2ನೇ ಮಹಾಯುದ್ಧದ ಬಳಿಕ ರಚನೆಯಾದ ನ್ಯಾಟೋ ಪಡೆಯು ತನ್ನ ವಿರುದ್ಧದ ಕಾರಾರ‍ಯಚರಣೆಗಾಗಿ ರಚಿಸಲಾದ ಕೂಟ ಎಂಬುದು ರಷ್ಯಾದ ಲೆಕ್ಕಾಚಾರ

ಮಾಸ್ಕೋ (ಫೆ. 25) : 2ನೇ ಮಹಾಯುದ್ಧದ ಬಳಿಕ ರಚನೆಯಾದ ನ್ಯಾಟೋ ಪಡೆಯು ತನ್ನ ವಿರುದ್ಧದ ಕಾರಾರ‍ಯಚರಣೆಗಾಗಿ ರಚಿಸಲಾದ ಕೂಟ ಎಂಬುದು ರಷ್ಯಾದ ಲೆಕ್ಕಾಚಾರ. ಇದರ ಜತೆಗೆ 1991ರಲ್ಲಿ ಸೋವಿಯತ್‌ ಒಕ್ಕೂಟ ಪತನದ ಬಳಿಕ ಸೋವಿಯತ್‌ ಒಕ್ಕೂಟದಲ್ಲಿದ್ದ ಹಲವು ದೇಶಗಳು ನ್ಯಾಟೋ ಪಡೆಗಳ ಸದಸ್ಯ ರಾಷ್ಟ್ರಗಳಾಗಿವೆ. ಅಲ್ಲದೆ 2008ರಲ್ಲಿ ರಷ್ಯಾದ ಜತೆ ಗಡಿ ಹಂಚಿಕೊಂಡ ಉಕ್ರೇನ್‌ಗೂ ಸದಸ್ಯ ರಾಷ್ಟ್ರವಾಗಲು ನ್ಯಾಟೋ ಆಹ್ವಾನ ನೀಡಿದೆ. 

ಮೊದಲೇ ನ್ಯಾಟೋ ಎಂದರೆ ಬೆಂಕಿಯ ಕೆಂಡಕಾರುತ್ತಿದ್ದ ರಷ್ಯಾಕ್ಕೆ, ಇದು ಗಾಯದ ಮೇಲೆ ತುಪ್ಪ ಸುರಿದಂತಾಗಿದೆ. ಇದೇ ಕಾರಣಕ್ಕೆ ಉಕ್ರೇನ್‌ ನ್ಯಾಟೋ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರುವುದನ್ನು ವಿರೋಧಿಸಿಕೊಂಡೇ ಬರುತ್ತಿದೆ. ಉಕ್ರೇನ್‌ ನ್ಯಾಟೋ ಪಟ್ಟಿಗೆ ಸೇರಿದರೆ, ಅಮೆರಿಕದ ಸೇನೆ ರಷ್ಯಾದ ಗಡಿಯಲ್ಲಿ ಬಂದು ನಿಯೋಜನೆಯಾಗಲಿದೆ ಎಂಬುದು ರಷ್ಯಾದ ಆತಂಕ.

ನ್ಯಾಟೋ ಒಕ್ಕೂಟ ಎಂದರೇನು?: 2ನೇ ಮಹಾಯುದ್ಧ ಮುಕ್ತಾಯದ ಬಳಿಕ ಕೆಲ ವರ್ಷಗಳ ನಂತರ ಅಮೆರಿಕ, ಕೆನಡಾ, ಬ್ರಿಟನ್‌ ಮತ್ತು ಫ್ರಾನ್ಸ್‌ ಸೇರಿದಂತೆ 12 ರಾಷ್ಟ್ರಗಳು ರಚಿಸಿಕೊಂಡಿರುವ ಸೇನಾ ಮೈತ್ರಿಯೇ ನಾಥ್‌ರ್‍ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌(ನ್ಯಾಟೋ). ಪ್ರಸ್ತುತ 30 ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಈ ದೇಶಗಳ ಮೇಲೆ ಯಾವುದೇ ಶತ್ರು ದೇಶ ದಾಳಿ ಮಾಡಿದಂಥ ಸಂದರ್ಭದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳು ಪರಸ್ಪರ ನೆರವಿಗೆ ಧಾವಿಸಲಿವೆ. 

ಇದನ್ನೂ ಓದಿ: Russia Ukraine Crisis: ಪುಟಿನ್‌ ಎಂಬ ಜಗಮೊಂಡ: ಅಂದುಕೊಂಡಿದ್ದನ್ನು ಸಾಧಿಸುವ ಹಟವಾದಿ!

ಯುರೋಪ್‌ನಲ್ಲಿ ರಷ್ಯಾದ ವಿಸ್ತರಣಾ ನೀತಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಈ ನ್ಯಾಟೋ ಪಡೆಯನ್ನು ಹುಟ್ಟು ಹಾಕಲಾಗಿದೆ. 1955ರಲ್ಲಿ ಸೋವಿಯತ್‌ ರಷ್ಯಾ ಈಸ್ಟರ್ನ್‌ ಯುರೋಪಿಯನ್‌ ಕಮ್ಯುನಿಸ್ಟ್‌ ಕಂಟ್ರೀಸ್‌(ಪೂರ್ವ ಯೂರೋಪ್‌ ಕಮ್ಯುನಿಸ್ಟ್‌ ರಾಷ್ಟ್ರಗಳು) ಸೇನಾ ಮೈತ್ರಿ ರಚಿಸುವ ಮೂಲಕ ನ್ಯಾಟೋ ಪಡೆಗಳಿಗೆ ತಿರುಗೇಟು ನೀಡುವ ಯತ್ನಕ್ಕೆ ಕೈಹಾಕಿತು. ಆದರೆ 1991ರಲ್ಲಿ ಸೋವಿಯತ್‌ ಒಕ್ಕೂಟ ಪತನವಾದ ಬಳಿಕ ವಾರ್ಸಾ ಒಕ್ಕೂಟದಲ್ಲಿದ್ದ ಹಲವು ದೇಶಗಳು ನ್ಯಾಟೋ ಸದಸ್ಯರಾದವು.

ರಷ್ಯಾದ ಪ್ರಮುಖ ಬೇಡಿಕೆಗಳು ಏನೇನು?: ಯಾವುದೇ ಕಾರಣಕ್ಕೂ ಉಕ್ರೇನ್‌ ಮತ್ತು ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ನ್ಯಾಟೋ ಮೈತ್ರಿಕೂಟ ಭರವಸೆ ನೀಡಬೇಕು.ಪೂರ್ವ ಮತ್ತು ಕೇಂದ್ರ ಯುರೋಪ್‌ ದೇಶಗಳನ್ನು ವ್ಯಾಪ್ತಿಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ಅಂದರೆ 1997ಕ್ಕೆ ಮುನ್ನ ಇದ್ದ ಸ್ಥಿತಿಗೆ ಸೇನಾ ನಿಯೋಜನೆಯನ್ನು ನ್ಯಾಟೋ ಕಡಿತ ಮಾಡಬೇಕು.ಬಂಡುಕೋರರ ವಶದಲ್ಲಿರುವ ಪ್ರದೇಶಗಳಿಗೆ ಉಕ್ರೇನ್‌ ಸರ್ಕಾರ ಸ್ವಾಯತ್ತೆ ನೀಡಬೇಕು. ರಷ್ಯಾದ ಗಡಿಯಲ್ಲಿ ನ್ಯಾಟೋ ದೇಶಗಳ ಯಾವುದೇ ಸೇನಾ ಕವಾಯತು ನಡೆಯಬಾರದು.

ಇದನ್ನೂ ಓದಿ:Russia-Ukraine Crisis: ಬ್ಲಾಸ್ಟ್‌ ಆಗ್ತಿದೆ, ನಮ್ಮನ್ನು ಕರ್ಕೊಂಡು ಹೋಗಿ: ಉಕ್ರೇನ್‌ನಲ್ಲಿ ಕನ್ನಡಿಗರ ಆಕ್ರಂದನ

ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಕಾರಣವೇನು?: ಇಡೀ ವಿಶ್ವದಲ್ಲಿ ಆತಂಕ ಹುಟ್ಟುಹಾಕಿರುವ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಬಹುದೊಡ್ಡ ಇತಿಹಾಸವಿದೆ. ಒಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್‌ ಅನ್ನು ತನ್ನ ಜೊತೆಗೆ ಇಟ್ಟುಕೊಳ್ಳಬೇಕೆಂಬ ಆಶಯದ ಜೊತೆಗೆ ತನ್ನ ದೇಶದ ಗಡಿಯಲ್ಲಿ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳ ಪಡೆ ನಿಯೋಜನೆಗೊಳ್ಳಬಾರದು ಎಂಬ ದೊಡ್ಡ ಗುರಿ ರಷ್ಯಾದ್ದು. ಇದಕ್ಕೆಲ್ಲಾ ಸುಮಾರು 3 ದಶಕಗಳ ಇತಿಹಾಸವಿದೆ.

2 ದಶಕಗಳ ಹಿಂದಿನವರೆಗೂ ಉಕ್ರೇನ್‌ ದೇಶವು, ರಷ್ಯಾ ಪ್ರಮುಖ ಭಾಗವಾಗಿದ್ದ ಸೋವಿಯತ್‌ ಒಕ್ಕೂಟದ ಪ್ರಮುಖ ದೇಶವಾಗಿತ್ತು.

1991ರಲ್ಲಿ ಉಕ್ರೇನ್‌ ಸ್ವತಂತ್ರ ಪಡೆದುಕೊಂಡಿದ್ದು ಸೋವಿಯತ್‌ ಒಕ್ಕೂಟದ ಪತನಕ್ಕೆ ಪ್ರಮುಖವಾಗಿ ಕಾರಣವಾಗಿತ್ತು. ಇದು ರಷ್ಯಾ ಅಸಮಾಧಾನಕ್ಕೆ ಕಾರಣವಾಗಿತ್ತು.

ಸೋವಿಯತ್‌ ಒಕ್ಕೂಟ ಪತನದ ಬಳಿಕ 30 ದೇಶಗಳ ರಕ್ಷಣಾ ಒಕ್ಕೂಟವಾದ ನ್ಯಾಟೋ ಪೂರ್ವ ಯುರೋಪ್‌ನ ಹಲವು ಭಾಗಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿತು.

2004ರಲ್ಲಿ ನ್ಯಾಟೋ ಮೈತ್ರಿಕೂಟವು ತನ್ನ ವ್ಯಾಪ್ತಿಗೆ ಸೋವಿಯಲ್‌ ಬಾಲ್ಟಿಕ್‌ ದೇಶಗಳಾದ ಎಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾಗಳನ್ನು ಸೇರ್ಪಡೆ ಮಾಡಿಕೊಂಡಿತು.

2008ರಲ್ಲಿ ಉಕ್ರೇನ್‌ ಅನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿತು. ಇದು ರಷ್ಯಾದ ಆಕ್ರೋಶವನ್ನು ಮತ್ತಷ್ಟುಹೆಚ್ಚಿಸಿತು.

ಇತ್ತೀಚಿನ ವರ್ಷಗಳಲ್ಲಿ ಉಕ್ರೇನ್‌ ನ್ಯಾಟೋ ಮತ್ತು ಯುರೋಪಿಯನ್‌ ಒಕ್ಕೂಟ ಸೇರುವತ್ತ ಒಲವು ಹೊಂದಿರುವ ಹಲವು ಸೂಚನೆಗಳನ್ನು ನೀಡುತ್ತಲೇ ಬಂದಿದೆ.

ಆದರೆ, ಉಕ್ರೇನ್‌ ಸಾಂಸ್ಕೃತಿಕವಾಗಿ, ಭಾಷಿಕವಾಗಿ, ರಾಜಕೀಯವಾಗಿ ತನ್ನ ಜೊತೆಗೆ ಹೆಚ್ಚು ನಂಟು ಹೊಂದಿದೆ. ಹೀಗಾಗಿ ಅದು ನ್ಯಾಟೋ ಸೇರಕೂಡದು ಎಂಬುದು ರಷ್ಯಾದ ವಾದ.

ತನ್ನ ಸುತ್ತಮುತ್ತಲೂ ಅಮೆರಿಕ ಪಾಲುದಾರನಾಗಿರುವ ನ್ಯಾಟೋ ಸೇನಾ ಪಡೆಗಳು ಬೀಡು ಬಿಡುವುದನ್ನು ರಷ್ಯಾ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಿದ್ಧವಿರಲಿಲ್ಲ.

ಹೀಗಾಗಿಯೇ ಉಕ್ರೇನ್‌ ರಷ್ಯಾ ಪರವಾಗಿಯೇ ಇರಬೇಕೆಂದು ವಾದಿಸುವ ಉಕ್ರೇನ್‌ನ ಬಂಡುಕೋರರಿಗೆ ಕಳೆದ 7-8 ವರ್ಷಗಳಿಂದ ಹಣ, ಸೇನಾ ನೆರವು ನೀಡಿಕೊಂಡುಬಂದಿದೆ.

2014ರಲ್ಲಿ ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾ, ಹಲವು ಆಯಕಟ್ಟಿನ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಜೊತೆಗೆ ಪದೇ ಪದೇ ಸೈಬರ್‌ ದಾಳಿ ನಡೆಸುತ್ತಿದೆ.

ಪರಿಸ್ಥಿತಿ ಹೀಗೆಯೇ ಮುಂದುವರೆದ ಇನ್ನು ಕೆಲವೇ ವರ್ಷಗಳಲ್ಲಿ ಉಕ್ರೇನ್‌ ಕೈತಪ್ಪಲಿದೆ ಎಂಬ ಆತಂಕಕ್ಕೆ ಒಳಗಾಗಿರುವ ರಷ್ಯಾ, ನ್ಯಾಟೋ, ಅಮೆರಿಕವನ್ನು ಬೆದರಿಸಲು ದಾಳಿ ನಡೆಸಿದೆ.