ಕಮಲಾ ಹ್ಯಾರಿಸ್ ಮೊದಲ ಅಮೆರಿಕಾ ಅಧ್ಯಕ್ಷೆ ಆಗ್ತಾರೆ ಎಂದಿದ್ದ ಜ್ಯೋತಿಷಿಗೆ ಏನಾಯ್ತು?
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿ ಪ್ರತೋಷ್ ಗೋಪಾಲಕೃಷ್ಣನ್, ಫಲಿತಾಂಶ ಉಲ್ಟಾ ಆಗುತ್ತಿದ್ದಂತೆ ಟ್ರೋಲ್‌ಗೆ ಒಳಗಾಗಿದ್ದಾರೆ. ಟೀಕೆಗಳ ನಡುವೆ, ಇನ್ನು ಮುಂದೆ ದೇವರ ಸೂಚನೆ ಬರುವವರೆಗೂ ಭವಿಷ್ಯ ನುಡಿಯುವುದಿಲ್ಲ ಎಂದು ಘೋಷಿಸಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ. ಅಮೆರಿಕಾ ಪ್ರಜೆಗಳೆಲ್ಲಾ ಮತದಾನ ಹಾಕಿದ್ದು, ಮತ ಎಣಿಕೆಯೂ ನಡೆದಿದೆ. ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಬಹುತೇಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಹೀಗಿರುವಾಗ ಅಮೆರಿಕಾದ ಚುನಾವಣೆಯಲ್ಲಿ ಅಮೆರಿಕಾ ಅಧ್ಯಕ್ಷರು ಯಾರಾಗ್ತಾರೆ ಎಂಬ ಬಗ್ಗೆ ಜಗತ್ತಿನ ಹಲವು ಪ್ರದೇಶದ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಅದರಂತೆ ಪ್ರತೋಷ್ ಗೋಪಾಲಕೃಷ್ಣನ್ ಎಂಬ ಭಾರತೀಯ ಜ್ಯೋತಿಷಿ ಕೂಡ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆ ಭವಿಷ್ಯ ನುಡಿಯುತ್ತಾ ಕಮಲಾ ಹ್ಯಾರಿಸ್ ಗೆದ್ದು ಬರುತ್ತಾರೆ ಎಂದಿದ್ದರು. ಆದರೆ ಅವರ ಈ ಭವಿಷ್ಯ ಉಲ್ಟಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ತೀವ್ರ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ತಾವು ಟ್ರೋಲ್ ಆಗುತ್ತಿದ್ದಂತೆ ಈಗ ಜ್ಯೋತಿಷಿ ಪ್ರತೋಷ್ ಗೋಪಾಲಕೃಷ್ಣ ಹೊಸದೊಂದು ಘೋಷಣೆ ಮಾಡಿದ್ದಾರೆ.
ನವಂಬರ್ 5,2004ರಂದು ಕಮಲ ಐಯ್ಯರ್ ಹ್ಯಾರಿಸ್ ಅವರು ಅಮೆರಿಕಾದ ಮೊದಲ ಬ್ರಾಹ್ಮಣ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಾರೆ.ನನ್ನ ಆಳವಾದ ಜ್ಯೋತಿಷ್ಯ ವಿಶ್ಲೇಷಣೆಯಿಂದ ನಿಖರವಾಗಿ 306 ಸ್ಥಾನಗಳೊಂದಿಗೆ ಕಮಲಾ ಅಯ್ಯರ್ ಹ್ಯಾರಿಸ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಇನ್ನು 38 ದಿನಗಳಲ್ಲಿ ಅವರು ಇತಿಹಾಸ ನಿರ್ಮಿಸಲಿದ್ದು, ರಾಹುವಿನ ಮಾಂತ್ರಿಕ ಶಕ್ತಿಯನ್ನು ತಡೆಯಲಾಗದು ಎಂದು ಸೆಪ್ಟೆಂಬರ್ 29ರಂದು ಜ್ಯೋತಿಷಿ ಪ್ರತೋಷ್ ಗೋಪಾಲಕೃಷ್ಣ ಅವರು ಭವಿಷ್ಯ ನುಡಿದಿದ್ದರು.
ಆದರೆ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಮತ್ತೆ ಅಮೆರಿಕಾದ ಶ್ವೇತಭವನವನ್ನು ಪ್ರವೇಶಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. 78 ವರ್ಷದ ಟ್ರಂಪ್ 294 ಸೀಟುಗಳನ್ನು ಗೆಲ್ಲುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಜ್ಯೋತಿಷಿ ಪ್ರತೋಷ್ ಅವರು ಕಮಲಾ ಹ್ಯಾರಿಸ್ ಗೆಲುವು ಸಾಧಿಸುತ್ತಾರೆ ಎಂದಿದ್ದರು.
ಹೀಗಾಗಿ ಜ್ಯೋತಿಷಿ ಪ್ರತೋಷ್ ಅವರ ಪೋಸ್ಟ್ ವೈರಲ್ ಆಗಿದ್ದಲ್ಲದೇ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಸೇರಿದಂತೆ ಅನೇಕರು ಜ್ಯೋತಿಷಿ ಪ್ರತೋಷ್ ಅವರನ್ನು ಅವರ ಅಸಮರ್ಪಕ ಭವಿಷ್ಯಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜನರ ಟೀಕೆಗೆ ಉತ್ತರಿಸಿದ ಈ ಜ್ಯೋತಿಷಿ ಪ್ರತೋಷ್ ತಾನು ಇನ್ನು ಮುಂದೆ ದೇವರಿಂದ ಸೂಚನೆ ಬರುವವರೆಗೂ ಭವಿಷ್ಯ ಹೇಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀಕೃಷ್ಣನ ಆಶೀರ್ವಾದ, ನಿಮ್ಮೆಲ್ಲ ಟೀಕೆ ಟಿಪ್ಪಣಿಗಳನ್ನು ವಿನಯಯುತವಾಗಿ ಸ್ವೀಕರಿಸುವೆ. ನನ್ನ ಕೋರ್ಸನ್ನು ಸರಿಪಡಿಸಿಕೊಳ್ಳುವೆ ಹಾಗೂ ಧನಾತ್ಮಕವಾಗಿ ಸುಧಾರಿಸಿಕೊಳ್ಳುವೆ. ಭವಿಷ್ಯ ಹೇಳುವುದು ಬಹಳ ಕಷ್ಟದ ಕೆಲಸ, ಇದು ತಪ್ಪಾಗಿದೆ. ಎಲ್ಲವೂ ಹರೇಕೃಷ್ಣ ಆಶೀರ್ವಾದ. ಶ್ರೀಕೃಷ್ಣ ಇಚ್ಛಿಸುವವರೆಗೂ ಯಾವುದೇ ರಾಜಕೀಯ ಭವಿಷ್ಯ ಅಥವಾ ಯಾವುದೇ ಲೌಕಿಕ ಭವಿಷ್ಯ ಹೇಳುವುದಿಲ್ಲ, ಸರ್ವಂ ಕೃಷ್ಣಾರ್ಪಣಮಸ್ತು ಎಂದು ಬರೆದಿದ್ದಾರೆ. ಪ್ರತೋಷ್ ಗೋಪಾಲಕೃಷ್ಣನ್ ಅವರು ನಿಯಮಿತವಾಗಿ ನಿಖರವಾಗಿರುವ ಭವಿಷ್ಯವನ್ನು ಹೇಳುವ ಮೂಲಕ ಹೆಸರಾಗಿದ್ದು, ಇದೇ ಕಾರಣಕ್ಕೆ ಮಾಧ್ಯಮಗಳ ಆಸ್ಟ್ರಾಲಾಜಿ ಕಾರ್ಯಕ್ರಮಕ್ಕೆ ಅವರನ್ನು ಆಗಾಗ ಆಹ್ವಾನಿಸಲಾಗುತ್ತದೆ.