*ಉಕ್ರೇನ್‌-ರಷ್ಯಾ ನಡುವೆ ಮತ್ತೆ ಯುದ್ಧ ಕಾರ್ಮೋಡ*ಹಲವು ದಿನಗಳಲ್ಲಿ ಯುದ್ಧ ನಡೆಯಬಹುದು: ಬೈಡೆನ್‌*ರಷ್ಯಾದ ಸೇನಾ ಹಿಂಪಡೆತ ಹೇಳಿಕೆಗೆ ವ್ಯತಿರಿಕ್ತ ಬೆಳವಣಿಗೆ ಪತ್ತೆ

ಮಾಸ್ಕೋ/ವಾಷಿಂಗ್ಟನ್‌ (ಫೆ.18) : ಸಂಧಾನ ಮಾತುಕತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉಕ್ರೇನ್‌ ಗಡಿಯಿಂದ ಸೇನೆ ಹಿಂಪಡೆತ ಆರಂಭಿಸಿದ್ದಾಗಿ ಹೇಳಿದ್ದ ರಷ್ಯಾದ ಮಾತುಗಳಿಗೆ ವ್ಯತಿರಿಕ್ತವಾದ ಬೆಳವಣಿಗೆಗಳು ಉಕ್ರೇನ್‌ ಗಡಿಯಲ್ಲಿ ಕಂಡುಬಂದಿವೆ. ಉಪಗ್ರಹ ಚಿತ್ರದಲ್ಲಿ ರಷ್ಯಾ, ಉಕ್ರೇನ್‌ ಗಡಿಗೆ ಮತ್ತಷ್ಟುಯೋಧರ ಕಳಿಸುರುವುದು ಕಂಡುಬಂದಿದೆ. ಇದರ ನಡುವೆಯೇ ಹಲವು ದಿನಗಳಲ್ಲಿ ಯುದ್ಧ ಆರಂಭವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ರಷ್ಯಾದ 1.5 ಲಕ್ಷ ಯೋಧರು ಉಕ್ರೇನ್‌ ಗಡಿಯಲ್ಲಿದ್ದಾರೆ ವಿಶಸಂಸ್ಥೆಗೆ ಅಮೆರಿಕ ದೂರಿದೆ.ಹೀಗಾಗಿ ಮತ್ತೆ ಯುದ್ಧಭೀತಿ ಆವರಿಸಿದೆ.

ಅಮೆರಿಕದ ಖಾಸಗಿ ಉಪಗ್ರಹವೊಂದು ಕಳೆದ 48 ಗಂಟೆಗಳ ಅವಧಿಯಲ್ಲಿ ಸೆರೆಹಿಡಿದ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಲಾರಸ್‌, ಉಕ್ರೇನ್‌ ಗಡಿಯಲ್ಲಿ ಸಶಸ್ತ್ರ ವಾಹನಗಳು, ಹೆಲಿಕಾಪ್ಟರ್‌, ಯೋಧರ ನಿಯೋಜನೆ, ಹೊಸ ಸೇತುವೆ ನಿರ್ಮಾಣ, ಯೋಧರಿಗೆ ತರಬೇತಿ, ಯೋಧರಿಗಾಗಿ ಆಸ್ಪತ್ರೆ ನಿರ್ಮಿಸಿರುವುದು ಕಂಡುಬಂದಿದೆ. ಹೀಗಾಗಿ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಬಗ್ಗೆ ರಷ್ಯಾ ಬಿಡುಗಡೆ ಮಾಡಿದ್ದ ವಿಡಿಯೋ ಸಾಚಾತನದ ಬಗ್ಗೆ ಅನುಮಾನಗಳು ಮೂಡಿವೆ.

ಇದನ್ನೂ ಓದಿ:Russia Ukraine Crisis: ನಮಗೆ ಯುದ್ಧ ಬೇಡ, ಹಿಂದೆ ಸರಿದ ರಷ್ಯಾದ ಮುಂದಿನ ಹೆಜ್ಜೆ!

ಇದರ ನಡುವೆಯೇ ಅಮೆರಿಕ ಅಧಿಕಾರಿಯೊಬ್ಬರು ಹಾಗೂ ನ್ಯಾಟೋ ಪಡೆ ಅಧಿಕಾರಿಗಳು ಮಾತನಾಡಿ, ಉಕ್ರೇನ್‌ ಗಡಿಯಲ್ಲಿ ರಷ್ಯಾ 7 ಸಾವಿರ ಹೆಚ್ಚುವರಿ ಯೋಧರನ್ನು ಬುಧವಾರ ನಿಯೋಜಿಸಿದೆ ಎಂದಿದ್ದಾರೆ. ಈ ಹಿಂದೆ ರಷ್ಯಾ ಸುಮಾರು 1.50 ಲಕ್ಷ ಯೋಧರನ್ನು ನಿಯೋಜಿಸಿತ್ತು. ಆದರೆ ಮಂಗಳವಾರ ಹಾಗೂ ಬುಧವಾರ ಸೇನಾ ವಾಪಸಾತಿ ನಡೆದಿದೆ ಎಂದು ತಿಳಿಸಿತ್ತು.

ಅಮೆರಿಕ ರಾಯಭಾರಿ ವಜಾ ಮಾಡಿದ ರಷ್ಯಾ: ಅಮೆರಿಕ-ರಷ್ಯಾ ಸಂಬಂಧ ಹಳಸುತ್ತಿರುವ ದ್ಯೋತಕವಾಗಿ ಮಾಸ್ಕೋದಲ್ಲಿನ ಅಮೆರಿಕ ರಾಯಭಾರ ಕಚೇರಿ ಉಪಮುಖ್ಯಸ್ಥ ಬಾರ್ಟ್‌ ಗಾರ್ಮನ್‌ರನ್ನು ರಷ್ಯಾ ಉಚ್ಚಾಟನೆ ಮಾಡಿದೆ.

ಇದನ್ನೂ ಓದಿ:Russia-Ukraine Crisis: ಪುಟಿನ್ ಅಣುಬಾಂಬ್ ವಾರ್ನಿಂಗ್, ಜಗತ್ತಿಗೆ ಮಹಾಯುದ್ಧ ಭೀತಿ!

ರಷ್ಯಾ ದಾಳಿ ನಡೆಸಿದರೆ ನಮ್ಮ ಬೆಂಬಲಕ್ಕೆ ಭಾರತ: ಅಮೆರಿಕ ಆಶಯ: ಒಂದು ವೇಳೆ ರಷ್ಯಾ ಉಕ್ರೇನ್‌ ವೇಲೆ ದಾಳಿ ನಡೆಸಿದರೆ ಭಾರತ ತನ್ನ ಪರವಾಗಿ ನಿಲ್ಲುವ ವಿಶ್ವಾಸವಿದೆ ಎಂದು ಅಮೆರಿಕ ಹೇಳಿದೆ.

‘ನಿಯಮ ಆಧರಿತ ಅಂತಾರಾಷ್ಟ್ರೀಯ ಕಾನೂನು ಪಾಲನೆಗೆ ಭಾರತ ಬದ್ಧವಾಗಿದೆ. ಮೇಲಾಗಿ ಇತ್ತೀಚೆಗೆ ನಡೆದ ಕ್ವಾಡ್‌ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲೂ ಉಕ್ರೇನ್‌ ಬಿಕ್ಕಟ್ಟಿಗೆ ರಾಜತಾಂತ್ರಿಕ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದರ ಬಗ್ಗೆ ಸಮ್ಮತ ಮೂಡಿದೆ. ಹೀಗಾಗಿ ಒಂದು ವೇಳೆ ರಷ್ಯಾ ಉಕ್ರೇನ್‌ ದಾಳಿ ನಡೆಸಿದ್ದೇ ಆದಲ್ಲಿ ತನ್ನ ಪರವಾಗಿ ಭಾರತ ನಿಲ್ಲಲಿದೆ ಎಂಬ ವಿಶ್ವಾಸವಿದೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್‌ ಹೇಳಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ!: ರಷ್ಯಾವು (Russia) ಬುಧವಾರದ ವೇಳೆಗೆ ಯುದ್ಧದ ಎಚ್ಚರಿಕೆ ನೀಡಿದೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿರುವ ನಡುವೆಯೇ ಕಳೆದ 48 ಗಂಟೆಗಳಲ್ಲಿ ಉಕ್ರೇನ್ ನ ( Ukraine ) ಗಡಿಗಳಲ್ಲಿ ರಷ್ಯಾದ ಇನ್ನಷ್ಟು ಸೇನೆ ಹಾಗೂ ಯುದ್ಧವಿಮಾನಗಳ ಜಮಾವಣೆ ಆಗಿರುವುದು ಉಪಗ್ರಹ ಚಿತ್ರದಿಂದ ಬಯಲಾಗಿದೆ. ಈ ನಡುವೆ ಅಮೆರಿಕವು, ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್ (Vladimir Putin) ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದು ಹೇಳಿದೆ. ಯುದ್ಧದ ಕಾರ್ಮೋಡ ಆವರಿಸಿರುವ ನಡುವೆಯೇ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು (Indian Students in Ukraine ) ಹಾಗೂ ಪ್ರವಾಸಿಗರಿಗೆ ಭಾರತ ಪ್ರಯಾಣದ ಮಾರ್ಗಸೂಚಿ ನೀಡಿದ್ದು, ತಾತ್ಕಾಲಿಕವಾಗಿ ಈ ದೇಶಕ್ಕೆ ಪ್ರಯಾಣ ಮಾಡದೇ ಇರುವುದು ಒಳಿತು ಎಂದು ಹೇಳಿದೆ.