Russia Ukraine Crisis: ಪುಟಿನ್ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?
ಈಗ ಪರಿಸ್ಥಿತಿ ಹೇಗಿದೆ ಎಂದರೆ ಯುರೋಪ್ ಮತ್ತು ಅಮೆರಿಕ ಸುಮ್ಮನೆ ಕುಳಿತರೆ ಪುಟಿನ್ ಇನ್ನುಳಿದ ಸೋವಿಯತ್ ವಿಘಟಿತ ರಾಷ್ಟ್ರಗಳತ್ತ ಕಣ್ಣು ಹಾಕುತ್ತಾರೆ. ಹಾಗೆಂದು ಉಕ್ರೇನ್‌ಗೆ ಸೇನಾ ಸಹಾಯ ಕಳುಹಿಸಿದರೆ ಒಂದು ಸೀಮಿತ ಯುದ್ಧ ವಿಕೋಪಕ್ಕೆ ತಿರುಗುತ್ತದೆ.
1991 ರಲ್ಲಿ ಸೌಮ್ಯವಾದಿಗಳ ಮುಷ್ಟಿಯಲ್ಲಿದ್ದ ಸೋವಿಯತ್ ಯೂನಿಯನ್ ವಿಘಟನೆಗೊಂಡ ನಂತರ ರಷ್ಯಾ ಕಾಗದದಲ್ಲಿ ಸೂಪರ್ ಪವರ್ ಆಗಿ ಉಳಿದಿತ್ತಾದರೂ, ವಿಶ್ವದ ಆಗು ಹೋಗುಗಳಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಶೀತಲ ಯುದ್ಧ ಕಾಲದ ಪ್ರಭಾವ ಮತ್ತು ಪ್ರಸ್ತುತತೆ ಉಳಿಸಿಕೊಂಡಿರಲಿಲ್ಲ. ಆದರೆ ರಷ್ಯಾದಲ್ಲಿ ಕಳೆದ ಎರಡು ದಶಕಗಳಿಂದ ನಿರಂಕುಶ ಆಡಳಿತ ನಡೆಸುತ್ತಿರುವ ಪುಟಿನ್ ಒಬ್ಬ ಮಹತ್ವಾಕಾಂಕ್ಷಿ ನಾಯಕ. 30 ವರ್ಷಗಳ ಹಿಂದಿನ ಪ್ರಭಾವವನ್ನು ಮರಳಿ ಗಳಿಸಲು ರಷ್ಯಾದ ಭೌಗೋಳಿಕ ವಿಸ್ತರಣೆಯಿಂದ ಮಾತ್ರ ಸಾಧ್ಯ ಎಂದು ನಂಬಿರುವ ನಾಯಕ.
ಎರಡು ದಶಕಗಳ ಆಡಳಿತದ ಕಾರಣದಿಂದ ಪುಟಿನ್ ಬಗ್ಗೆ ಮೂಡುತ್ತಿರುವ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಲು ಯುರೋಪಿಯನ್ ದೇಶಗಳ ವಿರುದ್ಧ ರಷ್ಯಾದ ಜನರಲ್ಲಿರುವ ಭಾವನೆಗಳ ಕೆರಳುವಿಕೆ ಕೂಡ ಪುಟಿನ್‌ಗೆ ಬೇಕಿತ್ತು. ಅದರ ಜೊತೆಗೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಪ್ರಬಲ ರಾಜಕೀಯ ನಾಯಕತ್ವದ ಕೊರತೆಯೂ ಪುಟಿನ್ ಮಹತ್ವಾಕಾಂಕ್ಷೆಗೆ ನೀರು ಎರೆಯುತ್ತಿದೆ. 2014ರಲ್ಲಿ ಉಕ್ರೇನ್‌ನ ಕ್ರಿಮಿಯಾವನ್ನು ರಷ್ಯಾ ಬಲವಂತದಿಂದ ಅಕ್ರಮಿಸಿಕೊಂಡಾಗ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಬರೀ ಎಚ್ಚರಿಕೆ ಕೊಡುವುದಕ್ಕೆ ಮಾತ್ರ ಸೀಮಿತ ಎಂದು ಪುಟಿನ್‌ಗೆ ಮನವರಿಕೆ ಆಗಿದೆ.
Russia Ukraine Crisis:ಚರ್ನೋಬಿಲ್ ಪರಮಾಣು ಸ್ಥಾವರ ವಶಕ್ಕೆ: ಮಹಾಬಾಂಬ್ ದಾಳಿಗೆ ರಷ್ಯಾ ಚಿಂತನೆ?
ಹೀಗಾಗಿ 8 ವರ್ಷಗಳ ನಂತರ ಮರಳಿ ಪೂರ್ವ ಉಕ್ರೇನನ್ನು ತನ್ನ ವಸಾಹತು ಮಾಡಿಕೊಳ್ಳಲು ಪುಟಿನ್ ಪೂರ್ತಿ ಸೇನಾ ಶಕ್ತಿ ಪ್ರಯೋಗಿಸುತ್ತಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಯುರೋಪ್ ಮತ್ತು ಅಮೆರಿಕ ಸುಮ್ಮನೆ ಕುಳಿತರೆ ಪುಟಿನ್ ಇನ್ನುಳಿದ ಸೋವಿಯತ್ ವಿಘಟಿತ ರಾಷ್ಟ್ರಗಳತ್ತ ಕಣ್ಣು ಹಾಕುತ್ತಾರೆ. ಹಾಗೆಂದು ಉಕ್ರೇನ್‌ಗೆ ಸೇನಾ ಸಹಾಯ ಕಳುಹಿಸಿದರೆ ಒಂದು ಸೀಮಿತ ಯುದ್ಧ ವಿಕೋಪಕ್ಕೆ ತಿರುಗುತ್ತದೆ.
ನ್ಯಾಟೋ ತಡೆಯುವ ತಂತ್ರ
ಎರಡನೇ ಮಹಾಯುದ್ಧದಲ್ಲಿ ಜರ್ಮನಿ, ಇಟಲಿ, ಜಪಾನ್‌ಗಳು ಧ್ವಂಸಗೊಂಡ ನಂತರ ವಿಶ್ವದ ರಾಜಕೀಯ ಪ್ರಭಾವ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವೆ ಹಂಚಿಕೆ ಆಯಿತು. ಬಹುತೇಕ ಎರಡನೇ ಮಹಾಯುದ್ಧ ಮುಗಿದ 1945ರಿಂದ ಸೋವಿಯತ್ ಶಿಥಿಲಗೊಂಡ 1991ರವರೆಗೆ ಸೂಯೆಜ್ ಕಾಲುವೆ ವಿವಾದ, ಮಿಸೈಲ್ ಬಿಕ್ಕಟ್ಟು, ಕೊರಿಯನ್ ಯುದ್ಧ, ಅಪಘಾನಿಸ್ತಾನ್ ಬಿಕ್ಕಟ್ಟು ಎಲ್ಲವೂ ನಡೆದದ್ದು ಅಮೆರಿಕ ಮತ್ತು ಸೋವಿಯತ್ ಯೂನಿಯನ್‌ನ ಶೀತಲ ಸಮರದ ಕಾರಣದಿಂದ. ಬಹುತೇಕ ಸಂಪದ್ಭರಿತ ಪಶ್ಚಿಮ ಯುರೋಪ್ ಅಮೆರಿಕದ ಪ್ರಭಾವದಲ್ಲಿದ್ದರೆ ಪೂರ್ವ ಯುರೋಪ್‌ನಲ್ಲಿ ರಷ್ಯಾದ ಪ್ರಭಾವ ಇತ್ತು.
ಒಂದು ದೇಶ ಮುಕ್ತ ಮಾರುಕಟ್ಟೆಯ ಪಕ್ಷಪಾತಿಯಾದರೆ ಇನ್ನೊಂದು ದೇಶ ಸಾಮ್ಯವಾದದ ಅತಿರೇಕಿ. ಆದರೆ 1991ರಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಯ ನಡುವಿನ ಗೋಡೆ ಕುಸಿದು ಬೀಳುವುದರೊಂದಿಗೆ ಸೋವಿಯತ್ ಯೂನಿಯನ್ ಕೂಡ ವಿಘಟನೆಗೊಂಡಿತು. ನಂತರ ನಿಧಾನವಾಗಿ ಪೂರ್ವ ಯುರೋಪ್‌ನ ಮೊದಲಿಗೆ ಸೋವಿಯತ್ ಜೊತೆಗೆ ಮಿಲಿಟರಿ ಮೈತ್ರಿಯ ವಾರ್ಸಾ ಒಪ್ಪಂದ ಹೊಂದಿದ್ದ ಒಂದೊಂದೇ ದೇಶಗಳು ನ್ಯಾಟೋ ಜೊತೆಗೆ ಮಿಲಿಟರಿ ಒಪ್ಪಂದ ಮಾಡಿಕೊಂಡಿದ್ದು ರಷ್ಯಾವನ್ನು ಕೆರಳಿಸಿತ್ತು. ಆದರೆ ಯಾವಾಗ 2014ರಲ್ಲಿ ಹಿಂದೊಮ್ಮೆ ತನ್ನದೇ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌ನಲ್ಲಿ ರಷ್ಯಾದ ಜೊತೆ ಮೈತ್ರಿಯಿಂದಿದ್ದ ನಾಯಕನನ್ನು ಪದಚ್ಯುತಗೊಳಿಸಲಾಯಿತೋ ಆಗಿನಿಂದ ಎಲ್ಲಿ ರಷ್ಯಾದ ಪಕ್ಕದಲ್ಲಿ ಬಂದು ನ್ಯಾಟೋ ಪಡೆಗಳು ಡೇರೆ ಹಾಕುತ್ತವೆಯೋ ಎನ್ನುವ ಆತಂಕ ರಷ್ಯಾಗೆ ಶುರುವಾಯಿತು.
ಹೀಗಾಗಿ ನ್ಯಾಟೋ ಜೊತೆ ಉಕ್ರೇನ್ ಅಧಿಕೃತ ಒಪ್ಪಂದ ಮಾಡಿಕೊಳ್ಳುವ ಮೊದಲೇ ಪುಟಿನ್ ಯಾವುದೇ ಪ್ರಚೋದನೆ ಇಲ್ಲದೆ ಮಿಲಿಟರಿ ದಾಳಿ ನಡೆಸುತ್ತಿದ್ದಾರೆ. ರಷ್ಯಾದ ಸೇನಾ ಆಕ್ರಮಣದ ಮೂಲ ಉದ್ದೇಶ ಇರುವುದು ಅಮೆರಿಕ ಮತ್ತು ಯುರೋಪ್‌ನ ಸೇನಾ ಪ್ರಭಾವವನ್ನು ಉಕ್ರೇನ್‌ನ ಗಡಿಯಾಚೆಗೆ ತಡೆದು ನಿಲ್ಲಿಸಿ ಉಕ್ರೇನನ್ನು ರಷ್ಯಾ ಮತ್ತು ಯುರೋಪ್ ನಡುವೆ ಒಂದು ತಟಸ್ಥ ಪ್ರದೇಶವಾಗಿ ಇಡುವುದು. ಇದಕ್ಕೆ ಯುರೋಪ್ ರಾಷ್ಟ್ರಗಳ ಪ್ರತಿಕ್ರಿಯೆ ಏನು ಮತ್ತು ಅಮೆರಿಕ ಎಷ್ಟುಮುಂದೆ ಹೋಗಲು ತಯಾರಿದೆ ಎನ್ನುವುದು ಯುದ್ಧ ಸೀಮಿತವೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲಿದೆ.
ಅಮೆರಿಕದ ಭೀತಿ ಮುಗಿಯಿತಾ?
1940ರ ನಂತರದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಏನೇ ರಾಜಕೀಯ ನಡೆದರೂ ಕೂಡ ಅಮೆರಿಕದಲ್ಲಿ ಆ ನಿರ್ದಿಷ್ಟಭಾಗಕ್ಕೆ ಸಂಬಂಧಪಟ್ಟನೀತಿ ರೂಪುಗೊಳ್ಳುತ್ತಿತ್ತು. ಬಹುಪಾಲು ವ್ಯಾಪಾರದ ಸ್ವಾರ್ಥಕ್ಕೆ, ಕೆಲವೊಮ್ಮೆ ಮುಕ್ತ ಮಾರುಕಟ್ಟೆಮತ್ತು ಕಮ್ಯುನಿಸಂನ ತಿಕ್ಕಾಟ, ಕೆಲವೊಮ್ಮೆ ಮುಕ್ತ ಜೀವನ ಪದ್ಧತಿ ಮತ್ತು ಇಸ್ಲಾಮಿಕ್ ಭಯೋತ್ಪಾದನೆಯ ವೈರುಧ್ಯಗಳಿಂದಾಗಿ ಆದರೂ ಎಲ್ಲದರ ಬಗ್ಗೆ ಅಮೆರಿಕ ಒಂದು ವಿದೇಶಾಂಗ ನೀತಿ ಪ್ರಕಟಿಸುತ್ತಿತ್ತು. ಆದರೆ ಮೊದಲಿಗೆ ಡೊನಾಲ್ಡ… ಟ್ರಂಪ್ ಮತ್ತು ಈಗ ಜೋ ಬೈಡೆನ್‌ರ ಆಡಳಿತದಲ್ಲಿ ಅಮೆರಿಕದ ಮಧ್ಯಪ್ರವೇಶದ ಭೀತಿಯ ತಲ್ಲಣ ಕಡಿಮೆ ಆಗುತ್ತಿದೆ. 6 ತಿಂಗಳ ಹಿಂದೆ ಯುದ್ಧದ ಗೊಡವೆ ಬೇಡ ಎಂದು ರಾತ್ರೋರಾತ್ರಿ ತಾಲಿಬಾನ್‌ರಂಥ ರಕ್ಕಸರ ಕೈಯಲ್ಲಿ ಅಷ್ಘಾನಿಸ್ತಾನವನ್ನು ಕೊಟ್ಟು ಹೋದ ಅಮೆರಿಕ ಉಕ್ರೇನ್ ವಿಷಯದಲ್ಲಿ ಮಧ್ಯ ಪ್ರವೇಶಿಸಲಾರದು, ಹಾಗೇನಾದರೂ ಆದರೆ ಇನ್ನೊಂದು ಶಕ್ತಿಶಾಲಿ ದೇಶ ಚೀನಾ ತನ್ನ ಜೊತೆಗೆ ನಿಂತುಕೊಳ್ಳಬಹುದು ಎಂದು ಊಹಿಸಿಯೇ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಆಕ್ರಮಣಕ್ಕೆ ಕೈಹಾಕಿದ ಹಾಗಿದೆ.
ಅದರ ಜೊತೆಗೆ ಕೋವಿಡ್ ಮೂರನೇ ಅಲೆಯ ನಂತರ ಸಿಕ್ಕಾಪಟ್ಟೆಆರ್ಥಿಕ ಕುಸಿತದ ಕಾರಣದಿಂದ ಹಣದುಬ್ಬರ ಎದುರಿಸುತ್ತಿರುವ ಅಮೆರಿಕ ಮತ್ತು ಪಶ್ಚಿಮದ ಯುರೋಪ್ ದೇಶಗಳು ಯುದ್ಧಕ್ಕೆ ತಯಾರಾಗಲಾರವು ಎಂದು ಪುಟಿನ್ ಲೆಕ್ಕ ಹಾಕಿದ್ದಾರೆ. ಹಿಂದೆ ಫ್ರೆಂಚರು, ಆಂಗ್ಲರು ಮತ್ತು ಯಹೂದಿಗಳು ಸೇರಿ ನಮಗೆ ಮೊದಲನೇ ಮಹಾಯುದ್ಧದ ನಂತರ ವಿಪರೀತ ಅನ್ಯಾಯ ಮಾಡಿದರು ಎಂದು ಹೇಳುತ್ತಾ ಜರ್ಮನಿಯಲ್ಲಿ ರಾಜಕೀಯವಾಗಿ ಬೆಳೆದ ಅಡಾಲ್ಫ… ಹಿಟ್ಲರ್ ಯುದ್ಧದ ಭೀತಿ ಸೃಷ್ಟಿಸುತ್ತಲೇ ವಿಸ್ತರಣೆಗೆ ಕೈಹಾಕಿದ್ದೇ ದ್ವೀತಿಯ ಮಹಾಯುದ್ಧಕ್ಕೆ ಕಾರಣ ಆಯಿತು. ಈಗ ಪುಟಿನ್ ಕೂಡ ಅದನ್ನೇ ಮಾಡುತ್ತಿದ್ದಾರೆ. ವಿಶ್ವದ ಇತಿಹಾಸದಲ್ಲಿ ಬಹುಪಾಲು ಯುದ್ಧಗಳು ನಡೆದಿರುವುದು ಮಣ್ಣು ಅರ್ಥಾತ್ ಭೂಮಿಯ ವಿಸ್ತರಣೆಗಾಗಿ. ಲೂಟಿಗಳು ನಡೆದಿರುವುದು ಹೊನ್ನಿಗಾಗಿ. ಕಲಹಗಳು ನಡೆದಿರುವುದು ಹೆಣ್ಣಿಗಾಗಿ ಅಲ್ಲವೇ.
ಮೂರನೇ ಮಹಾಯುದ್ಧ ಆಗುತ್ತಾ?
ಆಧುನಿಕ ವಿಶ್ವದ ಮೊದಲ ಮಹಾಯುದ್ಧ ನಡೆದದ್ದು ಕೂಡ ಆಸ್ಟ್ರಿಯಾ, ಹಂಗೇರಿಯ ರಾಜಸತ್ತೆಗಳು ರಷ್ಯಾದ ಬಳಿ ಇದ್ದ ಸರ್ಬಿಯಾ ಮೇಲೆ ದಾಳಿ ನಡೆಸಿದ ನಂತರವೇ. ಆಗ ರಷ್ಯಾದಲ್ಲಿ ಝಾರ್ ರಾಜಮನೆತನದ ಆಳ್ವಿಕೆ ಇತ್ತು. ಈ ಯುದ್ಧದ ನಂತರವೇ ಬೋಲ್ಷೆವಿಕ್ ಕ್ರಾಂತಿಯ ನಂತರ ಕಮ್ಯುನಿಸ್ಟರು ಸೋವಿಯತ್ ಯೂನಿಯನ್ ಸ್ಥಾಪನೆ ಮಾಡಿದ್ದು. ನಂತರ ನಡೆದ ಎರಡನೇ ಮಹಾಯುದ್ಧ ಕೂಡ ಶುರುವಾಗಿದ್ದು ಹಿಟ್ಲರ್ ಪೂರ್ವ ಯುರೋಪ್‌ನ ಮೇಲೆ ಕಣ್ಣು ಹಾಕಿದ ನಂತರ. ಈಗ ಶೀತಲ ಯುದ್ಧದ ನಂತರದ 30 ವರ್ಷಗಳ ಶಾಂತಿಯ ಬಳಿಕ ರಷ್ಯಾ ಮತ್ತು ಯುರೋಪಿನ ಬಿಕ್ಕಟ್ಟು ಹೊಸ ಯುದ್ಧದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
ಇದು ಕೂಡ ನಡೆಯುತ್ತಿರುವುದು ಮೊದಲ ಎರಡು ಮಹಾ ಯುದ್ಧಗಳು ನಡೆದ ಪೂರ್ವ ಯುರೋಪ್‌ನ ಮೇಲಿನ ಪ್ರಭಾವ ಬೇಕೆಂಬ ಕಾರಣದಿಂದಲೇ ಅನ್ನುವುದು ಗಮನಿಸಬೇಕಾದ ಸಂಗತಿ. ನಿನ್ನೆ ಬೆಳಿಗ್ಗೆ ವೈಮಾನಿಕ ದಾಳಿ ಶುರುವಾದ ಬೆನ್ನಲ್ಲೇ ರಷ್ಯಾ ತನ್ನ ಒಂದು ಲಕ್ಷದ 90 ಸಾವಿರ ಭೂಸೇನಾ ಯೋಧರನ್ನು ಪೂರ್ವ ಉಕ್ರೇನ್‌ನ ತನ್ನ ಬಂಡುಕೋರರಿರುವ ಪ್ರಾಂತ್ಯಗಳಿಗೆ ನುಗ್ಗಿಸಿದೆ. ಒಂದು ವೇಳೆ ನ್ಯಾಟೋ ಮಧ್ಯಪ್ರವೇಶ ಮಾಡಿದರೆ ಉಕ್ರೇನನ್ನು ಇಬ್ಭಾಗಿಸುವ, ಇಲ್ಲವಾದಲ್ಲಿ ಪೂರ್ತಿ ವಶಕ್ಕೆ ತೆಗೆದುಕೊಂಡು ತನ್ನ ಮಾತು ಕೇಳುವ ವ್ಯಕ್ತಿಯನ್ನು ಕುರ್ಚಿಯಲ್ಲಿ ಕೂರಿಸುವ ಇರಾದೆ ಇರುವಂತೆ ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ಉಕ್ರೇನ್ ಅಕ್ಕಪಕ್ಕದ ಪೂರ್ವ ಯುರೋಪ್ ರಾಷ್ಟ್ರಗಳಾದ ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ಬಲ್ಗೇರಿಯಾ, ಪೋಲೆಂಡ್‌ಗಳಿಗೆ ಅಮೆರಿಕ 90 ಸಾವಿರ ಯೋಧರನ್ನು ಕಳುಹಿಸಿದೆ. ಆದರೆ ಉಕ್ರೇನ್ ನ್ಯಾಟೋ ರಾಷ್ಟ್ರ ಅಲ್ಲವಾದ್ದರಿಂದ ಸದ್ಯಕ್ಕೆ ಮಧ್ಯಪ್ರವೇಶ ಮಾಡುವ ಲಕ್ಷಣ ಕಾಣುತ್ತಿಲ್ಲ. ಆದರೆ ಈ ಬಿಕ್ಕಟ್ಟು ಇಲ್ಲಿಗೆ ಮುಗಿಯುವ ಲಕ್ಷಣಗಳು ಕೂಡ ಕಾಣುತ್ತಿಲ್ಲ.
Russia Ukraine Crisis:ನ್ಯಾಟೋ ಒಕ್ಕೂಟ ಎಂದರೇನು?: ನ್ಯಾಟೋ ಬಗ್ಗೆ ರಷ್ಯಾಕ್ಕೇಕೆ ಸಿಟ್ಟು?
ಯುದ್ಧದ ಆರ್ಥಿಕ ಹೊಡೆತಗಳು
ಅದೇನೋ ಗೊತ್ತಿಲ್ಲ ಈ ವೈರಸ್ಸುಗಳು, ಆರ್ಥಿಕ ಹಿಂಜರಿತ ಮತ್ತು ಯುದ್ಧಗಳು ಒಂದರ ಹಿಂದೆ ಒಂದು ಬರುತ್ತವೆ. ಅಷ್ಟೇ ಅಲ್ಲ ಈ ಚಕ್ರದಿಂದ ವಿಶ್ವದ ರಾಜಕೀಯ ಪ್ರಾಬಲ್ಯಗಳು ಕೂಡ ಅದಲು ಬದಲು ಆಗುತ್ತಿರುತ್ತವೆ. ಮೊದಲನೇ ಮಹಾಯುದ್ಧದ ನಂತರ 1918ರಲ್ಲೇ ಸ್ಪಾ್ಯನಿಷ್ ಫä್ಲ ಅಟ್ಟಹಾಸ ಮೆರೆದರೆ, 1930ರ ಅತಿ ದೊಡ್ಡ ಆರ್ಥಿಕ ಕುಸಿತದ ನಂತರವೇ ಎರಡನೇ ಮಹಾಯುದ್ಧ ಶುರುವಾಗಿದ್ದು. ಈಗ ಕೊರೋನಾ ಸತಾಯಿಸಿದ ನಂತರ ಮರಳಿ ಯುದ್ಧದ ಕಾರ್ಮೋಡಗಳು ಕವಿದಿವೆ. ಇವತ್ತಿನ ಸ್ಥಿತಿಯಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದರ ಪ್ರಭಾವ ಪೂರ್ತಿ ವಿಶ್ವದ ಮೇಲೆ ಆಗುವುದಕ್ಕೆ ಕಾರಣ ಜಾಗತೀಕರಣ. ಈಗ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ತಕ್ಷಣ ತೈಲ ಬೆಲೆಗಳು ಏಕ್‌ದಂ ಏರಿಕೆ ಆಗಿದ್ದು, ಬಹುತೇಕ ರಾಷ್ಟ್ರಗಳ ಆದಾಯ ಮತ್ತು ಖರ್ಚಿನ ಗಣಿತ ಬಿಗಡಾಯಿಸಲಿದೆ.
ರಷ್ಯಾ ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಿಗೆ ತೈಲ ಮತ್ತು ಗ್ಯಾಸ್ ಪೂರೈಸುವ ದೊಡ್ಡ ರಾಷ್ಟ್ರವಾದ್ದರಿಂದ, ಎರಡೂ ಬೆಲೆಗಳು ಏರಿಕೆ ಆಗಿ ಹಣದುಬ್ಬರದ ಪ್ರಮಾಣ ವಿಪರೀತ ಆಗಲಿದೆ. ಉಕ್ರೇನ್ ಗೋಧಿ ಉತ್ಪಾದಿಸುವ ದೊಡ್ಡ ರಾಷ್ಟ್ರವಾಗಿದ್ದು, ಯುದ್ಧದಿಂದಾಗಿ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಆಹಾರ ಬೆಲೆಯಲ್ಲಿ ಏರಿಕೆ ಮತ್ತು ಕೊರತೆ ಕೂಡ ಕಾಣಿಸುವ ಸಾಧ್ಯತೆಗಳಿವೆ. ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವ ಯುರೋಪ್‌ನಿಂದಾಗಿ ಜರ್ಮನಿ ಮತ್ತು ರಷ್ಯಾ ನಡುವಿನ ಗ್ಯಾಸ್ ಪೈಪ್‌ಲೈನ್ ನನೆಗುದಿಗೆ ಬೀಳಲಿದ್ದು, ಈ ಹೆದರಿಕೆಯಿಂದಾಗಿಯೇ ಒಂದೇ ದಿನ ರಷ್ಯಾದ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿದೆ. ಮೊದಲೇ ಕೊರೋನಾದ ಹೊಡೆತದಿಂದ ತತ್ತರಿಸಿರುವ ಬಹುತೇಕ ರಾಷ್ಟ್ರಗಳಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಇನ್ನಷ್ಟುಹೊಡೆತ ಬೀಳಲಿದೆ.
ಭಾರತದ ಮೇಲೇನು ಎಫೆಕ್ಟ್?
ವಿಶ್ವದ ಮೊದಲೆರಡು ಯುದ್ಧಗಳು ನಡೆದಾಗ ಭಾರತ ಆಂಗ್ಲರ ವಸಾಹತು ರಾಷ್ಟ್ರವಾಗಿತ್ತು. ಹೀಗಾಗಿ ಆಂಗ್ಲರ ಪರವಾಗಿ ಭಾರತೀಯ ಸೈನಿಕರು ಯುದ್ಧಭೂಮಿಯಲ್ಲಿದ್ದರು. ನಂತರದ ಶೀತಲ ಯುದ್ಧದ ಸಂದರ್ಭದಲ್ಲಿ ಪಂಡಿತ್ ನೆಹರು ಕಾಲದಲ್ಲಿ ನಾವು ಅಲಿಪ್ತ ರಾಷ್ಟ್ರಗಳ ಭಾಗವಾಗಿದ್ದೆವು. ಆದರೆ ಚೀನಾ ಯುದ್ಧದ ಸೋಲಿನ ನಂತರ ಇಂದಿರಾ ಗಾಂಧಿ ಕಾಲದಲ್ಲಿ ನಾವು ಸೋವಿಯತ್ ಯೂನಿಯನ್‌ನ ಮಿತ್ರರಾದೆವು. ಹೀಗಾಗಿಯೇ ಪಾಕಿಸ್ತಾನದ ಬೆಂಬಲಕ್ಕೆ ಅಮೆರಿಕ ಬಂದು ಕುಳಿತಿತ್ತು. ಆದರೆ ಈಗ ನಮ್ಮ ರಾಜಕೀಯ, ಆರ್ಥಿಕ ಶಕ್ತಿ ಜೊತೆಗೆ ಸಾಮಾಜಿಕ ಶಕ್ತಿಯೂ ಬೆಳೆದಿದೆ.
ಇವತ್ತಿನ ಸ್ಥಿತಿಯಲ್ಲಿ ಭಾರತವು ಅಮೆರಿಕ, ಯುರೋಪ್, ರಷ್ಯಾ ಹೀಗೆ ಎಲ್ಲ ರಾಷ್ಟ್ರಗಳ ಮಿತ್ರನೂ ಹೌದು. ಆದರೆ ಬೆಳೆಯುತ್ತಿರುವ ರಷ್ಯಾ, ಚೀನಾ, ಪಾಕಿಸ್ತಾನದ ಗೆಳೆತನ ಭಾರತದ ಹಿತಕ್ಕೆ ಯಾವತ್ತಿಗೂ ಸಮಸ್ಯಾತ್ಮಕ, ಅಷ್ಟೇ ಅಲ್ಲ ಮಾರಕವೂ ಹೌದು. ಇನ್ನು ಆರ್ಥಿಕವಾಗಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 100 ಡಾಲರ್ ದಾಟುತ್ತಿದ್ದು, ಮಾ.7ರ ಯುಪಿ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಲಿದೆ. ಇದರಿಂದ ಸ್ಟೀಲ್ ನಿಂದ ಹಿಡಿದು ತರಕಾರಿವರೆಗೆ ಎಲ್ಲವೂ ತುಟ್ಟಿಆಗಲಿವೆ. ಇದು ಸರ್ಕಾರದ ವಿತ್ತೀಯ ಕೊರತೆಯನ್ನು ಹಿಗ್ಗಿಸಲಿದ್ದು, ಸರ್ಕಾರದ ಮೂಲಭೂತ ಸೌಕರ್ಯದ ಮೇಲಿನ ಖರ್ಚಿನ ಮೇಲೂ ಪರಿಣಾಮ ಬೀರಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ