ಮಧ್ಯಪ್ರಾಚ್ಯ ಯುದ್ಧ ಜಗತ್ತಿನಾದ್ಯಂತ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿ, ದೇಶಗಳ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತಿದ್ದರೆ, ಮತ್ತೊಂದೆಡೆ ಒಳಗೊಳಗೇ ಇರಾನ್‌ಗೆ ನೆರವು ನೀಡುತ್ತಿದೆ ಎನ್ನಲಾದ ರಷ್ಯಾ ಲಕ್ಷಾಂತರ ಕೋಟಿ ಲಾಭ ಮಾಡಿಕೊಳ್ಳುತ್ತಿದೆ.

ಮಾಸ್ಕೋ: ಮಧ್ಯಪ್ರಾಚ್ಯ ಯುದ್ಧ ಜಗತ್ತಿನಾದ್ಯಂತ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿ, ದೇಶಗಳ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತಿದ್ದರೆ, ಮತ್ತೊಂದೆಡೆ ಒಳಗೊಳಗೇ ಇರಾನ್‌ಗೆ ನೆರವು ನೀಡುತ್ತಿದೆ ಎನ್ನಲಾದ ರಷ್ಯಾ ಲಕ್ಷಾಂತರ ಕೋಟಿ ಲಾಭ ಮಾಡಿಕೊಳ್ಳುತ್ತಿದೆ. ಕೊಲ್ಲಿ ಯುದ್ಧ ರಷ್ಯಾ ಪಾಲಿಗೆ ಅಕ್ಷರಶಃ ಚಿನ್ನದ ಮೊಟ್ಟೆಯಾಗಿ ಪರಿಣಮಿಸಿದೆ. ಕುಂತಲ್ಲೇ ಕುಂತು ರಷ್ಯಾ ಭರ್ಜರಿ ಹಣ ಸಂಪಾದಿಸುತ್ತಿದೆ.

ಮೂಲಗಳ ಪ್ರಕಾರ ಕಳೆದ ಮೂರು ವಾರಗಳಲ್ಲಿ ರಷ್ಯಾ ಈ ರೀತಿಯಲ್ಲಿ ₹1.35 ಲಕ್ಷ ಕೋಟಿ ರು.ಗೂ ಹೆಚ್ಚಿನ ತೈಲ ವಹಿವಾಟು ನಡೆಸಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಹೌದು. ಕೊಲ್ಲಿ ಯುದ್ಧ ಆರಂಭಕ್ಕೂ ಮುನ್ನ ರಷ್ಯಾದ ತೈಲದ ಖರೀದಿಗೆ ಅಮೆರಿಕ ನಿರ್ಬಂಧ ಹೇರಿತ್ತು. ಹೀಗಾಗಿ ಅನಿವಾರ್ಯವಾಗಿ ರಷ್ಯಾ ತನ್ನ ತೈಲವನ್ನು ರಿಯಾಯಿತಿ ದರದಲ್ಲಿ ಭಾರತ ಸೇರಿ ಹಲವು ದೇಶಗಳಿಗೆ ಮಾರಾಟ ಮಾಡುತ್ತಿತ್ತು. ಬಳಿಕ ನಿರ್ಬಂಧ ತೀವ್ರಗೊಂಡು ಭಾರತ ಸೇರಿ ಹಲವು ದೇಶಗಳು ಆಮದು ಸ್ಥಗಿತಗೊಳಿಸಿದ ಪರಿಣಾಮ ರಷ್ಯಾಕ್ಕೆ ಭಾರೀ ಪೆಟ್ಟು ಬಿದ್ದಿತ್ತು.

ಆದರೆ ಕೊಲ್ಲಿ ಯುದ್ಧ ಆರಂಭವಾಗಿದ್ದೇ ತಡ ಹೋರ್ಮಜ್‌ ಜಲಸಂಧಿ ಬಂದ್‌ ಆದ ಕಾರಣ ಜಾಗತಿಕ ಕಚ್ಚಾತೈಲ ಪೂರೈಕೆಯಲ್ಲಿ ಕಡಿತ ಉಂಟಾಗಿ ರಷ್ಯಾ ತೈಲಕ್ಕೆ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ ಯುದ್ಧ ಆರಂಭದ ವೇಳೆ ಬ್ಯಾರಲ್‌ಗೆ 75 ಡಾಲರ್‌ ಆಸುಪಾಸಿನಲ್ಲಿದ್ದ ಕಚ್ಚಾತೈಲದ ಬೆಲೆ 100-120 ಡಾಲರ್‌ವರೆಗೂ ಹೊಯ್ದಾಡುತ್ತಿದೆ. ಹೀಗಾಗಿ ತೈಲ ಬೆಲೆ ಹೆಚ್ಚಾಗುವ ಮೂಲಕ ರಷ್ಯಾಕ್ಕೆ ಲಾಭವಾಗಿದೆ. ಇದರ ಜೊತೆಗೆ ಈ ಮೊದಲು ನೀಡುತ್ತಿದ್ದ ರಿಯಾಯ್ತಿಯನ್ನೂ ರಷ್ಯಾ ಇದೀಗ ಕಡಿತಗೊಳಿಸಿದೆ ಇಲ್ಲವೇ ತೆಗೆದು ಹಾಕಿದೆ. ಹೀಗಾಗಿ ಹಲವು ರೀತಿಯಲ್ಲಿ ರಷ್ಯಾಕ್ಕೆ ಭರ್ಜರಿ ಲಾಭವಾಗಿದೆ.

ಉಕ್ರೇನ್‌ ಜತೆ ಯುದ್ಧದಲ್ಲೂ ಮೇಲುಗೈ:

ರಷ್ಯಾ ವಿರುದ್ಧ ಬಡಿದಾಡಲು ಉಕ್ರೇನ್‌ಗೆ ಅಮೆರಿಕ ಭರ್ಪೂರ ಶಸ್ತ್ರಾಸ್ತ್ರ ಪೂರೈಸುತ್ತಿತ್ತು. ಆದರೆ ಇದೀಗ ಅದರ ಗಮನ ಸಂಪೂರ್ಣವಾಗಿ ಇರಾನ್‌ ಕಡೆ ತಿರುಗಿರುವ ಕಾರಣ, ಆಯುಧ ಸಿಗದೆ ಉಕ್ರೇನ್‌ ದಿನ ಕಳೆದಂತೆ ದುರ್ಬಲವಾಗುತ್ತಿದೆ. ಇದರಿಂದ ರಷ್ಯಾದ ಸೇನಾಬಲ ವೃದ್ಧಿಯಾಗಿ, ಕಳೆದ 4 ವರ್ಷಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಮೇಲುಗೈ ಸಾಧಿಸುತ್ತಿದೆ.

- ಈ ಮುಂಚೆ ರಷ್ಯಾ ತೈಲ ಖರೀದಿಗೆ ವಿಶ್ವಕ್ಕೇ ನಿರ್ಬಂಧ ಹೇರಿದ್ದ ಟ್ರಂಪ್‌

- ಮಧ್ಯಪ್ರಾಚ್ಯ ಸಂಘರ್ಷದಿಂದ ದಿಢೀರ್ ತೈಲ ಬಿಕ್ಕಟ್ಟು, ಬೆಲೆ ಏರಿಕೆ

- ಇದರ ಬೆನ್ನಲ್ಲೇ ಬೆಲೆ ನಿಯಂತ್ರಣಕ್ಕೆ ರಷ್ಯಾ ತೈಲ ಖರೀದಿಗೆ ಟ್ರಂಪ್‌ ಒಕೆ

- ಟ್ರಂಪ್ ಅನುಮತಿ ಬಳಿಕ ಭಾರತ, ಇತರ ದೇಶಗಳಿಂದ ರಷ್ಯಾ ತೈಲ ಖರೀದಿ

- ಅತ್ತ ಪುಟಿನ್‌ ಸರ್ಕಾರದಿಂದ ರಿಯಾಯಿತಿಯೂ ಕಡಿತ, ಬೊಕ್ಕಸಕ್ಕೆ ಹಣ

- 3 ವಾರದಲ್ಲಿ ರಷ್ಯಾ ಸರ್ಕಾರದಿಂದ ₹1.35 ಲಕ್ಷ ಕೋಟಿ ತೈಲ ವಹಿವಾಟು