ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ಗೆ ಕರೆ ಮಾಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಉಕ್ರೇನ್‌ನಲ್ಲಿ "ಏಕಪಕ್ಷೀಯ" ಕದನ ವಿರಾಮ ಘೋಷಿಸಲು ಪುಟಿನ್‌ಗೆ ಒತ್ತಡ ಹೇರಿದ್ದರು.
ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್‌ನಲ್ಲಿ (Ukraine) 2 ದಿನಗಳ ಕಾಲ ಕದನ ವಿರಾಮಕ್ಕೆ (Ceasefire) ಆದೇಶಿಸಿದ್ದಾರೆ. ಕೆಲಸಕ್ಕೆ ಬ್ರೇಕ್ ತಗೊಳ್ಳೋ ರೀತಿ, ಯುದ್ಧಕ್ಕೂ ಬ್ರೇಕ್ ಅಂತೀರಾ..? ಹೌದು, ಶುಕ್ರವಾರ ಆರ್ಥೊಡಾಕ್ಸ್ ಕ್ರಿಸ್ಮಸ್ (Orthodox Christmas) ಆಚರಣೆ ಹಿನ್ನೆಲೆ ಗುರುವಾರ ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಆದೇಶ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಎಎಫ್‌ಪಿ ವರದಿ ನೀಡಿದೆ. ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಮುಖ್ಯಸ್ಥರ ಮನವಿ ಹಿನ್ನೆಲೆ ರಷ್ಯಾ ಅಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಧ್ಯಾತ್ಮಿಕ ನಾಯಕ ಪೇಟ್ರಿಯಾರ್ಕ್ ಕಿರಿಲ್ ಅವರ ಕೋರಿಕೆಯ ಮೇರೆಗೆ ಈ ನಿರ್ಧಾರ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥರ ಮನವಿಯ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಆರ್ಥೊಡಾಕ್ಸ್ ಕ್ರಿಸ್‌ಮಸ್‌ಗಾಗಿ ಉಕ್ರೇನ್‌ನಲ್ಲಿ 36 ಗಂಟೆಗಳ ಕದನ ವಿರಾಮಕ್ಕೆ ಆದೇಶಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಚರ್ಚ್ ಮನವಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ಉಕ್ರೇನ್ ಇದನ್ನು ಟೀಕಿಸಿತ್ತು.
ಇದನ್ನು ಓದಿ: ಒಡಿಶಾದಲ್ಲಿ ಪುಟಿನ್ ಮತ್ತೊಬ್ಬ ಟೀಕಾಕಾರನ ದಿಢೀರ್ ಸಾವು
ಜನವರಿ 6 ರಂದು 12:00 ಕ್ಕೆ ಕದನ ವಿರಾಮ ಪ್ರಾರಂಭವಾಗಲಿದೆ ಎಂದು ಪುಟಿನ್ ಆದೇಶಿಸಿದ್ದಾರೆ ಎಂದು ಕ್ರೆಮ್ಲಿನ್ ಹೇಳಿದೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿ ವಾಸಿಸುವವರು ಸೇರಿದಂತೆ ಅನೇಕ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಜನವರಿ 6-7 ರಂದು ಕ್ರಿಸ್ಮಸ್ ಆಚರಿಸುತ್ತಾರೆ. "ಅವರ ಪವಿತ್ರ ಪೇಟ್ರಿಯಾರ್ಕ್ ಕಿರಿಲ್ ಅವರ ಮನವಿಯನ್ನು ಗಣನೆಗೆ ತೆಗೆದುಕೊಂಡು, ಜನವರಿ 6, 2023 ರಂದು 12:00 (0900 GMT) ರಿಂದ ಜನವರಿ 7, 2023 ರಂದು 24:00 (2100 GMT) ವರೆಗೆ ಉಕ್ರೇನ್‌ನಲ್ಲಿನ ಎರಡೂ ಬದಿಗಳ ನಡುವಿನ ಸಂಪೂರ್ಣ ಸಂಪರ್ಕದ ಉದ್ದಕ್ಕೂ ಕದನ ವಿರಾಮ ಪರಿಚಯಿಸಲು ನಾನು ರಷ್ಯಾದ ಒಕ್ಕೂಟದ ರಕ್ಷಣಾ ಸಚಿವರಿಗೆ ಸೂಚನೆ ನೀಡುತ್ತೇನೆ’’ ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ.
"ಸಾಂಪ್ರದಾಯಿಕತೆಯನ್ನು ಪ್ರತಿಪಾದಿಸುವ ಹೆಚ್ಚಿನ ಸಂಖ್ಯೆಯ ನಾಗರಿಕರು ಯುದ್ಧದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಅಂಶವನ್ನು ಗಮನಿಸಿ, ನಾವು ಕ್ರಿಸ್ಮಸ್ ಈವ್‌ನಲ್ಲಿ ಹಾಗೂ ನೇಟಿವಿಟಿ ಆಫ್ ಕ್ರೈಸ್ಟ್ ದಂದು ಉಕ್ರೇನ್ ಕಡೆಯಿಂದ ಕದನ ವಿರಾಮವನ್ನು ಘೋಷಿಸಲು ಮತ್ತು ಚರ್ಚ್ ಸೇವೆಗಳಿಗೆ ಹಾಜರಾಗಲು ಅವಕಾಶವನ್ನು ನೀಡುತ್ತೇವೆ’’ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್..!
ಇದಕ್ಕೂ ಮುನ್ನ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ಗೆ ಕರೆ ಮಾಡಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಉಕ್ರೇನ್‌ನಲ್ಲಿ "ಏಕಪಕ್ಷೀಯ" ಕದನ ವಿರಾಮ ಘೋಷಿಸಲು ಪುಟಿನ್‌ಗೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಷ್ಯಾ ಅಧ್ಯಕ್ಷ, ಮಾಸ್ಕೋದಿಂದ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ರಷ್ಯಾದ್ದು ಎಂದು ಒಪ್ಪಿಕೊಂಡರೆ ಉಕ್ರೇನ್‌ನೊಂದಿಗೆ ಮಾತುಕತೆಗೆ ಮುಕ್ತವಾಗಿದ್ದೇನೆ ಎಂದು ಗುರುವಾರ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ ಎಂದೂ ತಿಳಿದುಬಂದಿದೆ.
"ಹೊಸ ಪ್ರಾದೇಶಿಕ ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆಗಳನ್ನು ಪೂರೈಸುವ ಕೀವ್ ಅಧಿಕಾರಿಗಳ ಸ್ಥಿತಿಯ ಕುರಿತು ಗಂಭೀರ ಮಾತುಕತೆಗೆ ರಷ್ಯಾದ ಮುಕ್ತತೆಯನ್ನು ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ದೃಢಪಡಿಸಿದರು" ಎಂದೂ ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ. ಡೊನೆಟ್ಸ್ಕ್, ಲುಗಾನ್ಸ್ಕ್, ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶಗಳನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದರೂ ಅವುಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ಕ್ರೆಮ್ಲಿನ್ ಹೇಳಿಕೊಂಡಿದೆ.
ಇದನ್ನೂ ಓದಿ: ಉಕ್ರೇನ್ ರಾಕೆಟ್ ದಾಳಿಗೆ 63 ಯೋಧರು ಬಲಿ: ರಷ್ಯಾ
