Rishi Sunak to become UK Prime Minister: ರಿಷಿ ಸುನಕ್ ಚುನಾವಣೆಯಲ್ಲಿ ಸೋತರೂ ಮತ್ತೆ ಪ್ರಧಾನಿಯಾಗುವ ಅವಕಾಶ ಪಡೆದಿದ್ದಾರೆ. ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾದ ಇಂಗ್ಲೆಂಡ್ ಪ್ರದಾನಿ ಹುದ್ದೆಗೆ ರಿಷಿ ಸುನಕ್ ಗೆಲುವು ಬಹುತೇಕ ಖಚಿತ.
ನವದೆಹಲಿ: ಇಂಗ್ಲೆಂಡ್‌ನ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಿಷಿ ಸುನಕ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಅತಿ ಹೆಚ್ಚು ಸಂಸದರ ಬೆಂಬಲವಿದೆ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ಪೆನ್ನಿ ಮೊರ್ಡಂಟ್ ನೂರು ಸಂಸದರ ಬೆಂಬಲ ಪಡೆದರೆ ಮಾತ್ರ ರಿಷಿ ಸುನಕ್ ವಿರುದ್ಧ ಸ್ಪರ್ಧಿಸಲು ಸಾಧ್ಯ. ಇಲ್ಲವಾದರೆ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಯೊಳಗೆ ಪೆನ್ನಿ ಮೊರ್ಡಂಟ್ ಸಂಸದರ ಬೆಂಬಲವನ್ನು ಪ್ರಸ್ತುತ ಪಡಿಸಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ಅದು ಅಸಾಧ್ಯವೆಂಬಂತೆ ಭಾಸವಾಗುತ್ತಿದೆ. ರಿಷಿ ಸುನಕ್ ಈಗಾಗಲೇ 142 ಸಂಸದರ ಬೆಂಬಲ ಹೊಂದಿದ್ದಾರೆ ಎನ್ನಲಾಗಿದೆ.
"ನಮ್ಮ ದೇಶದ ಆರ್ಥಿಕತೆಯನ್ನು ಸರಿಪಡಿಸಬೇಕು. ನಮ್ಮ ಪಕ್ಷವನ್ನು ಒಗ್ಗೂಡಿಸಬೇಕು ಮತ್ತು ದೇಶವನ್ನು ಮತ್ತೆ ಸದೃಢವಾಗಿ ನಿಲ್ಲಿಸಬೇಕು," ಎಂದು ರಿಷಿ ಸುನಕ್ ಹೇಳಿದ್ದಾರೆ. ಇತ್ತೀಚೆಗಷ್ಟೇ ನಡೆದಿದ್ದ ಚುನಾವಣೆಯಲ್ಲಿ ಲಿಜ್ ಟ್ರಸ್ ಎದುರು ರಿಷಿ ಸುನಕ್ ಸೋಲನ್ನಪ್ಪಿದ್ದರು. ಮೊದಲ ಕೆಲ ಸುತ್ತುಗಳಲ್ಲಿ ರಿಷಿ ಸುನಕ್ ಗೆಲುವು ನಿಶ್ಚಿತ ಎಂಬಂತಿದ್ದರೂ ಅಂತಿಮ ಹಂತದಲ್ಲಿ ಟ್ರಸ್ ಮೇಲುಗೈ ಸಾಧಿಸಿದ್ದರು.
ಬ್ರಿಟನ್‌ನ ನೂತನ ಪ್ರಧಾನಿ ಹುದ್ದೆಗೆ 2ನೇ ಬಾರಿ ತಾವು ಸ್ಪರ್ಧಿಸುವುದಾಗಿ ಭಾರತೀಯ ಮೂಲದ ರಿಷಿ ಸುನಕ್ (42) ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಅ.28ರಂದು ನಡೆಯಲಿರುವ ಚುನಾವಣೆಗೆ ಚಾಲನೆ ಸಿಕ್ಕಂತೆ ಆಗಿದೆ. 357 ಸದಸ್ಯ ಬಲದ ಕನ್ಸರ್ವೇಟಿವ್ ಪಕ್ಷದಲ್ಲಿ ರಿಷಿಗೆ 128 ಸದಸ್ಯರ ಬೆಂಬಲ ಇದೆ ಎನ್ನಲಾಗಿದೆ. ಅವರ ನಿಕಟ ಪ್ರತಿಸ್ಪರ್ಧಿ ಎನ್ನಲಾಗುತ್ತಿರುವ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡಾ ತಮಗೆ 100ಕ್ಕಿಂತ ಹೆಚ್ಚು ಸದಸ್ಯರ ಬೆಂಬಲ ಇದೆ ಎಂದಿದ್ದಾರೆ. ಇನ್ನೊಂದೆಡೆ ಸಂಸತ್‌ನಲ್ಲಿ ಪಕ್ಷದ ನಾಯಕಿ ಪೆನ್ನಿ ಮೋರ್ಡಂಟ್ ಕೂಡಾ ಕಣಕ್ಕೆ ಇಳಿಯುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ತ್ರಿಪಕ್ಷೀಯ ಕದನ ನಡೆಯುವ ಸಾಧ್ಯತೆ ಕಂಡುಬಂದಿದೆ.
ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ರಿಷಿ, ‘ಯುನೈಟೆಡ್ ಕಿಂಗ್‌ಡಮ್ ಒಂದು ಅದ್ಭುತ ದೇಶ, ಆದರೆ ನಾವೀಗ ಆಳವಾದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಅದಕ್ಕಾಗಿಯೇ ನಾನು ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ನಿಮ್ಮ ಮುಂದಿನ ಪ್ರಧಾನಿಯಾಗಲು ಸ್ಪರ್ಧಿಸುತ್ತಿದ್ದೇನೆ. ನಾನು ಈ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಹುಡುಕಲು ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸಿದ್ದೇನೆ. ಕೋವಿಡ್ ಸಂಕಷ್ಟಸಮಯದಲ್ಲೂ ನಾನು ದೇಶದ ಆರ್ಥಿಕತೆಯನ್ನು ಮುನ್ನಡೆಸಲು ನೆರವಾಗಿದ್ದೇನೆ. ಆದರೆ ಇದೀಗ ನಾವು ಎದುರಿಸುತ್ತಿರುವ ಸಂಕಷ್ಟಇನ್ನಷ್ಟುದೊಡ್ಡದು. ಆದರೆ ನಮ್ಮ ಮುಂದಿನ ಅವಕಾಶದಲ್ಲಿ ಸೂಕ್ತ ಆಯ್ಕೆ ಮಾಡಿದರೆ, ನಾನು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡುತ್ತೇನೆ’ ಎಂದು ಘೋಷಿಸಿದ್ದಾರೆ.
ಸೂರ್ಯ ಮುಳುಗದ ನಾಡಿನಲ್ಲಿ ಕತ್ತಲು, 7 ವರ್ಷದಲ್ಲಿ 6ನೇ ಪ್ರಧಾನಿ ಆಯ್ಕೆಗೆ ಸಜ್ಜು!
ಡೀಲ್ ಇಲ್ಲ:
ಈ ನಡುವೆ ಅಧಿಕಾರ ಹಂಚಿಕೆ ಕುರಿತಂತೆ ಬೋರಿಸ್ ಜಾನ್ಸನ್ ಮತ್ತು ರಿಷಿ ಸುನಕ್ ನಡುವೆ ಒಪ್ಪಂದ ಆಗಿದೆ ಎಂಬ ವರದಿಗಳನ್ನು ಉಭಯ ಬಣಗಳು ತಳ್ಳಿಹಾಕಿವೆ.
ಮುಂದಿನ ಹಂತ ಏನೇನು?
ಇಂದು(ಸೋಮವಾರ) ಮಧ್ಯಾಹ್ನ 2 ಗಂಟೆಯವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುನ್ನ ಯಾವುದೇ ಓರ್ವ ಅಭ್ಯರ್ಥಿ ತನಗೆ 156ಕ್ಕಿಂತ ಹೆಚ್ಚಿನ ಸದಸ್ಯರ ಬೆಂಬಲ ಸಾಬೀತುಪಡಿಸಿದರೆ, ಆ ಅಭ್ಯರ್ಥಿ ಜೊತೆಗೆ ಇನ್ನೋರ್ವ ವ್ಯಕ್ತಿಗೆ ಮಾತ್ರ ಕಣಕ್ಕೆ ಇಳಿಯಲು ಅವಕಾಶ ಸಿಗಲಿದೆ. ಕಾರಣ 357 ಸದಸ್ಯರ ಪೈಕಿ ಒಬ್ಬರಿಗೆ 156 ಮತ ಸಿಕ್ಕಿದರೆ ಇನ್ನು ಇಬ್ಬರು ತಲಾ 100 ಸದಸ್ಯರ ಬೆಂಬಲ ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ 100 ಮತ ಪಡೆದ ಇನ್ನೋರ್ವ ವ್ಯಕ್ತಿಗೆ ಮಾತ್ರ ಅವಕಾಶ ಸಿಗಲಿದೆ.
ಒಂದು ವೇಳೆ ಯಾರೂ 156ಕ್ಕಿಂತ ಹೆಚ್ಚಿನ ಮತ ಪಡೆಯದೇ ಇದ್ದರೆ ಕನಿಷ್ಠ 3 ಜನರಿಗೆ ಕಣಕ್ಕೆ ಇಳಿಯಲು ಅವಕಾಶ ಸಿಗಲಿದೆ. ಅಂದರೆ ರಿಷಿ ಜೊತೆ ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೋರ್ಡಂಟ್ ಕಣಕ್ಕೆ ಇಳಿಯಬಹುದು. ಈ ಮೂವರ ಪೈಕಿ ಇಬ್ಬರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲು ಪಕ್ಷದ 357 ಸಂಸದರು ಮತ ಚಲಾಯಿಸುತ್ತಾರೆ. ಹೆಚ್ಚಿನ ಮತ ಪಡೆದ ಇಬ್ಬರು ಅಂತಿಮ ಹಂತಕ್ಕೆ ಆಯ್ಕೆಯಾಗುತ್ತಾರೆ.
ಅಂತಿಮ ಹಂತಕ್ಕೆ ಆಯ್ಕೆಯಾದ ಇಬ್ಬರನ್ನು ಅ.28ರಂದು ಟೋರಿ ಪಕ್ಷದ 1.70 ಲಕ್ಷ ನೊಂದಾಯಿತ ಮತದಾರರು ಆನ್‌ಲೈನ್ ಮತಚಲಾವಣೆ ಮೂಲಕ ಆಯ್ಕೆ ಮಾಡುತ್ತದೆ. ಆಯ್ಕೆಯಾದವರು ಕನ್ಸರ್ವೇಟಿವ್ ಪಕ್ಷದ ನೂತನ ಮತ್ತು ದೇಶದ ಹೊಸ ಪ್ರಧಾನಿಯಾಗುತ್ತಾರೆ.
