Russia ತಂಟೆಗೆ ಬಂದರೆ ಅಣುಬಾಂಬ್ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ
Vladimir Putin threatens Western Countries: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಬೆಂಬಲ ಹಿಂಪಡೆಯದಿದ್ದರೆ ಅಣುಬಾಂಬ್ ಹಾಕಲು ರಷ್ಯಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜತೆಗೆ ರಷ್ಯಾ ಜನತೆಗೆ ಕಡ್ಡಾಯ ಸೇನಾ ಸೇವೆಯನ್ನೂ ಪುಟಿನ್ ಆದೇಶಿಸಿದ್ದಾರೆ.
ಕ್ರೆಮ್ಲಿನ್: ರಷ್ಯಾ ಸೈನ್ಯ ಉಕ್ರೇನ್ ವಿರುದ್ಧ ದಂಡೆದ್ದು ಆರು ತಿಂಗಳಿಗೂ ಅಧಿಕಾ ಕಾಲವಾಗಿದೆ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂದುಕೊಂಡಂತೆ ಉಕ್ರೇನ್ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ವಾಭಿಮಾನಿ ಉಕ್ರೇನಿಯನ್ನರು ಜೀವದ ಹಂಗುತೊರೆದು ರಷ್ಯಾ ಸೈನ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ಹಂತದಲ್ಲಿ ಉಕ್ರೇನ್ ರಾಜಧಾನಿ ಕೀವ್ ಅನ್ನೇ ವಶಪಡಿಸಿಕೊಳ್ಳುವಷ್ಟು ಮುನ್ನಡೆ ಪಡೆದಿದ್ದ ಪುಟಿನ್ ಪಡೆ ದಿನೇ ದಿನೇ ಬಲ ಕಳೆದುಕೊಳ್ಳುತ್ತಿದೆ. ರಷ್ಯಾ ಆಕ್ರಮಿಸಿಕೊಂಡಿದ್ದ ಹಲವು ಪ್ರದೇಶಗಳನ್ನು ಉಕ್ರೇನ್ ಸೈನ್ಯ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ. ರಷ್ಯಾದ ಸೇನಾ ಬಲ ಕೂಡ ವ್ಯಾಪಕವಾಗಿ ಕಡಿಮೆಯಾಗಿದ್ದು, ಸಾವಿರಾರು ಸೈನಿಕರು ಯುದ್ಧದಲ್ಲಿ ಬಲಿಯಾಗಿದ್ದಾರೆ. ಇದೀಗ ರಷ್ಯಾ ಅಧ್ಯಕ್ಷ ಪಾಶ್ಚಿಮಾತ್ಯ ದೇಶಗಳಿಗೆ ಕಡೆಯ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯಾರಾದರೂ ಯತ್ನಿಸಿದರೆ ಇರುವ ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸಲು ರಷ್ಯಾ ಸಿದ್ಧ ಎಂದು ಅವರು ಹೇಳಿದ್ದಾರೆ. ಪರೋಕ್ಷವಾಗಿ ಉಕ್ರೇನ್ ಬೆಂಬಲಕ್ಕೆ ನಿಂತಿರುವ ಪಾಶ್ಚಿಮಾತ್ಯ ದೇಶಗಳ ಮೇಲೆ ಅಣುಬಾಂಬ್ ಹಾಕುವ ಬೆದರಿಕೆಯನ್ನು ಪುಟಿನ್ ಹಾಕಿದ್ದಾರೆ.
ಬುಧವಾರ ಪುಟಿನ್ ವಿಡಿಯೋ ಬಿಡುಗಡೆ ಮಾಡಿದ್ದು, ಉಕ್ರೇನ್ ಪರ ಪಾಶ್ಚಿಮಾತ್ಯ ದೇಶಗಳು ಸಹಾಯಕ್ಕೆ ನಿಂತಿವೆ. ರಕ್ಷಣಾ ಸೌಲಭ್ಯದ ಜೊತೆಗೆ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತಿದೆ. ಈ ಎಲ್ಲಾ ದೇಶಗಳೂ ರಷ್ಯಾವನ್ನು ಸಂಪೂರ್ಣವಾಗಿ ಮುಗಿಸಲು ಯತ್ನಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳು ಎಲ್ಲೆ ಮೀರಿ ವರ್ತಿಸುತ್ತಿವೆ. ಇದು ಹೀಗೇ ಮುಂದುವರೆದರೆ ನಮ್ಮ ಬಳಿಯೂ ಅಸ್ತ್ರಗಳಿವೆ. ಅದನ್ನು ಪ್ರಯೋಗಿಸಲು ಎರಡು ಬಾರಿ ಯೋಚಿಸುವುದೂ ಇಲ್ಲ. ನಾನು ತಮಾಷೆ ಮಾಡುತ್ತಿಲ್ಲ. ಗಂಭೀರವಾಗಿ ಹೇಳುತ್ತಿದ್ದೇನೆ. ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಎಲ್ಲಾ ಅಸ್ತ್ರಗಳನ್ನೂ ಬಳಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ಮೀಸಲು ನಾಗರಿಕರು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಮತ್ತೆ ಸೈನ್ಯ ಸೇರುವ ಕಡ್ಡಾಯ:
"ಸೇನಾ ಮೀಸಲು ಕೆಟೆಗರಿಯಲ್ಲಿರುವ ನಾಗರಿಕರು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ತರಬೇತಿ ಪಡೆದಿರುವ ರಷ್ಯನ್ನರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು," ಎಂದು ರಷ್ಯಾ ಅಧ್ಯಕ್ಷ ಪುಟಿನ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಷ್ಟವಿಲ್ಲದಿದ್ದರೂ ಸೇನೆ ಸೇವೆ ಸಲ್ಲಿಸಲೇಬೇಕಾದ ಪರಿಸ್ಥಿತಿ ರಷ್ಯಾದಲ್ಲಿ ನಿರ್ಮಾಣವಾಗಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಅಂದಾಜಿಸದಷ್ಟು ಸಂಖ್ಯೆಯಲ್ಲಿ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಇದೇ ಕಾರಣಕ್ಕೆ ನಾಗರಿಕರಿಗೆ ಸೇನಾ ಸೇವೆ ಕಡ್ಡಾಯಗೊಳಿಸಲಾಗಿದೆ.
"ನಮ್ಮ ದೇಶದ ಗಡಿ ವಿಚಾರದಲ್ಲಿ ಯಾರಾದರೂ ತಂಟೆಗೆ ಬಂದರೆ ನಮ್ಮ ಬಳಿ ಹಲವಾರು ಅಸ್ತ್ರಗಳಿವೆ. ನಮ್ಮ ಬಳಿಯಿರುವ ಎಲ್ಲಾ ಅಸ್ತ್ರಗಳನ್ನೂ ನಮ್ಮ ದೇಶದ ಮತ್ತು ಜನರ ಭದ್ರತೆಗಾಗಿ ಬಳಸಿಕೊಳ್ಳಲು ನಾವು ಸಿದ್ಧ. ಇದು ಕೇವಲ ಹೇಳಿಕೆಯಲ್ಲ, ಮಾಡಿ ತೋರಿಸಲು ಶತಸಿದ್ಧ," ಎಂದು ಪುಟಿನ್ ಹೇಳಿದ್ದಾರೆ. ಈ ಹಿಂದೆಯೂ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಈ ಬಾರಿ ಹೆಚ್ಚು ಗಂಭೀರವಾಗಿ ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ. ರಷ್ಯಾ ಬಳಿ ಸಾಕಷ್ಟು ಅಣು ಅಸ್ತ್ರವಿದೆ. ಪುಟಿನ್ ರಷ್ಯಾದ ಸರ್ವಾಧಿಕಾರಿಯಾಗಿದ್ದಾರೆ. ನೆಪ ಮಾತ್ರಕ್ಕೆ ಸಂವಿಧಾನವಿದೆ ಎಂಬ ಅರಿವು ಎಲ್ಲಾ ದೇಶಗಳಿಗೂ ಗೊತ್ತಿರುವಂತದ್ದೇ. ಕ್ರೆಮ್ಲಿನ್‌ನಲ್ಲೇ ಕುಳಿತು ಪಾಶ್ಚಿಮಾತ್ಯ ದೇಶಗಳ ಮೇಲ ದಾಳಿ ಮಾಡಬಲ್ಲ ಶಕ್ತಿ ರಷ್ಯಾಕ್ಕಿದೆ. ಇದೇ ಕಾರಣಕ್ಕೆ ಉಕ್ರೇನ್ ಬೆಂಬಲಿಸುತ್ತಿರುವ ದೇಶಗಳು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ Vladimir Putin ಹತ್ಯೆಗೆ ಮತ್ತೆ ಯತ್ನ, ಕಾರು ಬಳಿ ಸ್ಫೋಟ: ವರದಿ
ಇಳಿಮುಖವಾದ ಜನಸಂಖ್ಯೆ ಏರಿಕೆಗೆ ಪುಟಿನ್ ವಿಚಿತ್ರ ಆಫರ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಳ ಮಾಡಲು ಮಹಿಳೆಯರಿಗೆ ರಿವಾರ್ಡ್ ಘೋಷಿಸಿದ್ದಾರೆ. ರಷ್ಯಾ ಜನಸಂಖ್ಯೆ ಸಮತೋಲನಕ್ಕಾಗಿ ಮಹಿಳೆಯರು 10 ಮಕ್ಕಳನ್ನು ಹೆತ್ತರೆ 13 ಲಕ್ಷ ಹಣ ನೀಡುವುದಾಗಿ ಪುಟಿನ್ ಘೋಷಿಸಿದ್ದಾರೆ. ಕೊರೋನಾವೈರಸ್ ಮತ್ತು ಉಕ್ರೇನ್ ವಿರುದ್ಧದ ಯುದ್ಧದಿಂದ ರಷ್ಯಾದ ಜನಸಂಖ್ಯೆ ಕಡಿಮೆಯಾಗಿದ್ದು, ಯುವ ಸಮೂಹ ಮುಂಬರುವ ವರ್ಷಗಳಲ್ಲಿ ಕಡಿಮೆಯಾಗಲಿದೆ. ಇದೇ ಕಾರಣಕ್ಕೆ ಮಕ್ಕಳನ್ನು ಹೆತ್ತು ರಿವಾರ್ಡ್ ಗಳಿಸುವಂತೆ ಪುಟಿನ್ ಸೂಚಿಸಿದ್ದಾರೆ. ಇದು ಪುಟಿನ್‌ರ ಹತಾಶ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ರಷ್ಯಾ ರಾಜಕೀಯ ಮತ್ತು ಭದ್ರತಾ ತಜ್ಞೆ ಡಾ ಜೆನ್ನಿ ಮಾಥರ್ಸ್ ಅವರು ಟೈಮ್ಸ್ ರೇಡಿಯೋ ಜೊತೆ ಮಾತನಾಡಿದ್ದು, ರಷ್ಯಾದ ಹೊಸ ಘೋಷಣೆ 'ಮದರ್ ಹೀರೊಯಿನ್' ಇಳಿಕೆ ಕಂಡಿರುವ ಜನಸಂಖ್ಯೆಯನ್ನು ಮೇಲೆತ್ತಲು ಮಾಡುತ್ತಿರುವ ಯತ್ನ ಎಂದು ವಿಶ್ಲೇಷಿಸಿದ್ಧಾರೆ.
ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧಕ್ಕೆ Narendra Modi ವಿರೋಧಿಸಿದ್ದು ಸರಿ: ವಿಶ್ವದ ನಾಯಕರಿಂದ ಶ್ಲಾಘನೆ
ಪುಟಿನ್ ಈ ನಿರ್ಧಾರ ಮಾಡಲು ಮುಖ್ಯ ಕಾರಣವೆಂದರೆ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಸಾವು ಮತ್ತು ಈ ಮಾರ್ಚ್ ತಿಂಗಳಿಂದ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು. ಅದರ ಜೊತೆಗೆ ಉಕ್ರೇನ್ ಯುದ್ಧದಲ್ಲಿ ಸುಮಾರು 50,000 ಕ್ಕೂ ಅಧಿಕ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಈ ಕಾರಣಗಳಿಂದ ಪುಟಿನ್ ಮಕ್ಕಳನ್ನು ಹೆರಲು ಮಹಿಳೆಯರಿಗೆ ರಿವಾರ್ಡ್ ಘೋಷಿಸಿದ್ದಾರೆ.
ಡಾ. ಮಾಥರ್ಸ್ ಹೇಳಿರುವ ಪ್ರಕಾರ ಪುಟಿನ್ ಈ ಹಿಂದಿನಿಂದಲೂ ದೊಡ್ಡ ಕುಟುಂಬವನ್ನು ಹೊಂದಿದವರು ಹೆಚ್ಚು ದೇಶಭಕ್ತಿ ಹೊಂದಿರುತ್ತಾರೆ ಎಂದು ಹೇಳುತ್ತಿದ್ದರು.
ಟೈಮ್ಸ್ ರೇಡಿಯೋದ ಬೋನ್ಸು ಅವರು ಸಂದರ್ಶನದ ವೇಳೆ, "ಹತ್ತನೇ ಮಗುವಿಗೆ ಒಂದು ವರ್ಷ ತುಂಬಿದ ದಿನ 13 ಲಕ್ಷ ಹಣವನ್ನು ಕೊಡಲಾಗುವುದು ಎಂದು ಘೋಷಿಸಲಾಗಿದೆ. ಅದೂ ಉಳಿದ ಒಂಭತ್ತು ಮಕ್ಕಳು ಬದುಕಿದ್ದರೆ ಮಾತ್ರ. ಇದು ಪುಟಿನ್ ಅವರು ಮಾಡುತ್ತಿರುವ ಶಥ ಪ್ರಯತ್ನದಂತೆ ಕಾಣುತ್ತಿದೆ," ಎಂದು ಡಾ ಮಾಥರ್ಸ್ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ತಂದೆಯಾಗ್ತಿದ್ದಾರೆ 69 ವರ್ಷದ ಪುಟಿನ್, ಗರ್ಲ್‌ಫ್ರೆಂಡ್ ಕಬೇವಾ ಪ್ರಗ್ನೆಂಟ್!
ಇದಕ್ಕೆ ಉತ್ತರಿಸಿದ ಮಾಥರ್ಸ್, "ಹೌದು ಇದು ಶಥ ಪ್ರಯತ್ನವೇ ಹೌದು. 1990ನೇ ಇಸವಿಯಿಂದಲೂ ರಷ್ಯಾದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಿಸಲು ಸರ್ಕಾರ ಆಗಿನಿಂದಲೂ ಪ್ರಯತ್ನಿಸುತ್ತಿದೆ. ಆದರೆ ಪ್ರಯತ್ನ ಸಫಲವಾಗಿಲ್ಲ. ಇದೇ ಕಾರಣಕ್ಕಾಗಿ ಈಗ ರಿವಾರ್ಡ್ ಘೋಷಣೆ ಮಾಡಲಾಗಿದೆ," ಎಂದಿದ್ದಾರೆ.
ಮುಂದುವರೆದ ಅವರು, "ಉಕ್ರೇನ್ ವಿರುದ್ಧದ ಯುದ್ಧ ಮತ್ತು ಕೊರೋನಾವೈರಸ್ ಸಾಂಕ್ರಾಮಿಕ ರೋಗ ಜನಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಮಾಡಿದೆ. ಈ ಘೋಷಣೆ ಮಹಿಳೆಯರನ್ನು ಹೆಚ್ಚು ಮಕ್ಕಳನ್ನು ಹೆರಲು ಉತ್ತೇಜನ ನೀಡಲು ಮತ್ತು ಸ್ಪೂರ್ತಿ ನೀಡಲು ಮಾಡಿರುವ ಘೋಷಣೆ," ಎಂದರು.