ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ವಾಗ್ವಾದಕ್ಕೆ ತಮಗೆ ಆಸಕ್ತಿಯಿಲ್ಲ ಎಂದು ಪೋಪ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲಾಗಿದ್ದು, ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ವಿನಾಯಿತಿ ವಿಸ್ತರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಭಾರೀ ಏರಿಕೆ ಕಂಡಿದೆ.

ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್

ಅಂಗೋಲಾ: ಕ್ರೈಸ್ತರ ಪರಮೋಚ್ಚ ಗುರು ಪೋಪ್ ಲಿಯೋ14, ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇರಾನ್ ಯುದ್ಧದ ಬಗ್ಗೆ ವಾದ-ಪ್ರತಿವಾದಕ್ಕೆ ತೊಡಗುವುದಕ್ಕೆ ತಮಗೆ ಆಸಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಶಾಂತಿಯ ಸಂದೇಶ ಪ್ರಚಾರ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಪೋಪ್ ಮತ್ತು ಟ್ರಂಪ್ ನಡುವೆ ಭಾರೀ ವಾಕ್ಸಮರ ನಡೆದಿತ್ತು. ತಮ್ಮಿಂದಲೇ ಪೋಪ್ ಲಿಯೋ14 ಪೋಪ್ ಆಗಿ ಆಯ್ಕೆಯಾಗಿದ್ದಾರೆ ಎಂದು ಟ್ರಂಪ್ ದೂರಿದ್ದರು. ಶನಿವಾರ ಇದಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್, ನನ್ನ ಶಾಂತಿ ಸಂದೇಶವು ಟ್ರಂಪ್‌ರನ್ನು ಗುರಿಯಾಗಿಟ್ಟುಕೊಂಡಿಲ್ಲ. ಇದು ಸಾರ್ವತ್ರಿಕ ಸುವಾರ್ತೆಯ ಸಂದೇಶವಾಗಿದೆ. ಭೂಮಿಯಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳಿಗೆ ಅನ್ವಯವಾಗುತ್ತದೆ. ನಾನು ಟ್ರಂಪ್ ಅವರೊಂದಿಗೆ ವಿವಾದಕ್ಕೆ ತೊಡಗುತ್ತಿದ್ದೇನೆ ಎಂದು ಭಾವಿಸಲಾಗುತ್ತಿದೆ. ಆದರೆ ಆ ವಿಚಾರದಲ್ಲಿ ನನಗೆ ಆಸಕ್ತಿಯಲ್ಲ ಎಂದಿದ್ದಾರೆ.

ರಷ್ಯಾ ತೈಲ ಖರೀದಿಗೆ ಮತ್ತೆ ಒಂದು ತಿಂಗಳ ಅವಧಿ ವಿಸ್ತರಿಸಿದ ಅಮೆರಿಕ

ವಾಷಿಂಗ್ಟನ್: ರಷ್ಯಾದಿಂದ ಕಚ್ಚಾತೈಲ ಖರೀದಿಗೆ ನೀಡಿದ್ದವಿನಾಯಿತಿಯನ್ನು ಮತ್ತೆ ಒಂದು ತಿಂಗಳ ಕಾಲ ಅಮೆರಿಕ ವಿಸ್ತರಿಸಿದೆ. ಹೀಗಾಗಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಸೇರಿ ಹಲವು ದೇಶಗಳಿಗೆ ಲಾಭವಾಗಲಿದೆ. ಉಕ್ರೇನ್ ಮೇಲಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿ ಮಾಡದಂತೆ ಜಗತ್ತಿನ ಎಲ್ಲಾ ದೇಶಗಳ ಮೇಲೂ ಅಮೆರಿಕ ನಿರ್ಬಂಧ ಹೇರಿತ್ತು. ಆದರೆ ಇತ್ತೀಚಿನ ಅಮೆರಿಕ-ಇರಾನ್ ಯುದ್ಧಾರಂಭದ ಬಳಿಕ ಕಚ್ಚಾತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ನಿರ್ಬಂಧದಿಂದ 1 ತಿಂಗಳ ವಿನಾಯ್ತಿ ನೀಡಲಾಗಿತ್ತು. ಇದರಿಂದ ರಷ್ಯಾದ 14 ಕೋಟಿ ಬ್ಯಾರೆಲ್ ತೈಲ ಮಾರುಕಟ್ಟೆಗೆ ಲಭ್ಯವಾಗಿತ್ತು. ಈ ಗಡುವು ಇತ್ತೀಚೆಗೆ ಮುಗಿದಿದದು ಅದನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿತ್ತು. ಅದರ ಬೆನ್ನಲ್ಲೇ ಮತ್ತೆ ತನ್ನ ನಿರ್ಧಾರ ಬದಲಿಸಿಕೊಂಡಿರುವ ಅಮೆರಿಕ ಏ.17ರಿಂದ ಮೇ 16ರವರೆಗೂ ಮತ್ತೆ ವಿನಾಯ್ತಿ ನೀಡಲಾಗುವುದು ಎಂದು ಪ್ರಕಟಿಸಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.2 ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧ ರಿಸಿದೆ. ಹೀಗಾಗಿ ಇದುವರೆಗೆ ಮೂಲವೇತನದ ಶೇ.58ರಷ್ಟಿದ್ದ ತುಟ್ಟಿಭತ್ಯೆ ಇನ್ನು ಶೇ.60ಕ್ಕೆ ತಲುಪಲಿದೆ. 2026ರ ಜನವರಿ 1ರಿಂದಲೇ ಈ ಏರಿಕೆ ಪೂರ್ವಾ ನ್ವಯವಾಗಿ ಜಾರಿಯಾಗಲಿದೆ. ಈ ಏರಿಕೆಯ ಲಾಭ 50.46 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.27 ಲಕ್ಷ ನಿವೃತ್ತ ಉದ್ಯೋಗಿಗಳಿಗೆ ಲಾಭ ತರಲಿದೆ. ಜೊತೆಗೆ ಸರ್ಕಾರಕ್ಕೆ 6791 ಕೋಟಿ ರು. ಹೊರೆ ಬೀಳಲಿದೆ. ಬೆಲೆ ಏರಿಕೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಸರ್ಕಾರ ಪ್ರತಿ ವರ್ಷ ಎರಡು ಬಾರಿ ತುಟ್ಟಿ ಭತ್ಯೆ ಪ್ರಕಟಿಸುತ್ತದೆ.

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು ಸಾಮಾನ್ಯ ಜನಜೀವನದಲ್ಲಿ ಏರುಪೇರು ಕಂಡುಬಂದಿದೆ. ಯುಪಿಯಲ್ಲಿ 45 ಡಿ.ಸೆ. ದಾಖಲಾಗಿದ್ದರೆ, ರಾಜಸ್ಥಾನದ ಚುರುವಿನಲ್ಲಿ 42.8 ಡಿ.ಸೆ. ತಾಪಮಾನ ದಾಖಲಾಗಿದೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ 42.6 ಡಿ.ಸೆ, ಬಾರ್ಮೇಡ್ ಮತ್ತು ಕೋಟಾದಲ್ಲಿ ತಲಾ 42.2 ಡಿ.ಸೆ, ತಾಪಮಾನ ದಾಖಲಾಗಿದೆ. ಇನ್ನು ಉತ್ತರಪ್ರದೇಶದ ಬಂಡಾದಲ್ಲಿ ರಾಜ್ಯದಲ್ಲೇ ಅತಿಹೆಚ್ಚು 44.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಇನ್ನು ಪ್ರಯಾಗ್‌ರಾಜ್‌ನಲ್ಲಿ 43.2 ಡಿ.ಸೆ, ವಾರಣಾಸಿಯಲ್ಲಿ 43 ಡಿ.ಸೆ, ಒಡಿಶಾದಲ್ಲಿಯೂ ರಾಜ್ಯದ 15 ಸ್ಥಳಗಳಲ್ಲಿ 40 ಡಿ.ಸೆ. ದಾಟಿ ತಾಪಮಾನ ದಾಖಲಾಗಿದೆ. ತಿತ್ತಾಗಢದಲ್ಲಿ 42.7 ಡಿ. ಸೆ. ಜಾರ್ಸುಗುಡದಲ್ಲಿ 42.6 ಡಿ. ಸೆ, ದಾಖಲಾಗಿದೆ.

ಇದನ್ನೂ ಓದಿ: ಒಂದೇ ಗಂಟೆಯಲ್ಲಿ 7 ಸುಳ್ಳು: ಟ್ರಂಪ್ ವಿರುದ್ದ ಇಸ್ರೇಲ್ ಇರಾನ್ ಎರಡೂ ದೇಶಗಳ ಆಕ್ರೋಶ