘಟನೆ ಇದೀಗ ಸೌದಿ ಹಾಗೂ ಗಲ್ಫ್ ರಾಷ್ಟ್ರಗಳ ಆತಂಕಕ್ಕೆ ಕಾರಣಾಗಿದೆ.


