Government Employee and Job: ಓರ್ವ ಸರ್ಕಾರಿ ಉದ್ಯೋಗಿ ಕೇವಲ ಎರಡು ನಿಮಿಷ ಕೆಲಸಕ್ಕೆ ಹಾಜರಾಗಿ ತಿಂಗಳಿಗೆ 35,000 ರೂ. ಸಂಬಳ ಪಡೆಯುತ್ತಿದ್ದ. ಎರಡು ವರ್ಷಗಳ ಕಾಲ ಈ ವಂಚನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ.

ಬ್ರಸಿಲಿಯಾ: ಈ ಕೆಲಸಕ್ಕೆ ವ್ಯಕ್ತಿ ತಿಂಗಳಿಗೆ 35,000 ರೂ. ಸಂಬಳ ಪಡೆಯುತ್ತಿದ್ದನು. ಕೆಲಸಕ್ಕೆ ಹಾಜರಾದ ಎರಡು ನಿಮಿಷಗಳಲ್ಲಿಯೇ ಆತ ಹಿಂದಿರುಗಿ ಹೋಗುತ್ತಿದ್ದನು. ಓರ್ವ ಸರ್ಕಾರಿ ಉದ್ಯೋಗಿ ಈ ರೀತಿಯಾಗಿ ಬರೋಬ್ಬರಿ ಎರಡು ವರ್ಷಗಳ ಕಾಲ ಮಾಡಿದ್ದಾನೆ. ಸದ್ಯ ಕೆಲಸಕ್ಕೆ ಚಕ್ಕರ್ ಹಾಕಿದ ಸರ್ಕಾರಿ ಉದ್ಯೋಗಿ ವಿರುದ್ಧ ತನಿಖೆ ಆರಂಭಿಸಲಾಗಿದೆ. ಕೇವಲ ಎರಡು ನಿಮಿಷ ಬಂದು ಹೋಗಿದ್ದಕ್ಕೆ 48 ತಿಂಗಳು ಕಾಲ ಆತ ಸಂಬಳ ಪಡೆದುಕೊಂಡಿದ್ದಾನೆ. ಯಾರು ಈ ವ್ಯಕ್ತಿ? ಆತ ಸಂಬಳ ಪಡೆದುಕೊಂಡಿದ್ದು ಹೇಗೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

2 ನಿಮಿಷ ಬಂದು ಹೋಗಿದ್ದಕ್ಕೆ ತಿಂಗಳಿಗೆ 35 ಸಾವಿರ ರೂಪಾಯಿ ಸಂಬಳ

ನ್ಯೂಸ್‌ಫ್ಲೇರ್‌ನ ವರದಿಯ ಪ್ರಕಾರ, 56 ವರ್ಷದ ಲೂಸಿಯಾನೊ ಗ್ಯಾಸ್ಪರ್ ದಾರು ಕೇವಲ 2 ನಿಮಿಷ ಬಂದು ಹೋಗಿದ್ದಕ್ಕೆ ತಿಂಗಳಿಗೆ 35 ಸಾವಿರ ರೂಪಾಯಿ ಸಂಬಳ ಪಡೆದುಕೊಂಡಿದ್ದಾನೆ. ಪರಾನಾದ ಪೊಂಟಾ ಗ್ರೊಸಾದಲ್ಲಿರುವ ಪುರಸಭೆಯ ಹಣಕಾಸು ವಿಭಾಗದಲ್ಲಿ ಲೂಸಿಯಾನೊ ಗ್ಯಾಸ್ಪರ್ ದಾರು ಕೆಲಸ ಮಾಡುತ್ತಿದ್ದನು. ಇದೀಗ ಲೂಸಿಯಾನೊ ಗ್ಯಾಸ್ಪರ್ ದಾರು ವಿರುದ್ಧ ತನಿಖೆ ನಡೆಯುತ್ತಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಲೂಸಿಯಾನೋ ಕೆಲಸ ಬಹಿರಂಗ

ಆಡಳಿತಾತ್ಮಕ ತಂತ್ರಜ್ಞರಾಗಿದ್ದ ಲೂಸಿಯಾನೋ ಪ್ರತಿದಿನ ಶಾರ್ಟ್ಸ್ ಮತ್ತು ಫ್ಲಿಪ್-ಫ್ಲಾಪ್‌ಗಳನ್ನು ಧರಿಸಿ ಬರುತ್ತಿದ್ದರು. ಕರ್ತವ್ಯಕ್ಕೆ ಹಾಜರಾದ ಎರಡು ನಿಮಿಷದಲ್ಲಿಯೇ ಕೆಲಸದಿಂದ ಹಿಂದಿರುಗಿ ಹೋಗುತ್ತಿದ್ದರು. ಈ ವರ್ಷದ ಮಾರ್ಚ್ ತಿಂಗಳಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಲೂಸಿಯಾನೋ ದಾರು ಕೆಲಸಕ್ಕೆ ಆಗಮಿಸಿ ಒಂದು ನಿಮಿಷ 15 ಸೆಕೆಂಡುಗಳ ನಂತರ ಹೊರಟು ಹೋಗುವುದನ್ನು ತೋರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.

2 ವರ್ಷ, ಬರೋಬ್ಬರಿ 5 ಲಕ್ಷ ರೂಪಾಯಿ ಸಂಬಳ

ಬೆಳಗ್ಗೆ ಬಂದು ಹೋದ ನಂತ ಅವರು ಸಂಜೆ ಬಂದು, ರಿಜಿಸ್ಟರ್‌ನಲ್ಲಿ ಎಲ್ಲವನ್ನೂ ದಾಖಲಿಸಿ, ಕೆಲಸಕ್ಕೆ ಬಂದು, ದಿನವಿಡೀ ಕೆಲಸ ಮಾಡಿದಂತೆ ಹಿಂತಿರುಗುತ್ತಿದ್ದರು. ಲೂಸಿಯಾನೊ ಗ್ಯಾಸ್ಪರ್ ದಾರು ಆಗಸ್ಟ್ 2023 ರಿಂದ ಜೂನ್ 2025 ರವರೆಗೆ ಬೆಳಗ್ಗೆ ಮತ್ತು ಸಂಜೆ ಕಚೇರಿಗೆ ಬಂದು ಹೋಗಿ ಮಾಡಿದ್ದಾರೆ. ಸಹಿ ಮಾಡೋಕೆ ತಿಂಗಳಿಗೆ ಸುಮಾರು 2,300 ಬಿಆರ್‌ಎಲ್ (35,000 ರೂಪಾಯಿ) ಸಂಬಳ ಪಡೆದುಕೊಂಡಿದ್ದಾರೆ. ಎರಡು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೇ ಸಂಬಳ ಸ್ವೀಕರಿಸಿದ್ದಾರೆ. 2 ವರ್ಷ ಯಾವುದೇ ಕೆಲಸವನ್ನು ಮಾಡದೇ ಒಟ್ಟು ಸುಮಾರು 33,000 ಬಿಆರ್‌ಎಲ್ (5 ಲಕ್ಷ ರೂಪಾಯಿ) ಸಂಬಳ ಸ್ವೀಕರಿಸಿದ್ದಾರೆ.

ಆಂತರಿಕ ತನಿಖೆಯಲ್ಲಿ ಬಹಿರಂಗ

ಪ್ರತಿದಿನ ಲೂಸಿಯಾನೊ ಗ್ಯಾಸ್ಪರ್ ದಾರು ಶಾರ್ಟ್ಸ್ ಧರಿಸಿ ಕೆಲಸಕ್ಕೆ ಬರುತ್ತಿರೋದನ್ನು ಗಮನಿಸಿದ ಸಹೋದ್ಯೋಗಿಯೊಬ್ಬರು ಅನುಮಾನ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಆಂತರಿಕ ತನಿಖೆ ನಡೆಸಿದಾಗ ಲೂಸಿಯಾನೊ ಗ್ಯಾಸ್ಪರ್ ದಾರು ಸುಮಾರು ಎರಡು ವರ್ಷಗಳಿಂದ ಅವನು ಈ ರೀತಿ ಕೆಲಸಕ್ಕೆ ಬಂದು ಹೋಗುತ್ತಿರೋದು ತಿಳಿದು ಬಂದಿದೆ. ಯಾವುದೇ ಕೆಲಸ ಮಾಡದೇ ಲೂಸಿಯಾನೊ ಗ್ಯಾಸ್ಪರ್ ದಾರು ಬಂದು ಹೋಗಿದ್ದಾರೆ. ಕೇವಲ ಸಹಿ ಮಾಡಲು ಮಾತ್ರ ಬೆಳಗ್ಗೆಯೊಮ್ಮೆ ಸಂಜೆಯೊಮ್ಮೆ ಬಂದು ಹೋಗುತ್ತಿರೋದು ಬಯಲಾಗಿದೆ.

ಯಾವುದೇ ಕೆಲಸ ಮಾಡದೇ ಸಂಬಳ ಪಡೆದುಕೊಂಡ ಲೂಸಿಯಾನೋ ಕುರಿತ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತನಿಖೆಯ ಸಮಯದಲ್ಲಿ ಲೂಸಿಯಾನೋ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಆತ ಯಾಕೆ ಹೀಗೆ ಮಾಡುತ್ತಿದ್ದ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ತಪ್ಪಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ವರದಿಯಾಗಿದೆ.