*ಮೊದಲ ಬಾರಿ ಮಸೀದಿ ಮೇಲೆ ದಾಳಿ: 60 ಮಂದಿಗೆ ಗಾಯ*ಮರಿಯುಪೋಲ್‌ನಲ್ಲಿ ಶವ ಸಂಸ್ಕಾರಕ್ಕೂ ಬಿಡದೆ ರಷ್ಯಾದಿಂದ ಬಾಂಬ್‌, ಕ್ಷಿಪಣಿ ಮಳೆ 

ಕೀವ್‌ (ಮಾ. 13): ಯುದ್ಧದ 16ನೇ ದಿನವಾದ ಶನಿವಾರ ಉಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟುತೀವ್ರಗೊಳಿಸಿರುವ ರಷ್ಯಾ ಸೇನೆ, ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. ಜೊತೆಗೆ ರಾಜಧಾನಿ ಕೀವ್‌ ನಗರದಲ್ಲಿ ರಷ್ಯಾ ಹಾಗೂ ಉಕ್ರೇನಿ ಪಡೆಗಳ ನಡುವೆ ಸಂಘರ್ಷ ಮುಂದುವರಿದಿದ್ದು, ಕೀವ್‌ ನಗರದ ಮತ್ತಷ್ಟು ಸನಿಹಕ್ಕೆ ರಷ್ಯಾ ಧಾವಿಸಿದೆ. ಈ ನಡುವೆ, ದಾಳಿಯಿಂದ ಭಾರೀ ಪ್ರಮಾಣದಲ್ಲಿ ತತ್ತರಿಸಿರುವ ಬಂದರು ನಗರಿ ಮರಿಯುಪೋಲ್‌ ಮೇಲೆ ಶವಸಂಸ್ಕಾರಕ್ಕೆ ಕೂಡ ಅವಕಾಶ ಮಾಡಿಕೊಡದೆ ರಷ್ಯಾ ವಾಯುದಾಳಿ ಕೈಗೊಂಡಿದೆ.

ಇನ್ನೊಂದೆಡೆ ಇದೇ ಮೊದಲ ಬಾರಿಗೆ ಎಂಬಂತೆ ಮಸೀದಿಯೊಂದರ ಮೇಲೆ ರಷ್ಯಾ ದಾಳಿ ನಡೆಸಿದೆ. ಮರಿಯುಪೋಲ್‌ ನಗರದ ಮಸೀದಿ ಮೇಲೆ ರಷ್ಯಾ ಬಾಂಬ್‌ ಹಾಕಿದ್ದು, ಅದರಲ್ಲಿ ರಕ್ಷಣೆ ಪಡೆದಿದ್ದ 86 ಟರ್ಕಿ ನಾಗರಿಕರು ಗಾಯಗೊಂಡಿದ್ದಾರೆ. ಮೆಲಿಟುಪೋಲ್‌ ನಗರದ ಮೇಯರ್‌ ಅವರನ್ನು ರಷ್ಯಾ ಅಪಹರಿಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಆರೋಪಿಸಿದ್ದು, ‘ಇದು ಭಯೋತ್ಪಾದನೆ ಹಾಗೂ ಯುದ್ಧಾಪರಾಧಕ್ಕೆ ಸಮ’ ಎಂದು ದೂರಿದ್ದಾರೆ.

ಇದೇ ವೇಳೆ, ‘ಯುದ್ಧಕ್ಕೆ ಸಂಬಂಧಿಸಿದಂತೆ 16ನೇ ದಿನ ಕೆಲವು ಧನಾತ್ಮಕ ಬೆಳವಣಿಗೆಯಾಗಿವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದು, ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಇದಕ್ಕೆ ತಿರುಗೇಟು ನೀಡಿರುವ ಉಕ್ರೇನಿ ಅಧ್ಯಕ್ಷ ಜೆಲೆನ್‌ಸ್ಕಿ ‘ನಮ್ಮ ಭೂಮಿ ಮರುವಶ ಮಾಡಿಕೊಳ್ಳಲು ಎಷ್ಟುದಿನ ಬೇಕೋ ಗೊತ್ತಿಲ್ಲ. ಆದರೆ ಮರುವಶ ಮಾಡಿಕೊಂಡೇ ತೀರುತ್ತೇವೆ’ ಎಂದು ಗುಡುಗಿದ್ದಾರೆ.‌

ಇದನ್ನೂ ಓದಿ: Russia Ukraine War: ನೇಪಾಳಿಯರ ರಕ್ಷಿಸಿದ್ದಕ್ಕೆ ಪ್ರಧಾನಿ ಮೋದಿಗೆ ದೇವುಬಾ ಧನ್ಯವಾದ!

ಮರಿಯುಪೋಲ್‌ ಮೇಲೆ ಅವ್ಯಾಹತ ದಾಳಿ: ದಕ್ಷಿಣದ ಬಂದರು ನಗರಿ ಮರಿಯುಪೋಲ್‌ ಮೇಲೆ ರಷ್ಯಾ ಶನಿವಾರ ಅವ್ಯಾಹತ ದಾಳಿ ಮುಂದುವರಿಸಿದೆ. ದಾಳಿಯ ಕಾರಣ ಈ ನಗರಿಗೆ ಆಹಾರ, ಅಗತ್ಯ ವಸ್ತು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

12 ದಿನಗಳಲ್ಲಿ ನಗರದಲ್ಲಿ 1582 ಜನರು ಸಾವನ್ನಪ್ಪಿದ್ದಾರೆ. ದಾಳಿ ಯಾವ ಮಟ್ಟಿಗೆ ತೀವ್ರವಾಗಿದೆ ಎಂದರೆ, ಭಾರೀ ಸಂಖ್ಯೆಯ ಸಾವು ನೋವನ್ನು ಪರಿಗಣಿಸಿ ನಿರ್ಮಿಸಲಾಗಿರುವ ಸ್ಮಶಾನದಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂಳಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಮರಿಯುಪೋಲ್‌ ಮೇಯರ್‌ ಕಚೇರಿ ಬೇಸರಿಸಿದೆ.

ಮರಿಯುಪೋಲ್‌ ಮಸೀದಿಗೆ ಶೆಲ್‌ ದಾಳಿ: ಮರಿಯುಪೋಲ್‌ನ ಸುಲ್ತಾನ್‌ ಸುಲೇಮಾಣ್‌ ಮಸೀದಿಯ ಮೇಲೆ ರಷ್ಯಾ ವಾಯುದಾಳಿ ನಡೆಸಿದೆ. ಆಗ ಅದರಲ್ಲಿದ್ದ 86 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಮಸೀದಿಯಲ್ಲಿ 86 ಟರ್ಕಿ ನಾಗರಿಕರು ರಕ್ಷಣೆ ಪಡೆದಿದ್ದರು. ಇವರಲ್ಲಿ ವಯಸ್ಕರಷ್ಟೇ ಅಲ್ಲ, ಚಿಕ್ಕಮಕ್ಕಳು ಕೂಡ ಇದ್ದರು ಎಂದು ಮರಿಯುಪೋಲ್‌ ಮೇಯರ್‌ ಹೇಳಿಕೆ ಉಲ್ಲೇಖಿಸಿ ಟರ್ಕಿ ಸರ್ಕಾರ ಹೇಳಿದೆ.

ಕೀವ್‌ನಲ್ಲಿ ಸ್ಫೋಟ, ಹೊರಗೆ ಸಂಘರ್ಷ: ರಾಜಧಾನಿ ಕೀವ್‌ನಲ್ಲಿ ಶನಿವಾರ ಅನೇಕ ಸ್ಫೋಟಗಳು ಸಂಭವಿಸಿವೆ. ರಾಜಧಾನಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳಲು ತನ್ನ ದಾಳಿ ಮುಂದುವರಿಸಿರುವ ರಷ್ಯಾ ಸೇನೆ, ಕೀವ್‌ನ ವಾಯವ್ಯ ಭಾಗದಿಂದ ಮುನ್ನುಗ್ಗುತ್ತಿದೆ. 

ಇದನ್ನೂ ಓದಿ: Russia Ukraine War: ನಿರಾಶ್ರಿತ ಸ್ತ್ರೀಯರಿಗೆ ಲೈಂಗಿಕ ಕಿರುಕುಳ: ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕುವ ಭೀತಿ!

ರಷ್ಯಾ ಪಡೆಗಳು ಮತ್ತಷ್ಟುಮುಂದಡಿ ಇಡುವ ಮೂಲಕ ಶನಿವಾರ ಕೀವ್‌ನ 30 ಕಿ.ಮೀ. ದೂರದಲ್ಲಿ ಬೀಡುಬಿಟ್ಟಿದ್ದವು. ಮ್ಯಾಕ್ಸರ್‌ ಟೆಕ್ನಾಲಜೀಸ್‌ ಎಂಬ ಖಾಸಗಿ ಕಂಪನಿ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಕೀವ್‌ನಲ್ಲಿ ಭಾರೀ ಹೊಗೆ, ದಾಳಿ ನಡೆಯುತ್ತಿರುವ ದೃಶ್ಯಗಳು, ಮನೆಗಳಲ್ಲಿ ಬೆಂಕಿ ಧಗಧಗಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಪೂರ್ವ ಉಕ್ರೇನ್‌ನ ಲಟ್ಸ್ಕ್ ಹಾಗೂ ಇವಾನೋ ಫ್ರಾಂಕವಸ್ಕ್‌ ಮೇಲೆ ಕೂಡ ರಷ್ಯಾ ನಿಖರ ವಾಯುದಾಳಿ ನಡೆಸಿದ್ದು, ಇದರಿಂದ ಉಕ್ರೇನಿ ಸೇನಾನೆಲೆಗಳು ನಾಶವಾಗಿವೆ. ಒಟ್ಟಾರೆಯಾಗಿ ಈವರೆಗೆ ರಷ್ಯಾ ದಕ್ಷಿಣ ಉಕ್ರೇನ್‌ ಹಾಗೂ ಪೂರ್ವ ಉಕ್ರೇನ್‌ನಲ್ಲಿ ಸಾಕಷ್ಟುಮುನ್ನಡೆ ಸಾಧಿಸಿದೆ. ಆದರೆ ಉಕ್ರೇನ್‌ ಸೇನೆಯ ಪ್ರತಿರೋಧದ ಕಾರಣ ರಾಜಧಾನಿ ಕೀವ್‌ ಹಾಗೂ ಉತ್ತರ ಭಾಗದಲ್ಲಿ ಅಂದುಕೊಂಡಷ್ಟುಪ್ರಗತಿ ಸಾಧಿಸಿಲ್ಲ.

ನ್ಯಾಟೋ ಸೇರಿದರೆ ಹುಷಾರ್‌: ಫಿನ್‌ಲೆಂಡ್‌, ಸ್ವೀಡನ್‌ಗೆ ರಷ್ಯಾ: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಭೀಕರ ದಾಳಿಯಿಂದ ಭೀತಿಗೆ ಒಳಗಾಗಿರುವ ನೆರೆಯ ಫಿನ್‌ಲೆಂಡ್‌ ಹಾಗೂ ಸ್ವೀಡನ್‌ ದೇಶಗಳು ‘ನ್ಯಾಟೋ’ ಪಡೆ ಸೇರಲು ಬಯಕೆ ವ್ಯಕ್ತಪಡಿಸಿವೆ. ಒಂದು ವೇಳೆ, ಅಂತಹ ನಿರ್ಧಾರ ಕೈಗೊಂಡರೆ ರಾಜಕೀಯ ಹಾಗೂ ಮಿಲಿಟರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಸಿದೆ. ತನ್ಮೂಲಕ ಆ ಎರಡೂ ದೇಶಗಳ ಮೇಲೂ ಯುದ್ಧ ಸಾರುವುದಾಗಿ ಪರೋಕ್ಷವಾಗಿ ಗುಡುಗಿದೆ.

ರಷ್ಯಾ ಪಕ್ಕದ ದೇಶಗಳ ಗಡಿಗೆ 12 ಸಾವಿರ ಅಮೆರಿಕ ಸೈನಿಕರು: ಉಕ್ರೇನ್‌ ಪಕ್ಕದಲ್ಲಿರುವ ಬಾಲ್ಟಿಕ್‌ (ಲಾತ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ) ದೇಶಗಳು ಹಾಗೂ ರೊಮೇನಿಯಾ ಮೇಲೂ ರಷ್ಯಾ ದಾಳಿ ನಡೆಸಬಹುದು ಎಂದು ಅಮೆರಿಕ ಊಹಿಸಿದೆ. ಹೀಗಾಗಿ ಈ ದೇಶಗಳ ಗಡಿಗಳನ್ನು ರಷ್ಯಾ ದಾಳಿಯಿಂದ ರಕ್ಷಿಸಲು 12 ಸಾವಿರ ಯೋಧರನ್ನು ನಿಯೋಜಿಸಿದೆ. ಈ ನಾಲ್ಕೂ ದೇಶಗಳು ಸೇರಿದಂತೆ 30 ದೇಶಗಳು ನ್ಯಾಟೋ ಪಡೆಯಲ್ಲಿವೆ ಎಂಬುದು ಗಮನಾರ್ಹ.