ರಷ್ಯಾ ಉಕ್ರೇನ್‌ ಯುದ್ಧದ ಕರಾಳ ಮುಖ ಬಿಚ್ಚಿಟ್ಟ ಪತ್ರಕರ್ತ ಗಡಿ ದಾಟಲು ಶ್ವೇತವರ್ಣೀಯರಿಗೆ ಆದ್ಯತೆ, ಗಡಿಯಲ್ಲಿ ಪ್ರತ್ಯೇಕ ಸಾಲು ಚಳಿ ಹಾಗೂ ಹಲವು ಸಂಕಷ್ಟಗಳ ಮಧ್ಯೆ 108 ಗಂಟೆ ಪ್ರಯಾಣಿಸಿದ ಯುವತಿ

ಉಕ್ರೇನ್‌ ಮೇಲೆ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಿನ್ನೆ ಉಕ್ರೇನ್‌ನ ಪ್ರಮುಖ ನಗರವಾದ ಖರ್ಕಿವ್‌ ಮೇಲೆ ರಷ್ಯಾ ಬಾಂಬ್‌ ದಾಳಿ ನಡೆಸಿತ್ತು. ಈ ಮಧ್ಯೆ ಜೀವ ಉಳಿಸಿಕೊಳ್ಳುವ ಸಲುವಾಗಿ ಉಕ್ರೇನ್‌ನಲ್ಲಿರುವ ವಿವಿಧ ದೇಶಗಳ ವಿದ್ಯಾರ್ಥಿಗಳು ಹಾಗೂ ಜನರು ಹಲವು ಸಂಕಷ್ಟಗಳ ನಡುವೆಯೂ ಅಲ್ಲಿಂದ ಪಾರಾಗಿ ಬಂದಿದ್ದು ಅಲ್ಲಿನ ಭಯಾನಕ ಅನುಭವವಬ್ಬು ಬಿಚ್ಚಿಡುತ್ತಿದ್ದಾರೆ. ಜನಾಂಗೀಯ ಬೇಧ, ಕೆಲವು ಗಾಯಗಳು ಹಾಗೂ ಮೈನಸ್‌ಗಿಂತಲೂ ಕಡಿಮೆ ತಾಪಮಾನದ ನಡುವೆ 108 ಗಂಟೆಗಳ ಕಾಲ ಪ್ರಯಾಣ ಬೆಳೆಸಿ ಉಕ್ರೇನ್‌ನಿಂದ ಜೀವ ಉಳಿಸಿಕೊಂಡು ಬಂದ ತನ್ನ ಸಹೋದರಿಯ ಕತೆಯನ್ನು ಪತ್ರಕರ್ತರೊಬ್ಬರು ಬರೆದುಕೊಂಡಿದ್ದು ಮನ ಕಲಕುವಂತಿದೆ. 

ಉಕ್ರೇನ್‌ನಿಂದ ತಪ್ಪಿಸಿಕೊಂಡು ಬರುವ ವೇಳೆ ತಮ್ಮ ಸಹೋದರಿ ಪಟ್ಟ ಪಾಡನ್ನು ಪತ್ರಕರ್ತ ಬಿಜನ್ ಹೊಸೈನಿ ಟ್ವಿಟ್ಟರ್‌ನಲ್ಲಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್‌ನಿಂದ ತಪ್ಪಿಸಿಕೊಂಡು ಬರುವ ವೇಳೆ ಅವರ ಸಹೋದರಿ ಜನಾಂಗೀಯ ಬೇಧ ಅನುಭವಿಸುವುದರ ಜೊತೆ ಗಾಯಗೊಂಡಿದ್ದು, ಮೈನಸ್‌ ಡಿಗ್ರಿಗಿಂತಲೂ ಕಡಿಮೆ ತಾಪಮಾನದ ವ್ಯತಿರಿಕ್ತ ಹವಾಮಾನದ ವಿರುದ್ಧವೂ ಹೋರಾಡಿ ಗೆದ್ದು ಬಂದಿದ್ದಾರೆ. ಆಕೆಯ ಕತೆ ಸಾವಿರಾರು ಜನರಲ್ಲಿ ಒಬ್ಬರದ್ದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಪತ್ರಕರ್ತ ಬಿಜನ್‌ ಹೊಸೈನಿ ಅವರ ಸಹೋದರಿಯನ್ನು ಮೂಲತಃ ದಕ್ಷಿಣ ಆಫ್ರಿಕಾದ ದೇಶವಾದ ಸಿಯೆರಾ ಲಿಯೋನ್‌ (Sierra Leone)ನಿಂದ ದತ್ತು ಪಡೆಯಲಾಗಿತ್ತಂತೆ. ಇದರಿಂದಾಗಿ ಅವರ ಮೈ ಬಣ್ಣ ಮೂಲತಃ ಕಪ್ಪಾಗಿದ್ದು, ಇದರಿಂದ ಅವರಿಗೆ ಉಕ್ರೇನ್‌ನಿಂದ ಪಾರಾಗಲು ತುಂಬಾ ಕಷ್ಟವಾಯಿತು ಎಂದು ಬಿಜನ್ ಹೊಸೈನಿ ಬರೆದಿದ್ದಾರೆ.

ಬಾಯಲ್ಲಿ ಸಿಗರೇಟ್‌ ಕೈಯಲ್ಲಿ ನೆಲಬಾಂಬ್‌... ಉಕ್ರೇನ್ ವ್ಯಕ್ತಿಯ ವಿಡಿಯೋ ವೈರಲ್‌

ಪೋಲ್ಯಾಂಡ್ ಗಡಿಯಲ್ಲಿ ಪ್ರತ್ಯೇಕವಾದ ಎರಡು ಸಾಲುಗಳಿದ್ದವು ಒಂದು ಬಿಳಿ ಬಣ್ಣದ ವ್ಯಕ್ತಿಗಳಿಗೆ ಹಾಗೂ ಇನ್ನೊಂದು ಉಳಿದವರಿಗೆ. ಇಲ್ಲೂ ಅವರು ಬೇಧವನ್ನು ಅನುಭವಿಸಿದರು. ಹೊಸೈನಿ ಅವರ ಸಹೋದರಿ ಯುದ್ಧ ಶುರುವಾಗುವ ವೇಳೆ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಇದ್ದರು. ಅವರು ತಮ್ಮ ಸ್ನೇಹಿತರ ಜೊತೆ ಕೀವ್‌ನಿಂದ ಎಲ್‌ವಿವ್‌ಗೆ(Lviv) ಹೊರಡಲು ಯತ್ನಿಸಿದರು. ಈ ಎಲ್‌ವಿವ್‌(Lviv) ಪಶ್ಚಿಮ ಉಕ್ರೇನ್‌ನಲ್ಲಿದ್ದು, ಪೋಲೆಂಡ್ ಗಡಿಗೆ ಹತ್ತಿರದಲ್ಲಿದೆ. ಒಂದು ಕಾರು ಚಾಲಕನೊಂದಿಗೆ ಪ್ರಯಾಣದ ಬಗ್ಗೆ ಇವರು ಮಾತನಾಡಿದಾಗ ಆತ ಇವರನ್ನು ಡ್ನಿಪ್ರೋ (Dnipro) ನಗರಕ್ಕೆ ಬಿಡುವುದಾಗಿ ಹೇಳುತ್ತಾನೆ. ಡ್ನಿಪ್ರೋ ರಷ್ಯಾದ ಗಡಿ ಸಮೀಪವಿರುವ ಪೂರ್ವ ಉಕ್ರೇನ್‌ನಲ್ಲಿರುವ ನಗರ. ಅಲ್ಲಿಂದ ಎಲ್‌ವಿವ್‌ಗೆ ಬಸ್ ಅಥವಾ ರೈಲು ಸಿಗುವುದು ಎಂದು ಚಾಲಕ ಇವರಿಗೆ ಹೇಳುತ್ತಾನೆ. ಹೀಗಾಗಿ ಅತ್ತ ಪ್ರಯಾಣಿಸಿದ ಈ ತಂಡಕ್ಕೆ 7 ಗಂಟೆಗಳ ಪ್ರಯಾಣಕ್ಕೆ ಚಾಲಕ ಬರೋಬರಿ 700 ಡಾಲರ್‌ (52,936 ರೂಪಾಯಿ)ಚಾರ್ಜ್‌ ಮಾಡಿದ ಎಂದು ಇವರು ಹೇಳಿದ್ದಾರೆ.

Russia-Ukraine War: ನವೀನ್ ಸಾವಿಗೂ ಮುನ್ನ ನಡೆದಿದ್ದೇನು..? ಸ್ನೇಹಿತನ ಮಾತು

ಆದರೆ ಇವರು ಡ್ನಿಪ್ರೊಗೆ ತಲುಪಿದಾಗ ಅಲ್ಲಿಂದ ಎಲ್‌ವಿವ್‌ ಬಸ್ಸುಗಳು ಮತ್ತು ರೈಲುಗಳು ಓಡುತ್ತಿಲ್ಲ ಎಂದು ತಿಳಿದು ಬಂದಿದ್ದು, ಆದ್ದರಿಂದ ಹೀಗಾಗಿ ತಮ್ಮನ್ನು ಎಲ್ವಿವ್‌ಗೆ ಬಿಡುವಂತೆ ಅವರು ಚಾಲಕನನ್ನು ಬೇಡಿಕೊಂಡಿದ್ದಾರೆ. ಇದಕ್ಕೆ ಆತ 1,500 ಡಾಲರ್‌ ನೀಡಿದರೆ ಬಿಡುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಸಣ್ಣ ಸೆಡಾನ್‌ (sedan) ಕಾರಿನಲ್ಲಿ 13 ತಿಂಗಳ ಒಂದು ಮಗುವೂ ಸೇರಿದಂತೆ ಒಟ್ಟು ಎಂಟು ಜನ ಎಲ್‌ವಿವ್‌ನತ್ತ 15 ಗಂಟೆಗಳ ಪ್ರಯಾಣ ಬೆಳೆಸಲು ಸಿದ್ಧರಾದರು. ನಂತರ ಎಲ್‌ವಿವ್‌ (Lviv) ತಲುಪಿದ ಅವರಿಗೆ ಕಾರಿನ ಚಾಲಕ ಇವರನ್ನು ಪೋಲೆಂಡ್ ಗಡಿಗೆ ಬಿಡುವುದಾಗಿ ಹೇಳಿದ್ದಾನೆ. ಆದರೆ 30 ಗಂಟೆಗಳ ರಸ್ತೆ ಪ್ರಯಾಣ ಮಾಡಬೇಕು ಎಂಬುದನ್ನು ತಿಳಿದ ಆತ ಮತ್ತರ್ಧ ಗಂಟೆಯಲ್ಲಿ ತನ್ನ ನಿರ್ಧಾರ ಬದಲಿಸಿದ್ದಾನೆ. ಪರಿಣಾಮ ಕಾರಿನಿಂದ ಇಳಿದ ಪತ್ರಕರ್ತನ ಸಹೋದರಿ ಹಾಗೂ ಆಕೆಯ ಸ್ನೇಹಿತರು ಕಾಲ್ನಡಿಗೆಯಲ್ಲೇ ಪೋಲೆಂಡ್ ಗಡಿ ತಲುಪಲು ನಿರ್ಧರಿಸಿದ್ದಾರೆ. 

ತರ ಗುಟ್ಟುವ ಚಳಿಯ ಮಧ್ಯೆಯೂ 10 ಗಂಟೆಗಳ ಕಾಲ ನಡೆದ ಅವರು ನಂತರ ತಾವು ಹೊಂದಿದ್ದ ವಸ್ತುಗಳನ್ನು ದಾರಿಯಲ್ಲೇ ಬಿಟ್ಟು ಮುಂದೆ ಪ್ರಯಾಣಿಸಿದ್ದಾರೆ. ಆದರೆ ಗಡಿ ತಲುಪುತ್ತಿದ್ದಂತೆ ಅಲ್ಲೂ ಅವರಿಗೆ ದಾರಿ ಸುಗಮವಿರಲಿಲ್ಲ. ಅಲ್ಲಿ ಬಿಳಿ ಬಣ್ಣದವರಿಗೆ ಒಂದು ಹಾಗೂ ಉಳಿದವರಿಗೆ ಒಂದು ಎಂದು ಪ್ರತ್ಯೇಕವಾಗಿ ಎರಡು ಸಾಲುಗಳನ್ನು ನಿರ್ಮಿಸಲಾಗಿತ್ತು. ಮೊದಲಿಗೆ ಉಕ್ರೇನಿಯನ್ನರಿಗೆ ಮಾತ್ರ ಹೊರ ಹೋಗಲು ಆದ್ಯತೆ ನೀಡಲಾಗಿತ್ತು. ಹೀಗಾಗಿ ಗಡಿಭಾಗದಲ್ಲಿ ಕೊರೆಯುವ ಚಳಿಯಲ್ಲೇ ಅನೇಕರು ನಿದ್ದೆಗೆ ಜಾರಿದರು. ಇಲ್ಲಿ ಜನರನ್ನು ಬೆಚ್ಚಗಾಗಿಸಲು ಬೆಂಕಿಯನ್ನು ಹಾಕಲಾಗಿತ್ತು.

Scroll to load tweet…

ದೀರ್ಘವಾದ ಕಾಲ್ನಡಿಗೆ ಸರಿಯಾಗಿ ನಿದ್ದೆ ಆಹಾರ ಇಲ್ಲದ ಪರಿಣಾಮ ಮಾರನೇ ದಿನ ಇವರ ಸಹೋದರಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ನಂತರ ಅಲ್ಲಿದ್ದ ಆಂಬುಲೆನ್ಸ್‌ವೊಂದು ಇವರನ್ನು ಅಲ್ಲಿಂದ ನಾಲ್ಕು ಕಿ.ಮೀ ದೂರದ ಆಸ್ಪತ್ರೆಗೆ ದಾಖಲಿಸಿತ್ತು. ಅಲ್ಲಿಂದ ಅವರು ಎಲ್ವಿವ್‌ಗೆ ಹಿಂತಿರುಗಿದರು ಮತ್ತು ಬಸ್ ಟಿಕೆಟ್ ಪಡೆದು ಎಲ್‌ವಿವ್‌ನಿಂದ 24 ಗಂಟೆ ಪ್ರಯಾಣಿಸಿ ಪೋಲೆಂಡ್‌ನ (Poland) ಪ್ರೇಜಿಮ್‌ ತಲುಪಲು ಮುಂದಾದರು. ಆದರೆ ಬಸ್‌ನಲ್ಲಿರುವ ಕಪ್ಪು ವರ್ಣಿಯರೆಲ್ಲರೂ ಕೆಳಗಿಳಿಯುವಂತೆ ಸೂಚಿಸಲಾಯಿತು. ಆದರೆ ಇವರ ಸಹೋದರಿ ಹಾಗೂ ಇವರು ಧೈರ್ಯ ಮಾಡಿ ಬಸ್‌ನಿಂದ ಕೆಳಗಿಳಿಯಲು ನಿರಾಕರಿಸಿದರು. 

ಐದು ಗಂಟೆಗಳ ಕಾಲ ಗಡಿಯಲ್ಲಿ ಕುಳಿತ ನಂತರ, ಅಂತಿಮವಾಗಿ ನಾಲ್ಕೂವರೆ ದಿನ ಅಥವಾ 108 ಗಂಟೆಗಳ ಪ್ರಯಾಣದ ಕೊನೆಯಲ್ಲಿ ಅವರಿಗೆ ಗಡಿ ದಾಟಲು ಅನುಮತಿ ನೀಡಲಾಯಿತು.