ಉಕ್ರೇನ್ - ರಷ್ಯಾ ಯುದ್ಧಕ್ಕೆ Narendra Modi ವಿರೋಧಿಸಿದ್ದು ಸರಿ: ವಿಶ್ವದ ನಾಯಕರಿಂದ ಶ್ಲಾಘನೆ
ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದು, ಉಕ್ರೇನ್ ವಿರುದ್ದದ ಯುದ್ಧ ನಿಲ್ಲಿಸುವಂತೆ ಹೇಳಿದ್ದರು. ಈ ಹೇಳಿಕೆಗೆ ವಿಶ್ವದ ಹಲವು ದೇಶಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ (United Nations General Assembly) ಪ್ರಧಾನಿ ಮೋದಿಗೆ ವಿಶ್ವದ ನಾಯಕರಿಂದ (World Leaders) ಶ್ಲಾಘನೆ ವ್ಯಕ್ತವಾಗುತ್ತಿದೆ. ಉಕ್ರೇನ್ ಯುದ್ಧದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ನೀಡಿದ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮೋದಿ ಹೇಳಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಉಕ್ರೇನ್ ಯುದ್ಧದ ಕುರಿತು ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಂದೇಶವನ್ನು ಅಮೆರಿಕ ಸ್ವಾಗತಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಜೇಕ್ ಸುಲ್ಲಿವಾನ್ ಮಂಗಳವಾರ ಹೇಳಿದ್ದಾರೆ.
ಮಂಗಳವಾರ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಪ್ರಧಾನಿ ನರೇಂದ್ರ ಮೋದಿ ಅವರು ಇದು ಯುದ್ಧಕ್ಕೆ ಸಮಯವಲ್ಲ ಎಂದು ಹೇಳಿದ್ದು ಸರಿಯಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಹೇಳಿದ್ದಾರೆ. "ನರೇಂದ್ರ ಮೋದಿ, ಭಾರತದ ಪ್ರಧಾನಿ ಅವರು ಹೇಳಿದ್ದು ಸರಿ, ಇದು ಯುದ್ಧಕ್ಕೆ ಸಮಯವಲ್ಲ, ಇದು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಅಥವಾ ಪೂರ್ವ ರಾಷ್ಟ್ರಗಳ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧಿಸಲು ಅಲ್ಲ. ನಮ್ಮ ಸಾರ್ವಭೌಮ ಸಮಾನ ಮನಸ್ಕ ರಾಜ್ಯಗಳು ನಾವು ಎದುರಿಸುತ್ತಿರುವ ಸವಾಲುಗಳನ್ನು ಒಟ್ಟಾಗಿ ನಿಭಾಯಿಸುವ ಸಮಯ," ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದರು.
ಇದನ್ನು ಓದಿ: PM Modi to visit SCO summit: ಸೆಪ್ಟೆಂಬರ್ 15, 16 ರಂದು ಉಜ್ಬೇಕಿಸ್ತಾನಕ್ಕೆ ಪ್ರಯಾಣ
ಉಕ್ರೇನ್ ಆಕ್ರಮಣವನ್ನು ಕೊನೆಗೊಳಿಸಲು ಮತ್ತು ಶಾಂತಿ ಹಾಗೂ ಸಂವಾದದ ಹಾದಿಗೆ ಮರಳಲು ಸೆಪ್ಟೆಂಬರ್ 16 ರಂದು ಶಾಂಘೈ ಸಹಕಾರ ಸಂಘಟನೆ (Shanghai Cooperation Organization) (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದ ಸಂದೇಶವನ್ನು ಉದ್ದೇಶಿಸಿ ಫ್ರಾನ್ಸ್ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್ - ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಆಹಾರ ಮತ್ತು ಇಂಧನ ಭದ್ರತೆಯ ಸಮಸ್ಯೆಗಳನ್ನು ರಷ್ಯಾದ ಅಧ್ಯಕ್ಷರು ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಯುದ್ಧವನ್ನು ಶೀಘ್ರವಾಗಿ ನಿಲ್ಲಿಸುವಂತೆ ಕರೆ ನೀಡಿದ್ದರು.
ಪ್ರಧಾನಿ ಮೋದಿ ಹೇಳಿದ್ದೇನು..?
"ಇಂದಿನ ಯುಗವು ಯುದ್ಧಕ್ಕೆ ಸೂಕ್ತವಲ್ಲ ಮತ್ತು ನಾನು ಅದರ ಬಗ್ಗೆ ನಿಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಇಂದು ನಾವು ಶಾಂತಿಯ ಹಾದಿಯಲ್ಲಿ ಹೇಗೆ ಪ್ರಗತಿ ಸಾಧಿಸಬಹುದು ಎಂಬುದರ ಕುರಿತು ಮಾತನಾಡಲು ನಮಗೆ ಅವಕಾಶ ಸಿಗುತ್ತದೆ. ಭಾರತ ಮತ್ತು ರಷ್ಯಾ ಹಲವಾರು ದಶಕಗಳಿಂದ ಪರಸ್ಪರ ಜೊತೆಯಾಗಿವೆ" ಎಂದು ಪ್ರಧಾನಿ ಮೋದಿ ಹೇಳಿದರು. ಹಾಗೂ, "ನಾವು ಭಾರತ-ರಷ್ಯಾ ದ್ವಿಪಕ್ಷೀಯ ಸಂಬಂಧಗಳು ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡಿದ್ದೇವೆ. ಆಹಾರ, ಇಂಧನ ಭದ್ರತೆ ಮತ್ತು ರಸಗೊಬ್ಬರಗಳ ಸಮಸ್ಯೆಗಳನ್ನು ಪರಿಹರಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು. ಉಕ್ರೇನ್‌ನಿಂದ ನಮ್ಮ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಾನು ರಷ್ಯಾ ಮತ್ತು ಉಕ್ರೇನ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ’’ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಶಾಂಘೈ ಸಹಕಾರ ಶೃಂಗಕ್ಕಾಗಿ ಉಜ್ಬೇಕಿಸ್ತಾನ ತೆರಳಿದ ಮೋದಿ, ಕ್ಸಿ ಜತೆ ಮಾತುಕತೆ ಇಲ್ಲ
ಅಮೆರಿಕದಿಂದಲೂ ಮೋದಿ ಹೇಳಿಕೆಗೆ ಸ್ವಾಗತ..!
ಈ ಮಧ್ಯೆ, ಉಕ್ರೇನ್ ಯುದ್ಧದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಂದೇಶವನ್ನು ಅಮೆರಿಕ ಸ್ವಾಗತಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) (ಎನ್ಎಸ್ಎ) ಜೇಕ್ ಸುಲ್ಲಿವಾನ್ ಮಂಗಳವಾರ ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಲ್ಲಿವಾನ್, ಮೋದಿ ಅವರು ಹೇಳಿದ್ದು ಸರಿ ಮತ್ತು ನ್ಯಾಯಯುತವಾಗಿ (ಮತ್ತು) ಅವರು ನಂಬುವ ಪರವಾಗಿ ತತ್ವದ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ. ಮಾಸ್ಕೋದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿರುವ ಭಾರತೀಯ ನಾಯಕತ್ವದ ಹೇಳಿಕೆಯು ರಷ್ಯಾಕ್ಕೆ ಯುದ್ಧವನ್ನು ಕೊನೆಗೊಳಿಸುವ ಸಮಯ ಎಂದು ಹೇಳಿರುವುದು ಶ್ಲಾಘನೀಯ ಎಂದೂ ಜೇಕ್ ಸುಲ್ಲಿವಾನ್ ಹೇಳಿದರು.