ಚೀನಾದಲ್ಲಿ, ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಸುಮಾರು 1.6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತುಣುಕುಗಳು ಪತ್ತೆಯಾಗಿವೆ. ಈ ಬಾತುಕೋಳಿಯು ಹತ್ತಿರದ ನದಿಯಲ್ಲಿ ಆಹಾರ ಹುಡುಕುವಾಗ ಚಿನ್ನದ ಕಣಗಳನ್ನು ನುಂಗಿರಬಹುದೆಂದು ಶಂಕಿಸಲಾಗಿದೆ. 

ಬೆಂಗಳೂರು (ಮಾ.6): ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಶ್ರೀಮಂತನಾಗುವ ದುರಾಸೆಯಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆಯನ್ನು ಸೀಳಿದ ಮಾಲೀಕನ ಕಥೆ ಕೇಳಿ ಪಾಠವನ್ನೂ ಕಲಿತಿದ್ದೇವೆ. ಆದರೆ ದೂರದ ಚೀನಾದಲ್ಲಿ ನಿಜವಾಗಿಯೂ ಅಂತಹದ್ದೊಂದು ಘಟನೆ ನಡೆದಿದೆ. ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಬರೋಬ್ಬರಿ 1.6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತುಣುಕುಗಳು ಪತ್ತೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ನಡೆದದ್ದು ಎಲ್ಲಿ?

ಚೀನಾದ ಹೂನಾನ್ ಪ್ರಾಂತ್ಯದ ಲಾಂಗ್‌ಹುಯಿ ಕೌಂಟಿಯಲ್ಲಿ ಈ ಕೌತುಕ ನಡೆದಿದೆ. ಅಲ್ಲಿನ ನಿವಾಸಿ ಲಿಯು ಎಂಬುವವರು ತಮ್ಮ ಮನೆಯಲ್ಲಿದ್ದ ಬಾತುಕೋಳಿಯನ್ನು ಮಾಂಸಕ್ಕಾಗಿ ಕತ್ತರಿಸಿ, ಅದನ್ನು ಕ್ಲೀನ್‌ ಮಾಡುತ್ತಿದ್ದವು. ಈ ವೇಳೆ ಬಾತುಕೋಳಿಯ ಹೊಟ್ಟೆಯೊಳಗೆ ಹೊಳೆಯುವ ವಸ್ತುಗಳು ಕಂಡುಬಂದವು. ಸಂಶಯಗೊಂಡ ಲಿಯು ಅದನ್ನು ಪರೀಕ್ಷಿಸಿದಾಗ, ಅವು ಅಪ್ಪಟ ಚಿನ್ನದ ತುಣುಕುಗಳು (Gold Nuggets) ಎಂಬುದು ಖಚಿತವಾಯಿತು. ಇವುಗಳ ಒಟ್ಟು ತೂಕ ಸುಮಾರು 10 ಗ್ರಾಂ ಇತ್ತು.

ಬಾತುಕೋಳಿ ಹೊಟ್ಟೆಗೆ ಚಿನ್ನ ಬಂದಿದ್ದು ಹೇಗೆ?

ಲಿಯು ಅವರ ಮನೆಯ ಬಳಿಯೇ ಚೆನ್‌ಶುಯಿ ಎಂಬ ನದಿ ಹರಿಯುತ್ತದೆ. 1970 ರಿಂದ 1990 ರ ದಶಕದವರೆಗೆ ಈ ನದಿಯು ಚಿನ್ನದ ನಿಕ್ಷೇಪಗಳಿಗೆ ಬಹಳ ಹೆಸರುವಾಸಿಯಾಗಿತ್ತು. ಲಿಯು ಸಾಕಿದ್ದ ಬಾತುಕೋಳಿಗಳು ಆಹಾರಕ್ಕಾಗಿ ನದಿಯ ದಡದಲ್ಲಿ ಮಣ್ಣನ್ನು ಕೆರೆಯುತ್ತಿದ್ದಾಗ, ಮಣ್ಣಿನಲ್ಲಿದ್ದ ಸಣ್ಣ ಚಿನ್ನದ ಕಣಗಳನ್ನು ಆಹಾರದೊಂದಿಗೆ ನುಂಗಿರಬಹುದು ಎಂದು ನಂಬಲಾಗಿದೆ.

ಹಳೆಯ ಕಾಲದಲ್ಲೂ ಇತ್ತು ಇಂತಹ ಪದ್ಧತಿ!

ಲಿಯು ಅವರ ಪ್ರಕಾರ, ಈ ಭಾಗದ ಹಳ್ಳಿಗರಿಗೆ ಈ ಹಿಂದೆಯೂ ಬಾತುಕೋಳಿಗಳ ಹೊಟ್ಟೆಯಲ್ಲಿ ಚಿನ್ನ ಸಿಕ್ಕಿದ ಉದಾಹರಣೆಗಳಿವೆ. ಕಳೆದ ವರ್ಷ ನದಿಯ ಮರಳನ್ನು ಪರೀಕ್ಷಿಸಿದಾಗಲೂ ಜನರಿಗೆ 10 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿತ್ತು. 6ನೇ ಶತಮಾನದ ಟ್ಯಾಂಗ್ ರಾಜವಂಶದ ಕಾಲದಲ್ಲೂ ಬಾತುಕೋಳಿ ಮತ್ತು ಹಂಸಗಳ ಮಲದಿಂದ ಚಿನ್ನದ ಕಣಗಳನ್ನು ಸಂಗ್ರಹಿಸುವ ಪದ್ಧತಿ ಇತ್ತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಚಿನ್ನದ ಮಾಲೀಕ ಯಾರು?

ಚೀನಾದ ಕಾನೂನಿನ ಪ್ರಕಾರ ಭೂಮಿಯ ಅಡಿಯಲ್ಲಿ ಸಿಗುವ ಯಾವುದೇ ಸಂಪನ್ಮೂಲ ಸರ್ಕಾರಕ್ಕೆ ಸೇರಿದ್ದು. ಆದರೆ ಪಕ್ಷಿಯ ಹೊಟ್ಟೆಯಲ್ಲಿ ಸಿಕ್ಕ ಚಿನ್ನದ ಮಾಲೀಕತ್ವ ಯಾರದ್ದು ಎಂಬುದು ಸದ್ಯಕ್ಕೆ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೂಡ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕಷ್ಟಕರ ಎಂದು ಅಭಿಪ್ರಾಯಪಟ್ಟಿದ್ದಾರೆ.