ಅಮೆರಿಕ ಸೇನೆಯಿಂದ ಬಂಧಿತರಾಗಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬದುಕಿನ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಬಸ್ ಡ್ರೈವರ್ ಆಗಿದ್ದ ಮಡುರೊ, ಆ.ಪ್ರ ಪುಟ್ಟಪರ್ತಿ ಸತ್ಯ ಸಾಯಿಬಾಬಾ ಅವರ ಕಟ್ಟಾ ಭಕ್ತರಾಗಿದ್ದರು ಮತ್ತು ತಮ್ಮ ಗುರುವಿನ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರು.
ವಾಷಿಂಗ್ಟನ್/ಕ್ಯಾರಕಾಸ್: ಶನಿವಾರ ಬೆಳಿಗ್ಗೆ ಅಮೆರಿಕದ ದಿಢೀರ್ ದಾಳಿಯಿಂದ ವೆನೆಜುವೆಲಾ ತತ್ತರಿಸಿದೆ. ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆ ಒತ್ತೆಯಾಳಾಗಿರಿಸಿಕೊಂಡಿದ್ದು, ವಿಚಾರಣೆಗಾಗಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಅಪರಾಧಗಳ ಆರೋಪ ಎದುರಿಸುತ್ತಿರುವ ಮಡುರೊ ಅವರ ಜೀವನದ ಇನ್ನೊಂದು ಮಗ್ಗುಲು ಈಗ ಸಂಚಲನ ಮೂಡಿಸುತ್ತಿದೆ.
ಬಸ್ ಡ್ರೈವರ್ ಟು ಅಧ್ಯಕ್ಷ: ಮಡುರೊ ಅಚ್ಚರಿಯ ಹಾದಿ
ನಿಕೋಲಸ್ ಮಡುರೊ ಅವರ ಜೀವನವು ಯಾವುದೇ ಚಲನಚಿತ್ರಕ್ಕೆ ಕಡಿಮೆ ಇಲ್ಲ. ಕ್ಯಾರಕಾಸ್‌ನ ಬೀದಿಗಳಲ್ಲಿ ಬಸ್ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿ, ಕಾಲಕ್ರಮೇಣ ವೆನೆಜುವೆಲಾದ ಸರ್ವೋಚ್ಚ ನಾಯಕನಾಗಿ ಬೆಳೆದರು. ಇಂತಹ ಕ್ರಾಂತಿಕಾರಿ ನಾಯಕನ ಮೇಲೆ ಪ್ರಭಾವ ಬೀರಿದ್ದು ಮಾತ್ರ ಸೌಮ್ಯ ಸ್ವಭಾವದ ಒಬ್ಬ ಭಾರತೀಯ ಆಧ್ಯಾತ್ಮಿಕ ಗುರು ಎಂಬುದು ವಿಶೇಷ.

ಪುಟ್ಟಪರ್ತಿಯ ಸಾಯಿಬಾಬಾರ ಕಟ್ಟಾ ಭಕ್ತ!
ಹೌದು, ಮಡುರೊ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಪರಮ ಅನುಯಾಯಿ. ಸುಮಾರು 20 ವರ್ಷಗಳ ಹಿಂದೆ ಮಡುರೊ ಅವರು ಪುಟ್ಟಪರ್ತಿಯ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದರು. ಒಬ್ಬ ಸಾಮಾನ್ಯ ಭಕ್ತನಂತೆ ನೆಲದ ಮೇಲೆ ಕುಳಿತು ಸಾಯಿಬಾಬಾ ಅವರ ಪ್ರವಚನ ಆಲಿಸುತ್ತಿದ್ದ ಮಡುರೊ ಅವರ ಫೋಟೋ ಈಗಲೂ ಲಭ್ಯವಿದೆ. ಅವರ ಆಡಳಿತ ಕಚೇರಿಯಲ್ಲೂ ಸಾಯಿಬಾಬಾರ ಭಾವಚಿತ್ರಕ್ಕೆ ಅಗ್ರಸ್ಥಾನ ನೀಡಲಾಗಿದೆ.

ಗುರುವಿನ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ
ಸತ್ಯ ಸಾಯಿಬಾಬಾರ ಮೇಲಿನ ಭಕ್ತಿಯಿಂದ ಮಡುರೊ ಅವರು ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. 2011ರಲ್ಲಿ ಸಾಯಿಬಾಬಾ ನಿಧನರಾದಾಗ, ಇಡೀ ವೆನೆಜುವೆಲಾ ದೇಶದಲ್ಲಿ ಅಧಿಕೃತವಾಗಿ 'ರಾಷ್ಟ್ರೀಯ ಶೋಕಾಚರಣೆ' ಘೋಷಿಸುವ ಮೂಲಕ ಮಡುರೊ ತಮ್ಮ ಗುರುಭಕ್ತಿಯನ್ನು ಜಗತ್ತಿಗೆ ಸಾರಿದ್ದರು. ಇದು ಅಂದು ದೊಡ್ಡ ಸುದ್ದಿಯಾಗಿತ್ತು.

ಶತಮಾನೋತ್ಸವದಂದು ಸಲ್ಲಿಸಿದ್ದರು ವಿಶೇಷ ಗೌರವ
ತಮ್ಮ ಬಂಧನಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ನವೆಂಬರ್ 23, 2025 ರಂದು ಸಾಯಿಬಾಬಾ ಅವರ ಶತಮಾನೋತ್ಸವವನ್ನು ಮಡುರೊ ಅದ್ದೂರಿಯಾಗಿ ಆಚರಿಸಿದ್ದರು. ಬಾಬಾ ಅವರನ್ನು "ಬೆಳಕಿನ ಸಾಕಾರ" ಎಂದು ಬಣ್ಣಿಸಿದ್ದ ಅವರು, "ಗುರುಗಳ ಬುದ್ಧಿವಂತಿಕೆಯು ನಮಗೆ ಯಾವಾಗಲೂ ಜ್ಞಾನೋದಯ ನೀಡಲಿ" ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು. ಇಂದು ಅಮೆರಿಕದ ಸೆರೆಯಲ್ಲಿದ್ದರೂ ಮಡುರೊ ಅವರ ಈ ಭಾರತೀಯ ಆಧ್ಯಾತ್ಮಿಕ ನಂಟಿನ ಕಥೆ ಈಗ ಜಾಗತಿಕವಾಗಿ ಚರ್ಚೆಯಾಗುತ್ತಿದೆ.


