ಉಕ್ರೇನ್‌ಗೆ ಹೋಗುವ ಎಲ್ಲಾ ವಿಮಾನಗಳಿಗೆ NOTAM ಅಥವಾ ಏರ್‌ಮೆನ್‌ಗಳಿಗೆ ಸೂಚನೆಯನ್ನು ಕಳುಹಿಸಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗಲು ನಿರ್ಧರಿದೆ. 

ಮಾಸ್ಕೋ (ಫೆ. 24) :ನಿರೀಕ್ಷೆಯಂತೆಯೇ ಉಕ್ರೇನ್ ಮೇಲೆ ರಷ್ಯಾ (Russia Ukraine Crisis) ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ದೇಶದಾದ್ಯಂತ ಸ್ಫೋಟಗಳು ಕೇಳಿಬಂದಿವೆ. ಇತ್ತ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಉಕ್ರೇನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ (Air India) ವಿಮಾನವು ದೆಹಲಿಗೆ ಹಿಂತಿರುಗುತ್ತಿದೆ. ಉಕ್ರೇನ್ ತನ್ನ ಪೂರ್ವ ವಿಘಟಿತ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ. ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ. 

ಇನ್ನು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಬೆನ್ನಲ್ಲೇ ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿಶೇಷ ಸಲಹೆ ನೀಡಲಾಗಿದೆ. ಉಕ್ರೇನ್ ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ, ಈ ಹಿನ್ನಲೆ ಭಾರತೀಯರು ಈಗಿರುವ ಪ್ರದೇಶಗಳಲ್ಲಿ ಸುರಕ್ಷಿತವಾಗಿರಿ ಮನೆ, ಹೋಟೆಲ್‌ನಂತಹ ಸುರಕ್ಷಿತ ಸ್ಥಳಗಳಲ್ಲಿ ವಾಸ್ತವ್ಯ ಹೂಡಿ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. 

ಇದನ್ನೂ ಓದಿ:Russia Ukraine Crisis: ಉಕ್ರೇನ್ ವಾಯುನಲೆ ಮೇಲೆ ರಷ್ಯಾ ದಾಳಿ: ವಾಯುಸೇನೆ ನಿಷ್ಕ್ರಿಯ: ವರದಿ

ಕೈವ್ ಕಡೆಗೆ ಅನಾವಶ್ಯಕ ಪ್ರಯಾಣ ಮಾಡಬೇಡಿ ಹಾಗೂ ಪಶ್ಚಿಮ ಕೈವ್ ಕಡೆಗೆ ಪ್ರಯಾಣ ಬೆಳೆಸಿದವರು ನಿಮ್ಮ ಸುರಕ್ಷಿತ ಪ್ರದೇಶಕ್ಕೆ ವಾಪಸ್ ಆಗುವಂತೆ ಸಲಹೆ ನೀಡಿದೆ. ಪರಿಸ್ಥಿತಿ ಅವಲೋಕಿಸಿದ ಮುಂದೆ ಆದೇಶ ನೀಡಲಾಗುವುದು ಎಂದು ರಾಯಭಾರಿ ಕಚೇರಿ ಹೇಳಿದೆ. ಉಕ್ರೇನ್‌ನಲ್ಲಿರುವ ಭಾರತೀಯರಿಗಾಗಿ 24 ಗಂಟೆಗಳ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. 

 ವಾಣಿಜ್ಯ ವಿಮಾನಗಳಿಗೆ ಅಪಾಯ: ಉಕ್ರೇನ್‌ಗೆ ಹೋಗುವ ಎಲ್ಲಾ ವಿಮಾನಗಳಿಗೆ NOTAM ಅಥವಾ ಏರ್‌ಮೆನ್‌ಗಳಿಗೆ ಸೂಚನೆಯನ್ನು ಕಳುಹಿಸಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗಲು ನಿರ್ಧರಿಸಿದೆ. ಸದ್ಯಕ್ಕೆ ಪರ್ಯಾಯ ಮಾರ್ಗಗಳನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಪೂರ್ವ ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳು ಜಾರಿಯಲ್ಲಿರುವುದರಿಂದ, ವಾಯುಪ್ರದೇಶದ ಅಸ್ತವ್ಯಸ್ತವಾಗಿರುವ ಸ್ವಭಾವದಿಂದಾಗಿ ವಾಣಿಜ್ಯ ವಿಮಾನಗಳು ಹೆಚ್ಚಿನ ಅಪಾಯದಲ್ಲಿರುತ್ತವೆ. ಅಲ್ಲದೇ ವಾಣಿಜ್ಯ ವಿಮಾನಗಳು ಮಿಲಿಟರಿ ವಿಮಾನ-ವಿರೋಧಿ ಚಟುವಟಿಕೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. 

ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಅವರು ಉಕ್ರೇನ್‌ಗೆ ವಿಮಾನಗಳನ್ನು ನಿರ್ವಹಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ. ಪೂರ್ವ ಯುರೋಪಿಯನ್ ರಾಷ್ಟ್ರದ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಬೇಡಿಕೆಯ ಮೇರೆಗೆ ಉಕ್ರೇನ್‌ಗೆ ಹಾರಲು ಯೋಜಿಸಿರುವ ಇತರ ಕೆಲವು ವಿಮಾನಯಾನ ಸಂಸ್ಥೆಗಳು ಸೇವೆಗಳು ಸ್ಥಗಿತಗೊಂಡಿವೆ. 

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಿಗ್ಗೆ ರಷ್ಯಾದ ವಿಶೇಷ ಪಡೆಗಳಿಗೆ ಉಕ್ರೇನ್‌ನಲ್ಲಿ ಎರಡು ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಆದೇಶ ಹೊರಡಿಸಿದ್ದರು. ಈ ಪ್ರದೇಶಗಳನು ರಷ್ಯಾ ಸೋಮವಾರ ಸ್ವತಂತ್ರ ರಾಷ್ಟ್ರಗಳೆಂದು ಗುರುತಿಸಿದೆ. "ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ" ಎಂದು ಪುಟಿನ್ ರ ದೂರದರ್ಶನ ಪ್ರಕಟಣೆಯಲ್ಲಿ ಹೇಳಿದ್ದರು.

ಭಾರತದ ಮೇಲೇನು ಪರಿಣಾಮ?: ಈ ಯುದ್ಧ ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸುತ್ತಿದ್ದಂತೆ ಇತ್ತ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. 

ಕಚ್ಚಾ ತೈಲ (Crude Oil) ಬೆಲೆಯಲ್ಲಿ (Price) ಪ್ರತಿ ಬ್ಯಾರಲ್ ಗೆ 100 ಡಾಲರ್ ಏರಿಕೆಯಾಗಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೆಚ್ಚಳ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿದೆ. ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನದ (Gold) ಬೆಲೆಯಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಚಿನ್ನದ ಬೆಲೆಯೇರಿಕೆ ಭಾರತದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ