Russia Ukraine War: ನೇಪಾಳಿಯರ ರಕ್ಷಿಸಿದ್ದಕ್ಕೆ ಪ್ರಧಾನಿ ಮೋದಿಗೆ ದೇವುಬಾ ಧನ್ಯವಾದ!

*ನೇಪಾಳಿಯರ ರಕ್ಷಿಸಿದ್ದಕ್ಕೆ ಮೋದಿಗೆ ದೇವುಬಾ ಧನ್ಯವಾದ
*ಉಕ್ರೇನ್‌ ಪಡೆ ಸೇರಿದ್ದ ಸೈನಿಕೇಶ್‌ಗೆ ಮತ್ತೆ ದೇಶಕ್ಕೆ ಮರಳುವಾಸೆ
*ರಷ್ಯಾ ತಾಯಂದಿರೇ, ನಿಮ್ಮ ಮಕ್ಕಳ ಯುದ್ಧಕ್ಕೆ ಕಳಿಸಬೇಡಿ: ಜೆಲೆನ್‌ಸ್ಕಿ
 

Nepal PM Deuba Thanks Narendra Modi for Assistance In Repatriating Nepali Nationals From Ukraine mnj

ನೇಪಾಳಿಯರ ರಕ್ಷಿಸಿದ್ದಕ್ಕೆ ಮೋದಿಗೆ ದೇವುಬಾ ಧನ್ಯವಾದ: ಯುದ್ಧಪೀಡಿತ ಉಕ್ರೇನಿನಲ್ಲಿ ಸಿಲುಕಿದ ನೇಪಾಳಿ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆ ತಂದಿದ್ದಕ್ಕೆ ನೇಪಾಳದ ಪ್ರಧಾನಿ ಶೇರ್‌ ಬಹಾದುರ್‌ ದೇವುಬಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಧನ್ಯವಾದ ಸಲ್ಲಿಸಿದ್ದಾರೆ. ‘ಭಾರತ ಸರ್ಕಾರದ ಸಹಾಯದಿಂದ ಉಕ್ರೇನಿನಲ್ಲಿ ಸಿಲುಕಿದ 4 ನೇಪಾಳಿ ನಾಗರಿಕರು ತವರಿಗೆ ಮರಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದಗಳು’ ಎಂದು ದೇವುಬಾ ಟ್ವೀಟ್‌ ಮಾಡಿದ್ದಾರೆ. ಕಳೆದ ವಾರ 2 ನೇಪಾಳಿ ನಾಗರಿಕರನ್ನು ಕರೆತರಲಾಗಿತ್ತು.

ಉಕ್ರೇನ್‌ ಪಡೆ ಸೇರಿದ್ದ ಸೈನಿಕೇಶ್‌ಗೆ ಮತ್ತೆ ದೇಶಕ್ಕೆ ಮರಳುವಾಸೆ: ಉಕ್ರೇನಿನ ಅರೆ ಸೇನಾ ಪಡೆಯನ್ನು ಸೇರಿದ ತಮಿಳ್ನಾಡು ಮೂಲದ 21 ವರ್ಷದ ಯುವಕ ಮತ್ತೆ ದೇಶಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕೊಯಮತ್ತೂರಿನ ಆರ್‌. ಸೈನಿಕೇಶ್‌ ರಷ್ಯಾ ಯುದ್ಧ ಘೋಷಿಸಿದ ನಂತರ ವಿದೇಶಿ ನಾಗರಿಕರಿಗೂ ಸೇನೆ ಸೇರಲು ನೀಡಿದ ಅವಕಾಶವನ್ನು ಬಳಸಿ ಉಕ್ರೇನಿನ ಜಾರ್ಜಿಯನ್‌ ನ್ಯಾಷನಲ್‌ ಸೇನೆ ಸೇರಿದ್ದರು. 

ಈ ಬಗ್ಗೆ ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿಗಳೇ ಈ ವಿಷಯವನ್ನು ಸೈನಿಕೇಶ್‌ ಪಾಲಕರಿಗೆ ತಿಳಿಸಿದ್ದರು. ಯೋಧನಾಗುವ ಕನಸು ಕಂಡ ಈತನು ಭಾರತೀಯ ಸೇನೆಗೆ ಸೇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉಕ್ರೇನಿನ ಪಡೆಯನ್ನು ಸೇರಿದ್ದನು. ಆದರೆ 3 ದಿನಗಳ ಹಿಂದೆ ಸೈನಿಕೇಶ್‌ ಜೊತೆಗೆ ಮಾತನಾಡಿದಾಗ ಆತ ಮತ್ತೆ ದೇಶಕ್ಕೆ ಮರಳಲು ಬಯಸಿದ್ದು, ಭಾರತದ ಅಧಿಕಾರಿಗಳು ಸಹಾಯದಿಂದ ಶೀಘ್ರವೇ ಮಗನು ಮನೆಗೆ ಮರಳಬಹುದು ಎಂದು ಸೈನಿಕೇಶ್‌ ತಂದೆ ರವಿಚಂದ್ರನ್‌ ತಿಳಿಸಿದ್ದಾರೆ.

 

 

ರಷ್ಯಾ ತಾಯಂದಿರೇ, ನಿಮ್ಮ ಮಕ್ಕಳ ಯುದ್ಧಕ್ಕೆ ಕಳಿಸಬೇಡಿ: ಜೆಲೆನ್‌ಸ್ಕಿ:  ‘ನಿಮ್ಮ ಮಕ್ಕಳನ್ನು ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಕಳಿಸಬೇಡಿ’ ಎಂದು ಉಕ್ರೇನಿ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರು ರಷ್ಯಾ ಅಮ್ಮದಿರಿಗೆ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶ ನೀಡಿರುವ ಅವರು, ‘ನಿಮ್ಮ ಮಗ ಎಲ್ಲಿದ್ದಾನೋ ನೋಡಿ. ಒಂದು ವೇಳೆ ಯುದ್ಧಕ್ಕೆ ಹೋಗುವ ಸಂದೇಹ ಬಂತು ಎಂದರೆ ಆತನನ್ನು ತಡೆಯಿರಿ’ ಎಂದು ಹೇಳಿದ್ದಾರೆ. ಈ ಮೂಲಕ ಉಕ್ರೇನಿ ಪ್ರತಿದಾಳಿಗೆ ರಷ್ಯನ್ನರು ಬಲಿಯಾಗುವುದನ್ನು ತಪ್ಪಿಸಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೆ ಉಕ್ರೇನ್‌ ಯಾವತ್ತೂ ಯುದ್ಧ ಬಯಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.́

ಇದನ್ನೂ ಓದಿ: Russia Ukraine War: ನಿರಾಶ್ರಿತ ಸ್ತ್ರೀಯರಿಗೆ ಲೈಂಗಿಕ ಕಿರುಕುಳ: ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕುವ ಭೀತಿ!

ರಷ್ಯಾ ಗಡಿಗೆ 12000 ಅಮೆರಿಕ ಯೋಧರು: ಉಕ್ರೇನ್‌ ಬಳಿಕ ನೆರೆಯ ದೇಶಗಳ ಮೇಲೂ ರಷ್ಯಾ ದಾಳಿಯ ಸಾಧ್ಯತೆಯನ್ನು ಊಹಿಸಿರುವ ಅಮೆರಿಕ, ಇದೀಗ ಬಾಲ್ಟಿಕ್‌ ದೇಶಗಳೆಂದು ಗುರುತಿಸುವ ಲಾತ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾ ಗಡಿ ಪ್ರದೇಶಗಳಲ್ಲಿ ಅಮೆರಿಕ ತನ್ನ 12,000 ಯೋಧರನ್ನು ನಿಯೋಜಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಅಧ್ಯಕ್ಷ ‘ನಾವು ಯಾವುದೇ ಕಾರಣಕ್ಕೂ ಮೂರನೇ ಮಹಾ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ನ್ಯಾಟೋ ಪ್ರದೇಶದಲ್ಲಿ ಪ್ರತಿ ಭಾಗವನ್ನು ಕಾಪಾಡುತ್ತೇವೆ’ ಎಂದರು.

‘ನ್ಯಾಟೋ ಪ್ರಸ್ತುತ 30 ರಾಷ್ಟ್ರಗಳನ್ನು ಒಳಗೊಂಡಿದೆ. ಯಾವುದೇ ಅನ್ಯ ದೇಶವು ನ್ಯಾಟೋ ಸದಸ್ಯ ರಾಷ್ಟ್ರದ ವಿರುದ್ಧ ಸಮರ ಸಾರಿದರೂ ಒಕ್ಕೂಟದ ಇತರ ದೇಶಗಳು ಯುದ್ಧಪೀಡಿತ ದೇಶಕ್ಕೆ ಸೇನಾ ನೆರವು ಕಲ್ಪಿಸುತ್ತವೆ. ರಷ್ಯಾದ ದಾಳಿಯನ್ನು ಉಕ್ರೇನ್‌ ಜನರು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಅಮೆರಿಕ ಒದಗಿಸುವ ರಕ್ಷಣೆ ಅವರ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಉಕ್ರೇನ್‌ಗೆ ಮಾತ್ರವಲ್ಲದೆ ಯುರೋಪ್‌ನಲ್ಲಿರುವ ಎಲ್ಲಾ ಮಿತ್ರ ರಾಷ್ಟ್ರಗಳಿಗೂ ನಾವು ಬೆಂಬಲ ನೀಡುತ್ತೇವೆ, ಜೊತೆಗೆ ನ್ಯಾಟೋದ ಗಡಿಯನ್ನು ಕೂಡ ರಕ್ಷಿಸುತ್ತೇವೆ’ ಎಂದು ಬೈಡೆನ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios