ಲಂಡನ್‌ (ಜ.10): ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೇಘನ್‌ ದಂಪತಿ ರಾಜ ಪ್ರಭುತ್ವದ ಹಿರಿಯ ಸದಸ್ಯತ್ವ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಪ್ರಕಟಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. 

ಇನ್ನು ಮುಂದೆ ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೇಘನ್‌ ರಾಜ ಪ್ರಭುತ್ವದಿಂದ ಹೊರಬಂದು ಸ್ವತಂತ್ರವಾಗಿ ವಾಸಿಸಲಿದ್ದಾರೆ. ಅಲ್ಲದೇ ತಮ್ಮ ಮುಂದಿನ ಜೀವನವನ್ನು ಬ್ರಿಟನ್‌ ಮತ್ತು ಅಮೆರಿಕದಲ್ಲಿ ಕಳೆಯುವ ಬಗ್ಗೆಯೂ ಸುಳಿವು ನೀಡಿದ್ದಾರೆ. 

ಆದರೆ, ರಾಜ ಪ್ರಭುತ್ವ ಹುದ್ದೆಯಿಂದ ಹೊರ ಬರುವುದಕ್ಕೂ ಮುನ್ನ ಪ್ರಿನ್ಸ್‌ ಮತ್ತು ಮೇಘನ್‌ ದಂಪತಿ ರಾಣಿ ಎಲಿಜಬೆತ್‌-2 ಅವರೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ. ಹೀಗಾಗಿ ಬ್ರಿಟನ್‌ ರಾಜಕುಟುಂಬದಲ್ಲಿ ಮನಸ್ಥಾಪ ಉಂಟಾಗಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ. 

ಕಚ್ಚದಿದ್ರೆ ಚುಂಬಿಸುವೆ: ಪವಿತ್ರ ಚುಂಬನ ಕೋರಿದ ಸನ್ಯಾಸಿನಿಗೆ ಪೋಪ್‌ ಹಾಸ್ಯ!..

ರಾಜಪ್ರಭುತ್ವವನ್ನು ತ್ಯಜಿಸಿದ ಹೊರತಾಗಿಯೂ ರಾಜಕುಮಾರ ಹ್ಯಾರಿ ಆನುವಂಶಿಕವಾಗಿ 91 ಕೋಟಿ ರು. ಆಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ ರಾಜಕುಟುಂಬದಿಂದ ಆನುವಂಶಿಕವಾಗಿ ದೊರೆಯಲಿರುವ ಇತರ ಎಲ್ಲಾ ಸೌಲಭ್ಯಗಳೂ ಲಭಿಸಲಿವೆ. ಜೊತೆಗೆ ಅವರ ಭದ್ರತೆಗೆ ಸಂಬಂಧ ಖರ್ಚು ವೆಚ್ಚಗಳನ್ನು ರಾಜಕುಟುಂಬವೇ ಭರಿಸಲಿದೆ.