ನ್ಯೂಯಾರ್ಕ್(ಆ.18): ಜಗತ್ತಿನಾದ್ಯಂತ ಕೊರೋನಾ ಸೋಂಕಿನ ಪರೀಕ್ಷೆ ನಡೆಸಲು ಸರ್ಕಾರಗಳು ಪ್ರತಿ ವ್ಯಕ್ತಿಗೂ ಸಾವಿರಾರು ರು. ಖರ್ಚು ಮಾಡುತ್ತಿರುವಾಗ ಅಮೆರಿಕದಿಂದ ಸಿಹಿ ಸುದ್ದಿಯೊಂದು ಬಂದಿದೆ. 330 ರು.ಗಿಂತ ಕಡಿಮೆ ವೆಚ್ಚದಲ್ಲಿ ಎಂಜಲಿನಿಂದಲೇ ಕೊರೋನಾ ಪತ್ತೆಹಚ್ಚುವ ಹೊಸ ವಿಧಾನಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಒಪ್ಪಿಗೆ ನೀಡಿದೆ.

ಮುಖ್ಯ ಶಿಕ್ಷಕರು ಇನ್ಮುಂದೆ ಈ ಕೆಲಸದಿಂದ ವಾಪಸ್

ಸದ್ಯ ಎಲ್ಲ ದೇಶಗಳಲ್ಲೂ ಗಂಟಲು ದ್ರವ ಅಥವಾ ಮೂಗಿನ ದ್ರವ ತೆಗೆದು ಸ್ವಾಬ್‌ ಟೆಸ್ಟ್‌ ನಡೆಸುವ ಮೂಲಕ ಕೊರೋನಾ ಪತ್ತೆ ಹಚ್ಚಲಾಗುತ್ತಿದೆ. ಇದಕ್ಕೆ ಸಮಯ, ಮೂಲಸೌಕರ್ಯ ಮತ್ತು ಹಣ ಹೆಚ್ಚು ಬೇಕು. ಭಾರತದಲ್ಲಿ ಇಂತಹ ಒಂದೊಂದು ಟೆಸ್ಟ್‌ಗೂ ಸರ್ಕಾರ 2000-3000 ರು. ಖರ್ಚು ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ಜನರಿಂದ 4000-5000 ರು. ವಸೂಲು ಮಾಡುತ್ತಿವೆ. ಆದರೆ, ಎಂಜಲಿನ ಮೂಲಕ ಕೊರೋನಾ ಪತ್ತೆಹಚ್ಚುವ ‘ಸಲೈವಾಡೈರೆಕ್ಟ್’ ಎಂಬ ಹೊಸ ವಿಧಾನವನ್ನು ಯೇಲ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ಅಮೆರಿಕ ಸರ್ಕಾರ ಅನುಮತಿ ನೀಡಿದ್ದು, ಈ ವಿಧಾನಕ್ಕೆ ಯಾವುದೇ ಪೇಟೆಂಟ್‌ ಅಥವಾ ಶುಲ್ಕ ಪಡೆಯದೆ ಇದರ ಸೂತ್ರವನ್ನು ಎಲ್ಲರಿಗೂ ನೀಡುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಇದು ಜಗತ್ತಿನಾದ್ಯಂತ ಕೊರೋನಾ ಪರೀಕ್ಷೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಹೇಳಲಾಗಿದೆ.

ಗುಡ್‌ ನ್ಯೂಸ್: ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ!

ಪರೀಕ್ಷೆ ನಡೆಸುವುದು ಹೇಗೆ?

ಜನರಿಂದಲೇ ಸಣ್ಣ ಕಂಟೇನರ್‌ನಲ್ಲಿ ಅವರ ಎಂಜಲು ಪಡೆದು ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತದೆ. ಇದರ ಫಲಿತಾಂಶ ಶೇ.93ರಷ್ಟುನಿಖರವಾಗಿರುತ್ತದೆ. ಈಗಾಗಲೇ ಪ್ರಚಲಿತದಲ್ಲಿರುವ ಆರ್‌ಟಿಪಿಸಿಆರ್‌, ಆ್ಯಂಟಿಜೆನ್‌ ಪರೀಕ್ಷೆಗಳಿಗಿಂತ ಇದು ಹೆಚ್ಚು ನಿಖರ ಮತ್ತು ಸೋವಿ ವಿಧಾನವಾಗಿದೆ. ತಕ್ಷಣ ಫಲಿತಾಂಶ ಕೂಡ ಲಭ್ಯವಾಗಲಿದೆ.

ಕೊರೋನಾ ಸೋಂಕಿಗೆ ಹಿರಿಯ ಪತ್ರಕರ್ತ ಬಲಿ

ಎಂಜಲು ಪರೀಕ್ಷೆಯ ಪ್ರಯೋಜನ ಏನು?

ಸ್ವಾಬ್‌ ಪರೀಕ್ಷೆ ನಡೆಸಲು ಗಂಟಲು ಅಥವಾ ಮೂಗಿನ ದ್ರವ ಸಂಗ್ರಹಿಸುವಾಗ ಜನರಿಗೆ ಕಿರಿಕಿರಿಯಾಗಿ ಸೀನು, ಕೆಮ್ಮು ಬರುತ್ತದೆ. ಆಗ ಸ್ವಾಬ್‌ ಸಂಗ್ರಾಹಕರಿಗೆ ಸೋಂಕು ತಗಲುವ ಅಪಾಯವಿರುತ್ತದೆ. ಹೀಗಾಗಿ ಅವರು ಪಿಪಿಇ ಕಿಟ್‌ ಧರಿಸಿರಬೇಕಾಗುತ್ತದೆ. ಹಾಗೆಯೇ, ಸ್ವಾಬ್‌ ಸಂಗ್ರಹಕ್ಕೆ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯ ಅಗತ್ಯವಿದೆ. ಇನ್ನು, ಗಂಟಲು ದ್ರವವನ್ನು ವಿಶಿಷ್ಟರಾಸಾಯನಿಕದಲ್ಲಿ ಸಂಗ್ರಹಿಸಬೇಕು. ಅದಕ್ಕೆ ಖರ್ಚು ತಗಲುತ್ತದೆ. ಈ ಯಾವ ಸಮಸ್ಯೆಯೂ ಎಂಜಲು ಪರೀಕ್ಷೆಗೆ ಇರುವುದಿಲ್ಲ. ಇದರಿಂದಾಗಿ ಕೊರೋನಾ ಪರೀಕ್ಷೆಯ ವಿಧಾನ ಸುಲಭವಾಗುವುದರಿಂದ ಹೆಚ್ಚೆಚ್ಚು ಜನರಿಗೆ ಪರೀಕ್ಷೆ ನಡೆಸುವ ಮೂಲಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸರ್ಕಾರಗಳಿಗೂ ನೂರಾರು ಕೋಟಿ ರು. ಉಳಿಯುತ್ತದೆ ಎಂದು ಹೇಳಲಾಗಿದೆ.