* ಫೇಸ್‌ಬುಕ್‌ನಲ್ಲಿ ಪ್ರಚೋದಕ ಪೋಸ್ಟ್‌ ಹಾಕಿದ್ದು ನಾನೇ: ಮಂಡಲ್‌* ಧ್ವನಿವರ್ಧಕದಲ್ಲಿ ಜನರನ್ನು ರೊಚ್ಚಿಗೆಬ್ಬಿಸಿದ್ದು ನಾನು: ಮೌಲ್ವಿ* ಮ್ಯಾಜಿಸ್ಪ್ರೇಟರ ಮುಂದೆ ಇಬ್ಬರಿಂದಲೂ ತಪ್ಪೊಪ್ಪಿಗೆ* ಬಾಂಗ್ಲಾ ಹಿಂದೂಗಳ ಮೇಲೆ ದಾಳಿ: ರೂವಾರಿಗಳ ತಪ್ಪೊಪ್ಪಿಗೆ

ಢಾಕಾ(ಅ.26): ಇತ್ತೀಚೆಗೆ ಬಾಂಗ್ಲಾದೇಶದಲ್ಲಿ(Bangladesh) ನಡೆದ ಹಿಂದೂ ದೇವಾಲಯಗಳು(Temple) ಹಾಗೂ ಹಿಂದೂಗಳ(Hindus) ಮೇಲಿನ ದಾಳಿಗೆ ಸಂಬಂಧಿಸಿದ ಪ್ರಮುಖ ಆರೋಪಿಗಳಿಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾವೇ ಹಿಂಸೆಗೆ ಪ್ರಚೋದಿಸಿದವರು ಎಂದು ಮ್ಯಾಜಿಸ್ಪ್ರೇಟರ ಮುಂದೆ ಹೇಳಿಕೆ ನೀಡಿದ್ದಾರೆ.

ಶೈಕಾತ್‌ ಮಂಡಲ್‌(Shaikat Mandal) ಎಂಬ ತತ್ವಶಾಸ್ತ್ರದ ವಿದ್ಯಾರ್ಥಿ ಹಾಗೂ ಆತನ ಸಹವರ್ತಿ ರಬೀವುಲ್‌ ಇಸ್ಲಾಂ ಎಂಬುವರೇ ಮ್ಯಾಜಿಸ್ಪ್ರೇಟರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದವರು.

ಫೇಸ್‌ಬುಕ್‌ನಲ್ಲಿ(Facebook) ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಹುಚ್ಚಿನಿಂದ ನಾನು ಧರ್ಮನಿಂದನೆಯ ಅವಹೇಳನಕಾರಿ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ ಎಂದು ಪ್ರಮುಖ ಆರೋಪಿ ಮಂಡಲ್‌ ಹೇಳಿದ್ದಾನೆ.

ಇನ್ನು ಆತನ ಸಹವರ್ತಿಯಾದ ಮೌಲ್ವಿ ರಬೀವುಲ್‌ ಇಸ್ಲಾಂ ಕೂಡ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದು, ‘ಮುಸ್ಲಿಮರ ವಿರುದ್ಧ ಫೇಸ್‌ಬುಕ್‌ನಲ್ಲಿ ಹಿಂದೂಗಳು ಧರ್ಮನಿಂದನೆ ಪೋಸ್ಟ್‌ ಹಾಕಿದ್ದಾರೆ’ ಎಂದು ಮಸೀದಿಯ ಧ್ವನಿವರ್ಧಕದಲ್ಲಿ ಕೂಗಿದೆ’ ಎಂದು ಹೇಳಿದ್ದಾನೆ.

ಈ ಎರಡೂ ಪ್ರಚೋದಕ ಕೆಲಸಗಳಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.

ಈ ದಾಳಿಯಲ್ಲಿ ಅನೇಕ ಹಿಂದೂ ದೇಗುಲಗಳು ಧ್ವಂಸವಾಗಿದ್ದವು ಹಾಗೂ 6 ಹಿಂದೂಗಳು ಮೃತಪಟ್ಟಿದ್ದರು. 70ಕ್ಕೂ ಹೆಚ್ಚು ಹಿಂದೂಗಳ ಮನೆಗಳ ಮೇಲೆ ಒಂದು ಕೋಮಿನ ಉದ್ರಿಕ್ತರು ದಾಳಿ ನಡೆಸಿದ್ದರು. ಈ ದಾಳಿಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಮಂಡಲ್‌ ಹಾಗೂ ರಬೀವುಲ್‌ನನ್ನು ಬಂಧಿಸಲಾಗಿತ್ತು.