* ಸಿಬ್ಬಂದಿ ಸೇರಿ 28 ಮಂದಿ ಪ್ರಯಾಣಿಸುತ್ತಿದ್ದ ರಷ್ಯಾದ ವಿಮಾನ ನಾಪತ್ತೆ* ರಷ್ಯಾದ ಪೂರ್ವಭಾಗದಿಂದ ನಾಪತ್ತೆಯಾದ ವಿಮಾನ* ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿತ

ಮಾಸ್ಕೋ(ಜು.06): ಸಿಬ್ಬಂದಿ ಸೇರಿ 28 ಮಂದಿ ಪ್ರಯಾಣಿಸುತ್ತಿದ್ದ ರಷ್ಯಾದ ಎಎನ್-26 ವಿಮಾನ ನಾಪತ್ತೆಯಾಗಿದೆ. ರಷ್ಯಾದ ಪೂರ್ವಭಾಗದಿಂದ ಮಂಗಳವಾರ ಈ ವಿಮಾನ ಕಣ್ಮರೆಯಾಗಿರುವುದಾಗಿ ಇಲ್ಲಿನ ತುರ್ತು ಸಚಿವಾಲಯ ಮಾಹಿತಿ ನೀಡಿದೆ. 

AN 26 ವಿಮಾನವು ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿತಗೊಂಡಿದೆ. ಪೆಟ್ರೋಪವ್ಲೊವಸ್ಕ್‌ನಿಂದ ಕಾಮ್ಚಾಟ್ಸಿಕಿಯಲ್ಲಿರುವ ಪಲಾನಾದೆಡೆ ಪ್ರಯಾಣಿಸುತ್ತಿದ್ದ ವೇಳೆ ಗ್ರಾಮವೊಂದರ ಸಮೀಪ ಈ ವಿಮಾನ ವಾಯು ಸಂಚಾರ ನಿಯಂತ್ರಣ ವಿಭಾಗದ ಜತೆಗಿನ ಸಂಪರ್ಕ ಕಳೆದುಕೊಂಡಿದೆ ಎಂದು ಸಚಿವಾಲಯ ವಿವರಿಸಿದೆ.

ಸಂಪರ್ಕ ಕಡಿತಗೊಂಡ ಸ್ಥಳಕ್ಕೆ ರಕ್ಷಣಾ ಮತ್ತು ಶೋಧಕಾರ್ಯಾಚರಣೆ ತಂಡ ರವಾನೆಯಾಗಿದೆ. ವಿಮಾನದಲ್ಲಿ ಆರು ಮಂದಿ ವಿಮಾನ ಸಿಬ್ಬಂದಿ ಹಾಗೂ 22 ಮಂದಿ ಪ್ರಯಾಣಿಕರಿದ್ದರು ಎಂದು ವರದಿಗಳು ತಿಳಿಸಿವೆ. ಇನ್ನು ವಿಮಾನ ನಾಪತ್ತೆಯಾದ ಸಂದರ್ಭದಲ್ಲಿ, ಮೋಡ ಮುಸುಕಿದ ವಾತಾವರಣ ಇತ್ತೆಂದು ಹವಾಮಾನ ಇಲಾಖೆ ತಿಳಿಸಿದೆ. 

ಈ ಹಿಂದೆ ರಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಿದ್ದವು. ಆನಂತರ ಈಚಿನ ಕೆಲವು ವರ್ಷಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 2019ರಲ್ಲಿ ವಿಮಾನದ ಅಪಘಾತ ಸಂಭವಿಸಿತ್ತು. ಅದರಲ್ಲಿ 41 ಮಂದಿ ಸಾವನ್ನಪ್ಪಿದ್ದರು.