ಉಕ್ರೇನ್‌ನಲ್ಲಿ ರಷ್ಯಾ ಸೇನೆ ಎಸಗಿರುವ ಭೀಕರ ಹತ್ಯಾಕಾಂಡದ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಿದ್ದು, ಜಾಗತಿಕ ಸಮುದಾಯವನ್ನು ತಲ್ಲಣಗೊಳಿಸಿದೆ. 

ಬುಚಾ (ಏ.05): ಉಕ್ರೇನ್‌ನಲ್ಲಿ (Ukraine) ರಷ್ಯಾ ಸೇನೆ (Russia Army) ಎಸಗಿರುವ ಭೀಕರ ಹತ್ಯಾಕಾಂಡದ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಿದ್ದು, ಜಾಗತಿಕ ಸಮುದಾಯವನ್ನು ತಲ್ಲಣಗೊಳಿಸಿದೆ. ರಾಜಧಾನಿ ಕೀವ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದೇ ಸ್ಥಳದಲ್ಲಿ ನೂರಾರು ಶವಗಳು ಪತ್ತೆಯಾಗಿವೆ. ಹೀಗೆ ಪತ್ತೆಯಾದ ಶವಗಳ ಕೈಗಳನ್ನು ಕಟ್ಟಿಹಾಕಲಾಗಿದ್ದು, ಅವರ ಬಾಯಿಯೊಳಗೆ ಗುಂಡಿಟ್ಟು ಹತ್ಯೆ ಮಾಡಿರುವ ಭೀಕರ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ರಾಜಧಾನಿ ಕೀವ್‌ ಅನ್ನು ರಷ್ಯಾದ ಹಿಡಿತದಿಂದ ಮುಕ್ತಗೊಳಿಸಿಕೊಂಡ ನಂತರ ಉಕ್ರೇನಿನಲ್ಲಿ ಸುಮಾರು 410 ನಾಗರಿಕರ ಮೃತ ದೇಹಗಳು ಪತ್ತೆಯಾಗಿದ್ದು, ರಷ್ಯಾ ಯೋಧರ ಕ್ರೌರ್ಯದ ಕಥೆಯನ್ನು ಸಾರುತ್ತಿವೆ ಎಂದು ಉಕ್ರೇನಿನ ಅಧಿಕಾರಿಗಳು ಹೇಳಿದ್ದಾರೆ. 

ಉಕ್ರೇನಿನ ಬುಚಾ ನಗರದಲ್ಲಿ ವಾಸವಾಗಿದ್ದ 9 ನಾಗರಿಕರನ್ನು ಕೊಂದು ಅವರ ಮನೆಯನ್ನೇ ರಷ್ಯಾದ ಯೋಧರು ತಮ್ಮ ಸೇನಾನೆಲೆಯಾಗಿ ಬಳಸಿಕೊಂಡಿದ್ದರು ಎನ್ನಲಾಗಿದೆ. ‘ರಷ್ಯಾದ ಯೋಧರು ಕೀವ್‌ನ ಮನೆಮನೆಗೆ ತೆರಳಿ ನೆಲಮಾಳಿಗೆ, ಬಂಕರ್‌ಗಳಲ್ಲಿ ಅಡಗಿರುವ ಜನರನ್ನು ಒಟ್ಟಾಗಿ ನಿಲ್ಲಿಸುತ್ತಿದ್ದರು. ಅವರ ಫೋನುಗಳನ್ನು ಕಸಿದುಕೊಂಡು, ಅವರು ರಷ್ಯಾ ವಿರುದ್ಧ ಯಾವುದೇ ಚಟುವಟಿಕೆ ನಡೆಸುತ್ತಿದ್ದಾರೆಯೇ ಎಂದು ಪರೀಕ್ಷಿಸುತ್ತಿದ್ದರು. ನಂತರ ಕೆಲವರನ್ನು ಬಂಧಿಸಿ ತಮ್ಮೊಂದಿಗೆ ಒಯ್ದರೆ, ಕೆಲವರನ್ನು ಅಲ್ಲಿಯೇ ಗುಂಡು ಹೊಡೆದು ಹತ್ಯೆ ಮಾಡುತ್ತಿದ್ದರು’ ಎಂದು ಸ್ಥಳೀಯನೊಬ್ಬ ಮಾಹಿತಿ ನೀಡಿದ್ದಾನೆ.

3 ದಿನಕ್ಕೆ ಮುಗಿಸಲು ಬಂದ್ರು, 36 ದಿನವಾದರೂ ಗಟ್ಟಿಯಾಗಿ ನಿಂತಿದ್ದೇವೆ, ರಷ್ಯಾಗೆ ಝೆಲೆನ್ಸ್ಕಿ ತಿರುಗೇಟು!

ಬಾಲಕಿಯರ ಮೇಲೆ ಕ್ರೌರ್ಯ: ಇಷ್ಟಕ್ಕೆ ನಿಲ್ಲದ ರಷ್ಯಾದ ಯೋಧರು ಉಕ್ರೇನಿನಲ್ಲಿ ಚಿಕ್ಕ ಬಾಲಕಿಯರ ಮೇಲೂ ಅತ್ಯಾಚಾರವೆಸಗಿದ್ದಾರೆ ಎಂದು ಉಕ್ರೇನಿನ ಸಂಸದೆ ಲೆಸಿಯಾ ವಾಸಿಲೆಂಕ್‌ ಸೋಮವಾರ ಟ್ವೀಟರ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 10 ವರ್ಷದ ಪುಟ್ಟಬಾಲಕಿಯರೂ ಸೇರಿದಂತೆ ಹಲವಾರು ಮಹಿಳೆಯರ ಮೇಲೆ ರಷ್ಯಾದ ಯೋಧರು ಅತ್ಯಾಚಾರ ನಡೆಸಿ, ಅವರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಮೃತ ಸಂತ್ರಸ್ತೆಯರ ದೇಹದ ದೇಹದ ಮೇಲೆ ಸ್ವಸ್ತಿಕದಂತಹ ಚಿಹ್ನೆಯನ್ನಿಟ್ಟು ಸುಟ್ಟಗುರುತುಗಳು ಕಂಡುಬಂದಿವೆ. ಈ ಚಿತ್ರಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದಕ್ಕೆ ವಿಶ್ವದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಜಾಗತಿಕ ನಾಯಕರು ಮತ್ತಷ್ಟುಮಾಸ್ಕೋದ ವಿರುದ್ಧ ಮತ್ತಷ್ಟುಕಠಿಣ ನಿರ್ಬಂಧಗಳಿಗೆ ಕರೆಕೊಟ್ಟಿದ್ದಾರೆ.

ತನಿಖೆಗೆ ಜೆಲೆನ್‌ಸ್ಕಿ ಆಗ್ರಹ: ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ರಷ್ಯಾ ಯೋಧರ ಕ್ರೌರ್ಯದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ‘ಜಗತ್ತು ಹಲವಾರು ಯುದ್ಧಾಪರಾಧಗಳನ್ನು ಕಂಡಿದೆ. ಆದರೆ ರಷ್ಯಾದ ಭೀಕರ ಯುದ್ಧಾಪರಾಧಗಳಿಗೆ ಕೊನೆ ಹಾಡುವ ಸಮಯ ಬಂದಿದೆ. ಈ ಯುದ್ಧಾಪರಾಧಗಳ ಬಗ್ಗೆ ತನಿಖೆ ನಡೆಸಲು ಅಂತಾರಾಷ್ಟ್ರೀಯ ಮಟ್ಟದ ನ್ಯಾಯಾಧೀಶರನ್ನು ಒಳಗೊಂಡ ವಿಶೇಷ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಜೆಲೆನ್‌ಸ್ಕಿ ಒತ್ತಾಯಿಸಿದ್ದಾರೆ. ನಾಗರಿಕರ ಹತ್ಯಾಕಾಂಡ ನಡೆಸಿದ ಉಕ್ರೇನಿನ ಆರೋಪವನ್ನು ತಿರಸ್ಕರಿಸಿದ ರಷ್ಯಾ, ಈ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಗೆ ಕರೆ ನೀಡಿದೆ.

Russia Ukraine war ಉಕ್ರೇನ್ ನಲ್ಲಿ ನಾಯಿಗಳನ್ನು ತಿಂದು ಬದುಕುತ್ತಿರುವ ರಷ್ಯಾ ಸೈನಿಕರು!

ಉಕ್ರೇನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ಎಚ್ಚರಿಕೆ: ಯುದ್ಧ ಕೊನೆಗೊಳಿಸಲು ಉಕ್ರೇನ್‌ ಇಟ್ಟಿದ್ದ ಷರತ್ತುಗಳನ್ನು ಕೆಂಡಾಮಂಡಲವಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಉಕ್ರೇನ್‌ನನ್ನು ಚಚ್ಚಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ರಷ್ಯಾದ ತೈಲ ಉದ್ಯಮಿ ಮತ್ತು ಚೆಲ್ಸಿ ಫುಟ್ಬಾಲ್‌ ತಂಡದ ಮಾಲೀಕ ರೋಮನ್‌ ಅಬ್ರಮೋವಿಚ್‌, ಉಕ್ರೇನ್‌ ಕೋರಿಕೆಯಂತೆ ಉಭಯ ದೇಶಗಳ ನಡುವೆ ಹಿಂಬಾಗಿಲ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಇಂಥದ್ದೊಂದು ಸಂಧಾನದ ಮಾತುಕತೆಯ ಭಾಗವಾಗಿ ಯುದ್ಧ ಕೊನೆಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವೊಂದು ಷರತ್ತುಗಳುಳ್ಳ ಪತ್ರವೊಂದನ್ನು ಸ್ವತಃ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಬರೆದು, ಅದನ್ನು ಅಬ್ರಮೋವಿಚ್‌ಗೆ ಹಸ್ತಾಂತರ ಮಾಡಿದ್ದರು. ಇದನ್ನು ನೋಡಿ ಆಕ್ರೋಶಗೊಂಡ ಪುಟಿನ್‌, ‘ಚಚ್ಚಿ ಹಾಕ್ತೀನಿ ಎಂದು ಅವರಿಗೆ ತಿಳಿಸು’ ಎಂದು ಅಬ್ಬರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ದ ಟೈಮ್ಸ್‌ ದಿನಪತ್ರಿಕೆ ವರದಿ ಮಾಡಿದೆ.