ಇನ್ಫಿ ನಾರಾಯಣದ ಮೂರ್ತಿ ಮಗಳು ಬ್ರಿಟನ್ ರಾಣಿಗಿಂತ ಶ್ರೀಮಂತೆ! ಆಸ್ತಿ ಬಚ್ಚಿಟ್ಟ ವಿವಾದ
ಕ್ವೀನ್ ಎಲಿಜಬೆತ್ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿದ್ದಾರೆ
ಲಂಡನ್ (ನ.29) : ಬ್ರಿಟನ್ ಹಾಗೂ 15 ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್ ಎಲಿಜಬೆತ್ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದ ಕಾರಣ ರಿಶಿ ಸುನಾಕ್ ಅವರು ಬ್ರಿಟನ್‌ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನ ಇಸ್ಫೋಸಿಸ್ ಕಂಪನಿಯಲ್ಲಿ ಅಕ್ಷತಾ ಮೂರ್ತಿ ಅವರು ಶೇ.0.91ರಷ್ಟುಷೇರು ಹೊಂದಿದ್ದು, ಅದರ ಮೌಲ್ಯ 4200 ಕೋಟಿ ರು. ಆಗಿದೆ. ಆದರೆ ಬ್ರಿಟನ್ ರಾಣಿ ಅವರ ಒಟ್ಟಾರೆ ಆಸ್ತಿ 3444 ಕೋಟಿ ರು. ಎಂದು ವರದಿಗಳು ತಿಳಿಸಿವೆ.
'ಸಾಮಾನ್ಯರಿಗೆ ಕೊರೋನಾ ಲಸಿಕೆ ಉಚಿತವಾಗಿ ನೀಡಿ' ನಾರಾಯಣಮೂರ್ತಿ
ಬ್ರಿಟನ್‌ನ ಹಣಕಾಸು ಸಚಿವರಾಗಿರುವ ಹಿನ್ನೆಲೆಯಲ್ಲಿ ಸೋದರರು, ಪೋಷಕರು, ಪತ್ನಿ, ಪತ್ನಿಯ ಪೋಷಕರ ಆಸ್ತಿಯ ವಿವರವನ್ನು ರಿಶಿ ಸುನಾಕ್ ಅವರನ್ನು ಘೋಷಣೆ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಹೀಗಾಗಿ ಅವರ ವಿರುದ್ಧ ಪಾರದರ್ಶಕತೆಯ ಪ್ರಶ್ನೆ ಎದ್ದಿದೆ. ಆಸ್ತಿ ವಿವರದಲ್ಲಿ ಪತ್ನಿಯ ಹೆಸರನ್ನು ರಿಶಿ ಅವರು ನಮೂದಿಸಿದ್ದಾರಾದರೂ ಬ್ರಿಟನ್ ಮೂಲದ ಸಣ್ಣ ವೆಂಚರ್ ಕ್ಯಾಪಿಟಲ್ ಕಂಪನಿಯನ್ನು ಹೊಂದಿದ್ದಾರೆ ಎಂದಷ್ಟೇ ಪ್ರಸ್ತಾಪಿಸಿದ್ದಾರೆ. ಆದರೆ ಇಸ್ಫೋಸಿಸ್ ಹಾಗೂ ಮತ್ತಿತರ ಸಂಸ್ಥೆಗಳಲ್ಲಿ ಅವರು ಹೊಂದಿರುವ ಷೇರಿನ ಕುರಿತು ಮಾಹಿತಿ ನೀಡಿಲ್ಲ.
2009ರಲ್ಲಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಶಿ ಸುನಾಕ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಲು ಕನಿಷ್ಠ ಪ್ರಯತ್ನ ಪಡಬೇಕಿತ್ತು ಎಂಬ ಟೀಕೆಗಳು ವ್ಯಕ್ತವಾಗಿವೆ. ಬೆಂಗಳೂರು ಮೂಲದ ಇಸ್ಫೋಸಿಸ್‌ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬ 16 ಸಾವಿರ ಕೋಟಿ ರು. ಆಸ್ತಿಯನ್ನು ಹೊಂದಿದೆ.