* ಉಕ್ರೇನ್ ಯುದ್ಧದಿಂದ ಹಿಂದಡಿ ಇಟ್ಟರಷ್ಯಾ* ಉಕ್ರೇನ್ ಗಡಿಯಲ್ಲಿನ ಒಂದಿಷ್ಟುಸೇನೆ ಹಿಂದಕ್ಕೆ* ನಮಗೆ ಯುದ್ಧ ಬೇಕಿಲ್ಲ. ಮಾತುಕತೆಗೆ ಸಿದ್ಧ: ಪುಟಿನ್
ಮಾಸ್ಕೋ(ಫೆ. 16) ಪಾಶ್ಚಾತ್ಯ ರಾಷ್ಟ್ರಗಳ ಸಂಗಡ ಸೇರಿರುವ ಉಕ್ರೇನ್‌ಗೆ (Ukraine) ಪಾಠ ಕಲಿಸಲು ಆ ದೇಶದ ಮೇಲೆ ಬಲಾಢ್ಯ ರಷ್ಯಾ (Russia) ಯಾವುದೇ ಕ್ಷಣದಲ್ಲಿಯಾದರೂ ಯುದ್ಧ ಸಾರಬಹುದು ಎಂಬ ಆತಂಕ ಸೃಷ್ಟಿಯಾಗಿರುವಾಗಲೇ ಅನಿರೀಕ್ಷಿತ ಬೆಳವಣಿಗೆಯೊಂದು ಮಂಗಳವಾರ ನಡೆದಿದೆ. ಉಕ್ರೇನ್ ಗಡಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ ಒಂದಷ್ಟುಮಂದಿಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ.
ಇದರ ಬೆನ್ನಲ್ಲೇ ‘ನಮಗೆ ಯುದ್ಧ(War) ಬೇಡ. ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ನ್ಯಾಟೋ ಪಟೆಗಳ ನಿಯೋಜನೆಗೆ ನಮ್ಮ ಆಕ್ಷೇಪ ಇದೆ. ಈ ವಿಷಯದಲ್ಲಿ ಯುರೋಪ್ ಹಾಗೂ ಅಮೆರಿಕ ದೇಶಗಳೊಂದಿಗೆ ನಾವು ಮಾತುಕತೆಗೆ ಸಿದ್ಧರಿದ್ದೇವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ ಮಾಡಲ್ಲ: ರಷ್ಯಾ ಸರ್ಕಾರ ಸ್ಪಷ್ಟನೆ!
ಹೀಗಾಗಿ ರಾಜತಾಂತ್ರಿಕ ಮಾರ್ಗದಲ್ಲಿ ನಡೆದ ಸಂಧಾನ ಪ್ರಕ್ರಿಯೆಗಳ ಫಲ ಇದಾಗಿದ್ದು, ರಷ್ಯಾ ಮತ್ತಷ್ಟುಯೋಧನ್ನು ಹಿಂಪಡೆದುಕೊಂಡರೆ ಯುದ್ಧ ಸಾಧ್ಯತೆ ಕ್ಷೀಣಿಸಲಿದೆ.
ಸೇನೆ ಹಿಂದಕ್ಕೆ: ‘ಉಕ್ರೇನ್ ಗಡಿಗೆ ನಿಯೋಜಿಸಲಾಗಿದ್ದ ಒಂದಷ್ಟುತುಕಡಿಗಳು ತಮ್ಮ ಕಾರ್ಯ ಮುಗಿಸಿ, ಗಂಟು ಮೂಟೆ ಕಟ್ಟಿಕೊಂಡಿವೆ. ಈಗಾಗಲೇ ರೈಲು, ರಸ್ತೆ ಮಾರ್ಗವಾಗಿ ತಮ್ಮ ಸೇನಾ ನೆಲೆಗಳಿಗೆ ಪ್ರಯಾಣ ಆರಂಭಿಸಿವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮುಖ್ಯ ವಕ್ತಾರ ಇಗೋರ್ ಕೊನಾಶೆಂಕೋವ್ ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.
ಉಕ್ರೇನ್ ಗಡಿಯಲ್ಲಿ 1.30 ಲಕ್ಷ ಯೋಧರನ್ನು ಜಮಾವಣೆ ಮಾಡಿರುವ ರಷ್ಯಾ, ಆ ಪೈಕಿ ಎಷ್ಟುಮಂದಿಯನ್ನು ವಾಪಸ್ ಕರೆಸಿಕೊಂಡಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಬಿಕ್ಕಟ್ಟು ಆರಂಭವಾದ ಬಳಿಕ ರಷ್ಯಾ ತನ್ನ ಯೋಧರನ್ನು ಕರೆಸಿಕೊಳ್ಳುತ್ತಿರುವುದು ಧನಾತ್ಮಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಕ್ರೇನ್ ಮೇಲೆ ಎರಗುವ ರಷ್ಯಾದ ಚಿಂತನೆ ಕೇವಲ ಆ ಎರಡೂ ದೇಶಗಳ ನಡುವಣ ಬಿಕ್ಕಟ್ಟು ಮಾತ್ರವೇ ಆಗಿರದೆ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ಪರೋಕ್ಷ ಸಮರವೆಂದೇ ಬಿಂಬಿತವಾಗಿತ್ತು. ಶೀತಲ ಸಮರದ ಅಂತ್ಯದ ಬಳಿಕ ಸೃಷ್ಟಿಯಾದ ಮಹಾ ಬಿಕ್ಕಟ್ಟು ಇದಾಗಿತ್ತು. ರಷ್ಯಾ ಏನಾದರೂ ಉಕ್ರೇನ್ ಮೇಲೆ ದಾಳಿ ಮಾಡಿದರೆ ಉಕ್ರೇನ್ ಬೆಂಬಲಕ್ಕೆ ನಿಲ್ಲುವುದಾಗಿ ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳು ಘೋಷಣೆ ಮಾಡಿದ್ದವು. ಹೀಗಾಗಿ ಈ ಸಮರ ವಿಕೋಪಕ್ಕೆ ಹೋಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸಂಘರ್ಷ ತಪ್ಪಿಸಲು ಹಲವು ದೇಶಗಳು ರಷ್ಯಾ ಜತೆ ರಾಜತಾಂತ್ರಿಕವಾಗಿ ಮಾತುಕತೆ ನಡೆಸಿದ್ದವು. ರಷ್ಯಾದ ಹೊಸ ನಡೆಯಿಂದಾಗಿ ಉಕ್ರೇನ್ ಮಾತ್ರವೇ ಅಲ್ಲದೆ ಇಡೀ ಯುರೋಪ್ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಬಿಕ್ಕಟ್ಟು ಏನು?: 2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯವನ್ನು ರಷ್ಯಾ ವಶಕ್ಕೆ ತೆಗೆದುಕೊಂಡಿತ್ತು. ಅದಾದ ನಂತರ ಎರಡೂ ದೇಶಗಳ ಸಂಬಂಧ ಹಳಸಿತ್ತು. ಈ ನಡುವೆ ಅಮೆರಿಕ- ಬ್ರಿಟನ್ ನೇತೃತ್ವದ ನ್ಯಾಟೋ ಪಡೆ ಸೇರಲು ಉಕ್ರೇನ್ ಮುಂದಾಗಿತ್ತು. ಉಕ್ರೇನ್ ಬಳಸಿಕೊಂಡು ತನ್ನ ಗಡಿಯಲ್ಲಿ ಅಮೆರಿಕ ಸೇನಾ ನೆಲೆ ತೆರೆಯಲು ಯತ್ನಿಸುತ್ತಿದೆ ಎಂದು ನಂಬಿದ ರಷ್ಯಾ, ನ್ಯಾಟೋಗೆ ಉಕ್ರೇನ್ ಸೇರದಂತೆ ಬೆದರಿಸಲು ಆ ದೇಶದ ಗಡಿಗೆ ಯೋಧರನ್ನು ಜಮಾವಣೆ ಮಾಡಿತ್ತು. ವಿವಿಧ ದೇಶಗಳ ಮಧ್ಯಪ್ರವೇಶದೊಂದಿಗೆ ಇದು ವಿಕೋಪಕ್ಕೆ ಹೋಗಿತ್ತು.
