ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಉಕ್ರೇನ್ ಯುದ್ಧ ಕೊನೆಗಾಣಿಸುವ ಕುರಿತು ದೂರವಾಣಿ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟ್ರಂಪ್‌ ಅವರು ಉಕ್ರೇನ್ ಯುದ್ಧ ಕೊನೆಗಾಣಿಸುವ ವಿಷಯವನ್ನೂ ಪುಟಿನ್‌ ಜತೆ ಪ್ರಸ್ತಾಪಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ಆದರೆ, ಪುಟಿನ್‌ ಹಾಗೂ ಟ್ರಂಪ್‌ ನಡುವೆ ಮಾತುಕತೆಯೇ ನಡೆದಿಲ್ಲ ಎಂದು ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್‌ನ ವಕ್ತಾರರು ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಅಮೆರಿಕ ಚುನಾವಣೆಯಲ್ಲಿ ಗೆದ್ದ ಬಳಿಕ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 70 ವಿಶ್ವ ನಾಯಕರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಅಂತೆಯೇ ಪುಟಿನ್‌ ಅವರಿಗೂ ಕರೆ ಮಾಡಿದ್ದರು. ಈ ವೇಳೆ ಇಬ್ಬರೂ ನಾಯಕರು ಐರೋಪ್ಯ ಖಂಡದಲ್ಲಿ ಶಾಂತಿ ಸ್ಥಾಪನೆ ಬಗ್ಗೆ ಚರ್ಚೆ ಮಾಡಿದರು. ಉಕ್ರೇನ್‌ ಸಮರಕ್ಕೆ ಪರಿಹಾರ ಹುಡುಕುವ ಕುರಿತು ಮತ್ತೊಮ್ಮೆ ಮಾತುಕತೆ ನಡೆಸುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆ : ‘ಸೆಕ್ಸ್‌ ಸಚಿವಾಲಯ’ ಸ್ಥಾಪನೆಗೆ ಪುಟಿನ್‌ ಸರ್ಕಾರ ಚಿಂತನೆ!

ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಟ್ರಂಪ್‌ ಅವರು ಉಕ್ರೇನ್‌ ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಯುರೋಪ್‌ನಲ್ಲಿ ಅಮೆರಿಕ ಗಮನಾರ್ಹ ಪ್ರಮಾಣದಲ್ಲಿ ಸೇನಾ ಬಲ ಹೊಂದಿದೆ. ಹೀಗಾಗಿ ಯುದ್ಧವನ್ನು ತೀವ್ರಗೊಳಿಸಬಾರದು ಎಂದು ರಷ್ಯಾ ಅಧ್ಯಕ್ಷರಿಗೆ ಪುಟಿನ್‌ ಸಲಹೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇಬ್ಬರ ನಡುವಣ ಮಾತುಕತೆಯನ್ನೇ ರಷ್ಯಾ ನಿರಾಕರಿಸಿದೆ.

ಇದನ್ನೂ ಓದಿ: ಕಮಲಾ ಹ್ಯಾರಿಸ್ ಮೊದಲ ಅಮೆರಿಕಾ ಅಧ್ಯಕ್ಷೆ ಆಗ್ತಾರೆ ಎಂದಿದ್ದ ಜ್ಯೋತಿಷಿಗೆ ಏನಾಯ್ತು?