ಜಗತ್ತಿನ ಎದುರು ನಾವು ಏಕಾಂಗಿನಮ್ಮ ಹೋರಾಟವನ್ನು ನಾವೇ ಮಾಡಬೇಕು ಎಂದ ಉಕ್ರೇನ್ ಅಧ್ಯಕ್ಷಗುರುವಾರ ಮುಂಜಾನೆಯಿಂದ ಈವರೆಗೂ 137 ವ್ಯಕ್ತಿಗಳ ಸಾವು
ಕೈವ್ (ಫೆ.25): ಬಲಿಷ್ಠ ರಷ್ಯಾದ (Russia) ವಿರುದ್ಧ ಹೋರಾಟ ಮಾಡಿ ಎಂದು ನಮ್ಮನ್ನು ಏಕಾಂಗಿಯಾಗಿ ಬಿಡಲಾಗಿದೆ. ಸದ್ಯ ಜಗತ್ತಿನ ಮುಂದೆ ನಾವು ಏಕಾಂಗಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (President Volodymyr Zelensky) ಹೇಳಿದ್ದಾರೆ. ಗುರುವಾರ ತಡರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ನೀಡಿದ ವಿಡಿಯೋ (Video) ಭಾಷಣದಲ್ಲಿ ಝೆಲೆನ್ಸ್ಕಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ರಷ್ಯಾ ತನ್ನ ಆಕ್ರಮಣವನ್ನು ಆರಂಭಿಸಿದ ಈವರೆಗೂ ಉಕ್ರೇನ್ ನಲ್ಲಿ 137 ವ್ಯಕ್ತಿಗಳ ಸಾವಾಗಿದೆ. ಇದರಲ್ಲಿ ಸೈನಿಕರು ಹಾಗೂ ನಾಗರೀಕರೂ ಸೇರಿದ್ದಾರೆ. ರಷ್ಯಾ ನಮ್ಮ ಮೇಲೆ ಯುದ್ಧ ಸಾರಿದ ಬಳಿಕ ಜಗತ್ತು ನಮ್ಮನ್ನು ಏಕಾಂಗಿಯಾಗಿ ಹೋರಾಟಕ್ಕೆ ಬಿಟ್ಟಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಉಕ್ರೇನ್ ದೇಶವನ್ನು ಉಳಿಸಿಕೊಳ್ಳಲು ಯಾವ ಬೆಲೆಯನ್ನಾದರೂ ತೆರಲು ಸಿದ್ಧವಿದ್ದೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (joe biden), ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಕ್ರೇನ್ ನೆಲದಲ್ಲಿ ರಷ್ಯಾದ ಸೇನಾಪಡೆಗಳೊಂದಿಗೆ ಯುದ್ಧದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನ್ಯಾಟೋ ರಾಷ್ಟ್ರಗಳಲ್ಲಿ ತಮ್ಮ ಸೇನಾ ತುಕಡಿ ಇರಲಿದೆ ಎಂದು ತಿಳಿಸಿದ್ದಾರೆ.
"ನಮ್ಮ ರಾಜ್ಯವನ್ನು ರಕ್ಷಿಸಲು ನಾವು ಏಕಾಂಗಿಯಾಗಿದ್ದೇವೆ" ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಧ್ಯರಾತ್ರಿಯ ನಂತರ ರಾಷ್ಟ್ರವನ್ನು ಉದ್ದೇಶಿಸಿ ವೀಡಿಯೊ ಭಾಷಣದಲ್ಲಿ ಹೇಳಿದರು. "ನಮ್ಮೊಂದಿಗೆ ಹೋರಾಡಲು ಯಾರು ಸಿದ್ಧರಾಗಿದ್ದಾರೆ? ಸದ್ಯದ ಮಟ್ಟಿಗೆ ನನಗೆ ಯಾರೂ ಕಾಣುತ್ತಿಲ್ಲ. ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವದ ಗ್ಯಾರಂಟಿ ನೀಡಲು ಯಾರು ಸಿದ್ಧರಾಗಿದ್ದಾರೆ? ಎಲ್ಲರೂ ನಮ್ಮ ಸ್ಥಿತಿ ಕಂಡು ಭಯಪಟ್ಟಿದ್ದಾರೆ" ಎಂದು ಅವರು ಹೇಳಿದರು.
ಗುರುವಾರ ಮುಂಜಾನೆ ದಾಳಿಯ ಪ್ರಾರಂಭದಿಂದ 137 ಉಕ್ರೇನಿಯನ್ನರು, ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಝೆಲೆನ್ಸ್ಕಿ ಮಾಹಿತಿ ನೀಡಿದರು. ಇನ್ನು 316 ಮಂದಿಗೆ ತೀವ್ರ ರೂಪದ ಗಾಯಗಳಾಗಿವೆ ಎಂದಿದ್ದಾರೆ. ರಷ್ಯಾದ "ವಿಧ್ವಂಸಕ ಗುಂಪುಗಳು" ರಾಜಧಾನಿ ಕೈವ್ ಅನ್ನು ಪ್ರವೇಶಿಸಿವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಲ್ಲದೆ, ನಗರದ ನಾಗರಿಕರು ಜಾಗರೂಕರಾಗಿರಲು ಮತ್ತು ಕರ್ಫ್ಯೂ ಅನ್ನು ಗಮನಿಸುವಂತೆ ಒತ್ತಾಯಿಸಿದರು.
Russia Ukraine Crisis: ನ್ಯಾಟೋ ಒಕ್ಕೂಟ ಎಂದರೇನು?: ನ್ಯಾಟೋ ಬಗ್ಗೆ ರಷ್ಯಾಕ್ಕೇಕೆ ಸಿಟ್ಟು?
ರಷ್ಯಾ ತಮ್ಮನ್ನು "ಟಾರ್ಗೆಟ್ ನಂಬರ್ ಒನ್" ಎಂದು ಗುರುತಿಸಿದರೂ ನಾನು ಮತ್ತು ನನ್ನ ಕುಟುಂಬ ಉಕ್ರೇನ್‌ನಲ್ಲಿಯೇ ಉಳಿದಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. "ಅವರು ರಾಷ್ಟ್ರದ ಮುಖ್ಯಸ್ಥರನ್ನು ಕೆಳಗಿಳಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸಿದ್ದಾರೆ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾ ಸೇನೆಗೆ ನಾನು ನಂ.1 ಟಾರ್ಗೆಟ್, ನನ್ನ ಕುಟುಂಬ ನಂ.2 ಟಾರ್ಗೆಟ್. ಹಾಗಿದ್ದರೂ ನಾನು ಉಕ್ರೇನ್ ಅನ್ನು ತೊರೆದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ ರಾಜ್ಯದ ಮೇಲೆ ನಡೆದ ಅತಿದೊಡ್ಡ ದಾಳಿಯಲ್ಲಿ ಉಕ್ರೇನ್ ರಾಜಧಾನಿ ಕೈವ್ ನತ್ತ ಸಾಗುತ್ತಿರುವ ರಷ್ಯಾದ ಆಕ್ರಮಣಕಾರರ ವಿರುದ್ಧ ತನ್ನ ಪಡೆಗಳು ಹೋರಾಡುತ್ತಿದ್ದಂತೆ ಝೆಲೆನ್ಸ್ಕಿ ಕೈವ್ ನಲ್ಲೇ ಉಳಿಯುವ ಪ್ರತಿಜ್ಞೆ ಮಾಡಿದ್ದಾರೆ. "ನಾನು ರಾಜಧಾನಿಯಲ್ಲಿ ಉಳಿಯುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ" ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಘೋಷಣೆಯ ನಂತರ ರಷ್ಯಾ ಗುರುವಾರ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ತನ್ನ ಆಕ್ರಮಣವನ್ನು ಪ್ರಾರಂಭಿಸಿತು. ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಿಂದಾಗಿ ಅಂದಾಜು 100,000 ಜನರು ಉಕ್ರೇನ್ ಅನ್ನು ತೊರೆದಿದ್ದಾರೆ.
Russia Ukraine Crisis: ಪುಟಿನ್ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?
ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ನಡೆಸಿದ ಶೆಲ್ ದಾಳಿಯನ್ನು ಖಂಡಿಸಿದ ವೊಲೊಡಿಮಿರ್ ಝೆಲೆನ್ಸ್ಕಿ, "ನಾವು ಇಂದು ಏನು ಕೇಳುತ್ತಿದ್ದೇವೆ? ಇದು ಕೇವಲ ರಾಕೆಟ್ ಸ್ಫೋಟಗಳು, ಯುದ್ಧಗಳು ಮತ್ತು ವಿಮಾನಗಳ ಘರ್ಜನೆ ಮಾತ್ರವಲ್ಲ. ಹೊಸ ಕಬ್ಬಿಣದ ಪರದೆಯನ್ನು ಕೆಳಗಿಳಿಸಿ ನಾಗರೀಕ ಜಗತ್ತಿನಿಂದ ರಷ್ಯಾವನ್ನು ಮುಚ್ಚುವ ಶಬ್ದವಾಗಿದೆ' ಎಂದು ಟೀಕಿಸಿದ್ದಾರೆ.
