ಕೋವಿ​ಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆ​ದಿ​ದ್ದರೂ ಭಾರ​ತ​ದಿಂದ ಆಗ​ಮಿ​ಸುವ ಪ್ರಯಾ​ಣಿ​ಕರು 10 ದಿನ ಕ್ವಾರಂಟೈನ್‌  ಕ್ವಾರಂಟೈನ್‌ ಆಗ​ಬೇಕು ಎಂಬ ನಿಯಮ ಜಾರಿ​ಗೊ​ಳಿ​ಸಿ​ದ್ದ ಬ್ರಿಟನ್‌, ಗುರು​ವಾರ ರಾತ್ರಿ ತನ್ನ ನಿರ್ಧಾರ ಹಿಂಪ​ಡೆ​ದಿದೆ.

ಲಂಡನ್‌ (ಅ.08): ಕೋವಿ​ಶೀಲ್ಡ್‌ (Covishield) ಲಸಿಕೆಯ ಎರಡೂ ಡೋಸ್‌ ಪಡೆ​ದಿ​ದ್ದರೂ ಭಾರ​ತ​ದಿಂದ (India) ಆಗ​ಮಿ​ಸುವ ಪ್ರಯಾ​ಣಿ​ಕರು 10 ದಿನ ಕ್ವಾರಂಟೈನ್‌ ಆಗ​ಬೇಕು ಎಂಬ ನಿಯಮ ಜಾರಿ​ಗೊ​ಳಿ​ಸಿ​ದ್ದ ಬ್ರಿಟನ್‌ (Britain), ಗುರು​ವಾರ ರಾತ್ರಿ ತನ್ನ ನಿರ್ಧಾರ ಹಿಂಪ​ಡೆ​ದಿದೆ.

ಲಸಿಕೆ ಪಡೆದ ಬ್ರಿಟನ್‌ ಪ್ರಜೆ​ಗ​ಳಿಗೂ ಭಾರತ ನಿರ್ಬಂಧ ಹೇರಿ​ದ್ದ​ರಿಂದ ಬೆದ​ರಿದ ಬ್ರಿಟನ್‌, ‘ಕೋವಿ​ಶೀಲ್ಡ್‌ ಹಾಗೂ ಬ್ರಿಟನ್‌ ಮಾನ್ಯತೆ ಹೊಂದಿ​ರುವ ಯಾವುದೇ ಲಸಿಕೆ ಪಡೆದು ಭಾರ​ತ​ದಿಂದ ಆಗ​ಮಿ​ಸುವ ಪ್ರಯಾ​ಣಿ​ಕರಿಗೆ ಇನ್ನು ಕ್ವಾರಂಟೈನ್‌ ನಿಯಮ (Quarantine Rules ) ಅನ್ವ​ಯಿ​ಸು​ವು​ದಿ​ಲ್ಲ’ ಎಂದು ಘೋಷಿ​ಸಿ​ದೆ.

ಭಾರತದ ಎಚ್ಚರಿಕೆಗೆ ಬೆಚ್ಚಿ ಬಿದ್ದ ಬ್ರಿಟನ್: ಕ್ವಾರಂಟೈನ್‌ ನೀತಿ ಬದಲು!

ಅಕ್ಟೋಬರ್‌ 11ರಿಂದಲೇ ಪರಿಷ್ಕೃತ ನಿಯಮ ಜಾರಿಗೆ ಬರಲಿದೆ. ಈ ಪ್ರಕಾರ ಕೋವಿಶೀಲ್ಡ್‌ ಲಸಿಕೆ ಹಾಗೂ ಬ್ರಿಟನ್‌ ಅನು​ಮೋ​ದಿತ ಲಸಿ​ಕೆ​ಯ ಎರಡೂ ಡೋಸ್‌ಗಳನ್ನು ಪಡೆದು ಬ್ರಿಟನ್‌ಗೆ ಬರುವ ಭಾರತ, ಪಾಕಿ​ಸ್ತಾನ (Pakistan) ಸೇರಿ​ದಂತೆ 37 ದೇಶ​ಗಳ ಜನ​ರು ಇನ್ನು ಕ್ವಾರಂಟೈ​ನ್‌ಗೆ ಒಳ​ಪ​ಡದೇ ಬ್ರಿಟ​ನ್‌​ನಲ್ಲಿ ಸಂಚ​ರಿ​ಸ​ಬ​ಹು​ದಾ​ಗಿದೆ ಎಂದು ಬ್ರಿಟನ್‌ ಸರ್ಕಾರ ತಿಳಿ​ಸಿ​ದೆ. ಆದರೆ ಅ.11ಕ್ಕಿಂತ ಮೊದಲು ಬರುವ ಪ್ರವಾ​ಸಿ​ಗ​ರಿಗೆ ಕ್ವಾರಂಟೈನ್‌ ಅನ್ವ​ಯ​ವಾ​ಗ​ಲಿ​ದೆ.

ಲಸಿಕೆ ಪಡೆದರೂ ಬ್ರಿಟನ್‌ಗೆ ಹೋಗೋ ಭಾರತೀಯರಿಗೆ ಸಂಕಷ್ಟ!

ಈ ಹಿಂದೆ ಭಾರತದ ಕೊರೋನಾ ಲಸಿಕೆ (Covid vaccine) ಪ್ರಮಾಣಪತ್ರದ ಬಗ್ಗೆ ಬ್ರಿಟನ್‌ ಸರ್ಕಾರ ತಕರಾರು ತೆಗೆದಿತ್ತು. ಅಲ್ಲದೆ ಕೋವಿಶೀಲ್ಡ್‌ ಲಸಿಕೆಯ 2 ಡೋಸ್‌ಗಳನ್ನು ಪಡೆದ ಹೊರತಾಗಿಯೂ, ಬ್ರಿಟನ್‌ ಪ್ರವಾಸ ಕೈಗೊಂಡ ಭಾರತೀಯರನ್ನು ಅಲ್ಲಿ 10 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಈ ನಿಯಮವನ್ನು ಹಿಂಪಡೆಯುವಂತೆ ಬ್ರಿಟನ್‌ಗೆ ಭಾರತ ಸರ್ಕಾರ ಕೋರಿಕೊಂಡಿತ್ತು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಲಸಿಕೆ ಪಡೆದು ಭಾರತಕ್ಕೆ ಬರುವ ಆ ದೇಶದ ಪ್ರಜೆಗಳಿಗೆ 10 ದಿನ ಕ್ವಾರಂಟೈನ್‌ ವಿಧಿಸುವ ನಿಯಮವನ್ನು ಭಾರತ ಸರ್ಕಾರ ಜಾರಿಗೆ ತಂದು ಸಡ್ಡು ಹೊಡೆ​ದಿ​ತ್ತು. ಅಲ್ಲದೆ ಅವರು ಕೊರೋನಾ ನೆಗೆಟಿವ್‌ (Covid Negetive) ಪ್ರಮಾಣಪತ್ರ ತಂದಿದ್ದರೂ, ಅವರು ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿತ್ತು.

ಭಾರತವೂ ಸಡ್ಡು ಹೊಡೆದಿತ್ತು 

 ಭಾರತದ ಕೋವಿಶೀಲ್ಡ್‌ ಲಸಿಕೆ ಮತ್ತು ಲಸಿಕೆ ಪಡೆದವರಿಗೆ ನೀಡುವ ಪ್ರಮಾಣದ ಪತ್ರದ ಬಗ್ಗೆ ಕ್ಯಾತೆ ತೆಗೆದಿದ್ದ ಬ್ರಿಟನ್‌ಗೆ(Britain) ಇದೀಗ ಭಾರತವೂ ಸಡ್ಡು ಹೊಡೆದಿದೆ. ಲಸಿಕೆ(Vaccine) ಪಡೆದ ಹೊರತಾಗಿಯೂ ತನ್ನ ದೇಶಕ್ಕೆ ಆಗಮಿಸುವ ಭಾರತೀಯರಿಗೆ ಬ್ರಿಟನ್‌ ಸರ್ಕಾರ(Britain Govt) ಯಾವ್ಯಾವ ನಿರ್ಬಂಧಗಳನ್ನು ಹೇರಿತ್ತೋ, ಅದೇ ನಿರ್ಬಂಧಗಳನ್ನು ಇದೀಗ ಭಾರತವೂ ಬ್ರಿಟನ್‌(Britain) ನಾಗರಿಕರ ಮೇಲೆ ಹೇರಿದೆ.

ಹೀಗಾಗಿ ಅ.4ರಿಂದ ಬ್ರಿಟನ್‌ನಿಂದ ಭಾರತಕ್ಕೆ(India) ಬರುವ ಯಾವುದೇ ವ್ಯಕ್ತಿಗಳು, ಯಾವುದೇ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದರೂ, 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು. ಜೊತೆಗೆ ಭಾರತಕ್ಕೆ ಆಗಮಿಸುವ 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ಅದರಲ್ಲಿ ನೆಗೆಟಿವ್‌ ವರದಿ ಪಡೆದಿರಬೇಕು. ಅಲ್ಲದೇ ಭಾರತಕ್ಕೆ ಬಂದ ತಕ್ಷಣ ಮತ್ತು ಬಂದ 8 ದಿನದ ಬಳಿಕ ಮತ್ತೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.