* ನಿಲ್ಲದ ರಷ್ಯಾ ಉಕ್ರೇನ್ ಸಮರ*  18ನೇ ದಿನದ ವೇಳೆಗೆ ಇಡೀ ಉಕ್ರೇನ್‌ನಾದ್ಯಂತ ದಾಳಿ ವಿಸ್ತರಣೆ* ಉಕ್ರೇನ್ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ದಾಳಿ 

ಮರಿಯುಪೋಲ್‌ (ಮೇ. 14) ಉಕ್ರೇನ್‌ನ (Ukraine) ಪೂರ್ವ, ಉತ್ತರ, ದಕ್ಷಿಣ ಭಾಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿರುವ ರಷ್ಯಾ (Russia) ಇದೀಗ ಪಶ್ಚಿಮ ದಿಕ್ಕಿಗೂ ಲಗ್ಗೆ ಇಟ್ಟಿದೆ. ಈ ಮೂಲಕ ಯುದ್ಧ ಆರಂಭವಾದ 18ನೇ ದಿನದ ವೇಳೆಗೆ ಇಡೀ ಉಕ್ರೇನ್‌ನಾದ್ಯಂತ ದಾಳಿ (Russia Ukraine War) ವಿಸ್ತರಿಸಿದಂತಾಗಿದೆ.

ಉಕ್ರೇನ್‌ನ ಪಶ್ಚಿಮ ಭಾಗದ ತುದಿಯಲ್ಲಿರುವ ಲಿವಿವ್‌ನ ಯಾರೊವಿವ್‌ ಮಿಲಿಟರಿ ನೆಲೆ ಮೇಲೆ ಭಾನುವಾರ ಬೆಳಗ್ಗೆ 30ಕ್ಕೂ ಹೆಚ್ಚು ಕ್ರೂಸ್‌ ಕ್ಷಿಪಣಿಗಳ ಮೂಲಕ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಉಕ್ರೇನ್‌ ಸೇನೆಯ ಭಾಗವಾಗಿದ್ದ 180ಕ್ಕೂ ಹೆಚ್ಚು ವಿದೇಶಿ ಮೂಲದ ಯೋಧರು ಸಾವನ್ನಪ್ಪಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಈ ಸೇನಾ ನೆಲೆ ಲಿವಿವ್‌ನಿಂದ 30 ಕಿ.ಮೀ. ದೂರದಲ್ಲಿದೆ. ನ್ಯಾಟೋ ರಾಷ್ಟ್ರವಾದ ಪೋಲೆಂಡ್‌ ಗಡಿಗೆ 35 ಕಿ.ಮೀ. ಸನಿಹದಲ್ಲಿದೆ. ಲಿವಿವ್‌ನಿಂದಲೇ ಸಾಕಷ್ಟುಭಾರತೀಯ ವಿದ್ಯಾರ್ಥಿಗಳು ಪೋಲೆಂಡ್‌ ತಲುಪಿದ್ದರು ಎಂಬುದು ಗಮನಾರ್ಹ.

Russia-Ukraine War: ಮರಿಯುಪೋಲ್‌ನಲ್ಲಿ ಶವ ಸಂಸ್ಕಾರಕ್ಕೂ ಬಿಡದೆ ರಷ್ಯಾದಿಂದ ಬಾಂಬ್‌, ಕ್ಷಿಪಣಿ ಮಳೆ

ಮತ್ತೊಂದೆಡೆ, ಸ್ಲೋವೇಕಿಯಾ ಹಾಗೂ ಹಂಗೇರಿ ಗಡಿಯಲ್ಲಿರುವ ಉಕ್ರೇನ್‌ನ ಇವಾನೋ ಫ್ರಾಂಕಿವ್‌ ವಿಮಾನ ನಿಲ್ದಾಣ ಮೇಲೂ ರಷ್ಯಾದ ದಾಳಿ ಮುಂದುವರಿದಿದೆ.

ನ್ಯಾಟೋ, ಅಮೆರಿಕಕ್ಕೆ ರಷ್ಯಾ ಸಡ್ಡು: ರಷ್ಯಾ ಭಾನುವಾರ ದಾಳಿ ನಡೆಸಿರುವ ಸೇನಾ ನೆಲೆಗೆ ಅಮೆರಿಕದ ನಂಟು ಇದೆ. ಉಕ್ರೇನ್‌ನ ಮಿಲಿಟರಿಗೆ ತರಬೇತಿ ನೀಡಲು 2015ರಿಂದಲೂ ಈ ಸೇನಾ ನೆಲೆಗೆ ಅಮೆರಿಕ ತನ್ನ ಸಿಬ್ಬಂದಿಯನ್ನು ಕಳುಹಿಸುತ್ತ ಬಂದಿದೆ. ಜತೆಗೆ ನ್ಯಾಟೋ ಪಡೆಗಳ ಅಂತಾರಾಷ್ಟ್ರೀಯ ಅಭ್ಯಾಸ ಚಟುವಟಿಕೆಗಳಿಗೂ ಈ ಕೇಂದ್ರ ವೇದಿಕೆಯಾಗಿದೆ. ಈ ನೆಲೆಯ ಮೇಲೆ ಈಗ ರಷ್ಯಾ ದಾಳಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಜತೆಗೆ ಪೋಲೆಂಡ್‌ ಗಡಿವರೆಗೂ ತನ್ನ ದಾಳಿಯನ್ನು ರಷ್ಯಾ ವಿಸ್ತರಿಸಿದೆ.

ಉಕ್ರೇನ್‌ಗೆ ರವಾನಿಸಲಾಗುವ ಮಿಲಿಟರಿ ಸಲಕರಣೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಈ ದಾಳಿಯಾಗಿರುವುದು ಗಮನಾರ್ಹ.

ಬೈಡನ್ ಮೂರನೇ ಮಹಾಯುದ್ಧದ ಎಚ್ಚರಿಕೆ: ಉಕ್ರೇನ್‌ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಷ್ಯಾ(Russai) ಮೇಲೆ ಕೊತ ಕೊತ ಕುದಿಯುತ್ತಿರುವ ಅಮೆರಿಕ (America)ನೇರಾನೇರ 3ನೇ ವಿಶ್ವ ಯುದ್ಧದ ಎಚ್ಚರಿಕೆ ನೀಡಿದೆ. ‘ನ್ಯಾಟೋ (NATO) ಸದಸ್ಯ ದೇಶಗಳ ಮೇಲೆ ದಾಳಿಯೇನಾದರೂ ಆದರೆ ಸುಮ್ಮನಿರುವುದಿಲ್ಲ. ಆ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸಿಕೊಳ್ಳುತ್ತೇವೆ. ಅದು ಮೂರನೇ ಮಹಾಯುದ್ಧಕ್ಕೆ (world war) ಕಾರಣವಾದರೂ ತೊಂದರೆ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಗುಡುಗುವ ಮೂಲಕ ರಷ್ಯಾಕ್ಕೆ ಎಚ್ಚರಿಕೆ ರವಾನಿಸಿದ್ದರು.

ಇದೇ ವೇಳೆ, ಉಕ್ರೇನ್‌ ಬೇಡಿಕೆಯಂತೆ ಆ ದೇಶವನ್ನು ನೋ ಫ್ಲೈ (ವಿಮಾನ ಹಾರಾಟ ನಿರ್ಬಂಧಿತ ವಲಯ) ಎಂದು ಘೋಷಿಸಲಾಗದು. ಹಾಗೆ ಮಾಡಿದರೆ ರಷ್ಯಾ ಜತೆ ಗುಂಡಿನ ಕಾಳಗಕ್ಕೆ ಇಳಿಯಬೇಕಾಗುತ್ತದೆ ಎಂದಿದ್ದರು.

ರಷ್ಯಾ ದಾಳಿ ಹಿನ್ನೆಲೆಯಲ್ಲಿ ಸ್ವೀಡನ್‌ ಹಾಗೂ ಫಿನ್‌ಲೆಂಡ್‌ಗಳು ನ್ಯಾಟೋ ಸೇರಲು ಇಚ್ಛೆ ವ್ಯಕ್ತಪಡಿಸಿವೆ ಹಾಗೂ ಅದಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಅಮೆರಿಕದ ಈ ಎಚ್ಚರಿಕೆ ಹೊರಬಿದ್ದಿದೆ. ಬಾಲ್ಟಿಕ್‌ ದೇಶಗಳು ಹಾಗೂ ರೊಮೇನಿಯಾ ಗಡಿಗೆ 12 ಸಾವಿರ ಯೋಧರನ್ನು ರವಾನೆ ಮಾಡಿದ ಬೆನ್ನಲ್ಲೇ ಅಮೆರಿಕ ಈ ಮಾತು ಆಡುತ್ತಿರುವುದರಿಂದ ರಷ್ಯಾ ಜತೆ ನೇರ ಸಂಘರ್ಷಕ್ಕೆ ಇಳಿಯಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.