Russia Ukraine War: ನಿರಾಶ್ರಿತ ಸ್ತ್ರೀಯರಿಗೆ ಲೈಂಗಿಕ ಕಿರುಕುಳ: ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕುವ ಭೀತಿ!
*ಪ್ರಾಣ ಉಳಿಸಿಕೊಳ್ಳಲು ದೇಶ ಬಿಟ್ಟರೂ ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕುವ ಭೀತಿ
*ರಷ್ಯಾ ದಾಳಿಗೆ ಉಕ್ರೇನಿನ 49 ಮಕ್ಕಳು ಸೇರಿ 579 ನಾಗರಿಕರು ಬಲಿ
*ಮರಿಯುಪೋಲ್‌ನಲ್ಲಿ 12 ದಿನದಲ್ಲಿ 1582 ಮಂದಿ ಬಲಿ
ಸಿರೆಟ್ (ಮಾ. 13): ಯುದ್ಧಪೀಡಿತ ಉಕ್ರೇನಿನಿಂದ ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗುತ್ತಿರುವ ನಿರಾಶ್ರಿತ ಮಹಿಳೆಯರು ಹಾಗೂ ಮಕ್ಕಳು ಮಾನವ ಕಳ್ಳಸಾಗಾಣಿಕೆ ಜಾಲ, ಅತ್ಯಾಚಾರ ಮೊದಲಾದ ಶೋಷಣೆಗೆ ಗುರಿಯಾಗುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರಷ್ಯಾ ಯುದ್ಧ ಘೋಷಿಸಿದ ಬಳಿಕ ಲಕ್ಷಾಂತರ ಮಹಿಳೆಯರು ದೇಶ ತೊರೆದು ವಲಸೆ ಹೋಗಿದ್ದಾರೆ. ಇವರಿಗೆ ಸೂಕ್ತ ರಕ್ಷಣೆ ಒದಗಿಸುವುದೂ ಹೊಸ ಸವಾಲಾಗಿ ಪರಿಣಮಿಸಿದೆ.
ಉಕ್ರೇನಿನಿಂದ ವಲಸೆ ಹೋದ 19 ವರ್ಷದ ಯುವತಿಯ ಮೇಲೆ ಪೋಲೆಂಡಿನಲ್ಲಿ ಅತ್ಯಾಚಾರ ನಡೆಸಲಾಗಿದೆ. ಆಶ್ರಯ ನೀಡುವ ನೆಪದಲ್ಲಿ ತನ್ನೊಡನೆ ಕರೆದುಕೊಂಡು ಹೋದ 49 ವರ್ಷದ ವ್ಯಕ್ತಿಯು ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಉದ್ಯೋಗ ನೀಡುವುದಾಗಿ ಇನ್ನೋರ್ವನು 16 ವರ್ಷದ ಬಾಲಕಿಯನ್ನು ಕರೆದೊಯ್ದಿದ್ದು ಪೋಲಿಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪೋಲೆಂಡಿನ ಮೇಡಿಕಾ ನಿರಾಶ್ರಿತರ ಕ್ಯಾಂಪಿನಲ್ಲಿ ವ್ಯಕ್ತಿಯೊಬ್ಬನು ಕೇವಲ ಮಹಿಳೆ ಹಾಗೂ ಮಕ್ಕಳಿಗೆ ನೆರವು ನೀಡುವುದಾಗಿ ಹೇಳಿದ್ದನು. ವ್ಯಕ್ತಿಯು ಮಾನವ ಕಳ್ಳಸಾಗಾಣಿಕೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯೊಂದಿಗೆ ಪೋಲಿಸರು ಪ್ರಶ್ನಿಸಿದಾಗ ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Russia Ukraine War: ರಷ್ಯಾ ದಾಳಿ ತಡೆಗೆ ರಷ್ಯಾ ಏರ್ ಡಿಫೆನ್ಸ್ ಸಿಸ್ಟಮ್ ರವಾನೆಗೆ ಅಮೆರಿಕ ಚಿಂತನೆ!
ಮೆಡಿಕಾದಲ್ಲಿಯೇ ಮೂವರು ನಮಗೆ ನೆರವು ನೀಡುವ ಹೆಸರಿನಲ್ಲಿ ತಮ್ಮ ವ್ಯಾನಿನಲ್ಲಿ ಕುಳಿತುಕೊಳ್ಳುವಂತೆ ಕರೆದಿದ್ದರು. ಲೈಂಗಿಕ ಕಳ್ಳಸಾಗಾಣಿಕೆಗೆ ದುರುಪಯೋಗ ಪಡಿಸಿಕೊಳ್ಳುವ ಶಂಕೆಯಿಂದ ನಾವು ನಿರಾಕರಿಸಿದೆವು. ನಾವು ನಮ್ಮ ಮಕ್ಕಳು ಸಂಪೂರ್ಣ ನಿರಾಶ್ರಿತರಾಗಿದ್ದೇವೆ. ಪ್ರಾಣವನ್ನು ಉಳಿಸಿಕೊಳ್ಳಲು ದೇಶ ತೊರೆದರೂ ಹೊಸ ಪ್ರದೇಶದಲ್ಲಿ ಹಲವಾರು ರೀತಿಯಲ್ಲಿ ಶೋಷಣೆಗೆ ಬಲಿಯಾಗುತ್ತಿದ್ದೇವೆ ಎಂದು ಉಕ್ರೇನಿನಿಂದ ವಲಸೆ ಬಂದ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ರಷ್ಯಾ ದಾಳಿಗೆ ಉಕ್ರೇನಿನ 49 ಮಕ್ಕಳು ಸೇರಿ 579 ನಾಗರಿಕರು ಬಲಿ: ಉಕ್ರೇನಿನಲ್ಲಿ ಯುದ್ಧ ಆರಂಭವಾದಾಗಿನಿಂದ ಸುಮಾರು 579 ನಾಗರಿಕರು ರಷ್ಯಾ ಪಡೆಗಳ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಶನಿವಾರ ತಿಳಿಸಿದೆ.ಯುದ್ಧದಲ್ಲಿ 49 ಮಕ್ಕಳು ಸೇರಿದಂತೆ 579 ನಾಗರಿಕರು ಮೃತಪಟ್ಟಿದ್ದಾರೆ. 54 ಮಕ್ಕಳು ಸೇರಿದಂತೆ 1000ಕ್ಕೂ ಹೆಚ್ಚು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾದ ಬಾಂಬ್, ಶೆಲ್ ಹಾಗೂ ಕ್ಷಿಪಣಿ ದಾಳಿಯೇ ಬಹುತೇಕ ಜನರು ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮಾಹಿತಿ ಸ್ವೀಕೃತಿಯಲ್ಲಿನ ವಿಳಂಬ ಹಾಗೂ ಇನ್ನೂ ಅನೇಕ ವರದಿಗಳನ್ನು ದೃಢೀಕರಿಸುವ ಅಗತ್ಯವಿರುವುದರಿಂದ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.
ಇದನ್ನೂ ಓದಿ: Sniper Wali ದಿನಕ್ಕೆ 40 ಜನರ ಕೊಲ್ಲುವ ಜಗತ್ಪ್ರಸಿದ್ಧ ಸ್ನೈಪರ್ ಉಕ್ರೇನ್ ಸೇನೆ ಸೇರ್ಪಡೆ!
ಮರಿಯುಪೋಲ್‌ನಲ್ಲಿ 12 ದಿನದಲ್ಲಿ 1582 ಮಂದಿ ಬಲಿ: ದಕ್ಷಿಣ ಉಕ್ರೇನ್‌ನ ಪ್ರಮುಖ ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾ ಬಿಟ್ಟೂಬಿಡದೇ ದಾಳಿ ನಡೆಸುತ್ತಿರುವ ಕಾರಣ ಇಡೀ ನಗರ ಅವಶೇಷಗಳಿಂದ ತುಂಬಿಹೋಗಿದೆ. ಕಳೆದ 12 ದಿನಗಳಿಂದ ಇಲ್ಲಿ ರಷ್ಯಾ ವಾಯುದಾಳಿ ನಡೆಸುತ್ತಿದ್ದು 1582 ಜನರು ಸಾವನ್ನಪ್ಪಿದ್ದಾರೆ. ಶವಗಳನ್ನು ಹೂಳಲು ಜಾಗ ಸಿಗದ ಕಾರಣ ಪ್ರತ್ಯೇಕ ಸ್ಮಶಾನ ನಿರ್ಮಿಸಲಾಗಿದೆ. ಅಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂಳಲಾಗುತ್ತಿದೆ. ಆದರೆ ಶನಿವಾರ ಶವ ಸಂಸ್ಕಾರ ಕೂಡ ನಡೆಸಲು ಬಿಡದೇ ರಷ್ಯಾ ಅಲ್ಲಿ ದಾಳಿ ನಡೆಸುತ್ತಿದೆ.
4335 ಕೋಟಿಯ ರಷ್ಯಾ ಹಡಗು ಇಟಲಿ ಪೊಲೀಸರ ವಶಕ್ಕೆ: ಉಕ್ರೇನಿನ ಮೇಲೆ ರಷ್ಯಾ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಒತ್ತಡವನ್ನು ಹೇರಲು ಇಟಲಿಯ ಪೊಲೀಸರು ರಷ್ಯಾ ಉದ್ಯಮಿಗೆ ಸೇರಿದ 4,335 ಕೋಟಿ ರು ಮೌಲ್ಯದ ಐಶಾರಾಮಿ ಹಡಗನ್ನು ವಶಪಡಿಸಿಕೊಂಡಿದ್ದಾರೆ.
ರಷ್ಯಾದ ಉದ್ಯಮಿ ಆ್ಯಂಡ್ರೆ ಇಗೊರೆವಿಚ್ ಮೆಲ್ನಿಚೆಂಕೊ ಅವರಿಗೆ ಸೇರಿದ ಹಡಗನ್ನು ಇಟಲಿತ ಟ್ರಿಸ್ಟೆಬಂದರಿನಲ್ಲಿ ವಶ ಪಡಿಸಿಕೊಳ್ಳಲಾಗಿದೆ. ಕಳೆದ ವಾರ ಇಟಲಿಯ ಪೊಲೀಸರು ರಷ್ಯಾದವರಿಗೆ ಸೇರಿದ 117 ಕೋಟಿ ರು ಮೌಲ್ಯದ ಐಶಾರಾಮಿ ಹಡಗು ಹಾಗೂ ನಿವಾಸಗಳನ್ನು ಸಾರ್ದಾನಿಯಾ, ಲಿಗುರಿಯನ್ ಕೋಸ್ಟ್ ಹಾಗೂ ಲೇಕ್ ಕೊಮೊನಲ್ಲಿ ವಶಪಡಿಸಿಕೊಂಡಿದ್ದರು.